ಕಾವೇರಿ ವಿವಾದ: ಕರ್ನಾಟಕಕ್ಕೆ ಮತ್ತೆ ಶಾಕ್​​ ಕೊಟ್ಟ CWRC; ತಮಿಳುನಾಡಿಗೆ ಮುಂದಿನ 15ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಮತ್ತೆ ಆಘಾತ ನೀಡಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಶಿಫಾರಸು ಮಾಡಿದೆ. ರಾಜ್ಯದಲ್ಲಿ ಬರಸ್ಥಿತಿ ಇರುವಾಗ ನೀರು ಬಿಡಲು ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಸಿವ ಸಂಬಂಧ ಈ ಹಿಂದೆ CWMA ನೀಡಿದ್ದ ಆದೇಶವನ್ನು ಸಂಕಷ್ಟದ ಸಮಯದಲ್ಲಿಯೂ ಕರ್ನಾಟಕ ಸರ್ಕಾರ ಪಾಲನೆ ಮಾಡಿದೆ. 15 ದಿನಗಳಲ್ಲಿ 4.5 ಟಿಎಂಸಿ ನೀರು ಹರಿಸುವಂತೆ ತಿಳಿಸಿದ್ದ ಹಿನ್ನೆಲೆ ಕಳೆದ 15 ದಿನಗಳಲ್ಲಿ ಅದಕ್ಕಿಂತಲೂ ಹೆಚ್ಚು ನೀರು ಹರಿಸಲಾಗಿದೆ.

ಕಾವೇರಿ ವಿವಾದ: ಕರ್ನಾಟಕಕ್ಕೆ ಮತ್ತೆ ಶಾಕ್​​ ಕೊಟ್ಟ CWRC; ತಮಿಳುನಾಡಿಗೆ ಮುಂದಿನ 15ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ
Image Credit source: CwmaDelhi X Account
Edited By:

Updated on: Aug 11, 2026 | 3:20 PM

ಮುಖ್ಯಾಂಶಗಳು

  • ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್​​ ಕೊಟ್ಟ CWRC
  • ತಮಿಳುನಾಡಿಗೆ ಮುಂದಿನ 15 ದಿನ ನೀರು ಹರಿಸುವಂತೆ ಆದೇಶ
  • ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ

ಬೆಂಗಳೂರು, ಆಗಸ್ಟ್​​ 11: ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ಕರ್ನಾಟಕಕ್ಕೆ ಶಾಕ್​​ ನೀಡಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರನ್ನು ನೆರೆ ರಾಜ್ಯ ತಮಿಳುನಾಡಿಗೆ ಹರಿಸುವಂತೆ ಶಿಫಾರಸ್ಸು ಮಾಡಿದೆ. ಇಂದು ನಡೆದಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, CWRC ಶಿಫಾರಸು ಹಿನ್ನೆಲೆ ಮಧ್ಯಾಹ್ನದ ಬಳಿಕ ದೆಹಲಿಯಲ್ಲಿ CWMA ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಂತಿಮ ಆದೇಶ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೇ ತೀವ್ರ ಬರಸ್ಥಿತಿಯ ನಡುವೆ ಈ ಹಿಂದೆ ಕೂಡ ನೀರು ಹರಿಸಲು CWMA ಆದೇಶ ನೀಡಿತ್ತು ಎಂಬುದಿಲ್ಲಿ ಗಮನಾರ್ಹ.

ರಾಜ್ಯದ ಅಧಿಕಾರಿಗಳಿಂದ ತೀವ್ರ ಅಸಮಾಧಾನ

ದೆಹಲಿಯಲ್ಲಿ ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ‌ ಸಭೆಯ ತೀರ್ಮಾನ ಸಂಬಂಧ ರಾಜ್ಯದ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ್ಕದಲ್ಲಿಯೇ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಇಲ್ಲಿಯೇ ಸಂಕಷ್ಟದ ಸ್ಥಿತಿಯಲ್ಲಿ ಜನರಿರುವಾಗ ನಿತ್ಯ 1 ಟಿಎಂಸಿ ನೀರು ಹರಿಸಿ ಅಂದರೆ ಹೇಗೆ? ಇಷ್ಟು ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಅಸಮಧಾನ ಹೊರಹಾಕಿರುವ ಪ್ರಸಂಗ ನಡೆದಿದೆ.

ಇದನ್ನೂ ಓದಿ:  ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ಕರ್ನಾಟಕದ ವಾದ ಏನು?

ಕರ್ನಾಟಕದ ನಾಲ್ಕು ಕಾವೇರಿ ಜಲಾಶಯಗಳಿಗೆ ಒಳಹರಿವು 77.74 TMC ಮಾತ್ರವಿದ್ದು, ಇದು 30 ವರ್ಷಗಳ ಸರಾಸರಿಗಿಂತ ಶೇ.47ರಷ್ಟು ಕಡಿಮೆ. ಬಿಳಿಗುಂಡ್ಲುವಿನಲ್ಲಿ ಆಗಸ್ಟ್ 10ರ ವರೆಗೆ 86,942 ಕ್ಯೂಸೆಕ್ ನೀರು ಹರಿದುಬಂದಿದ್ದು, ನಿಗದಿತ 52,500 ಕ್ಯೂಸೆಕ್‌ಗಿಂತ ಹೆಚ್ಚಾಗಿದೆ. ಮಳೆ ಕೊರತೆ ಮತ್ತು ಒಳಹರಿವಿನ ಅನಿಶ್ಚಿತತೆಯಿಂದಾಗಿ ಮುಂದೆ ಹೆಚ್ಚುವರಿ ನೀರು ಬಿಡಲು ಸಾಧ್ಯವಿಲ್ಲ. ಕುಡಿಯುವ ನೀರು, ಅಗತ್ಯ ಬಳಕೆ ಮತ್ತು ಕೃಷಿಗಾಗಿ ಲಭ್ಯವಿರುವ ಜಲಸಂಗ್ರಹವನ್ನು ಸಂರಕ್ಷಿಸಬೇಕಾಗಿದೆ. ನೀರು ಹಂಚಿಕೆ ವೇಳೆ ಕಠಿಣ ಪ್ರಮಾಣಾನುಪಾತದ ಸೂತ್ರಕ್ಕಿಂತ ವಾಸ್ತವಿಕ ಮಳೆ, ಒಳಹರಿವು ಮತ್ತು ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಬೇಕು. ಜಲಾನಯನ ಪ್ರದೇಶದ ಸಂಕಷ್ಟವನ್ನು LCA ವರೆಗೆ ಸಮಗ್ರವಾಗಿ ಮೌಲ್ಯಮಾಪನ ಮಾಡಬೇಕು ಮತ್ತು ಸ್ವತಂತ್ರ ದೈನಂದಿನ ದತ್ತಾಂಶ/ಗೇಜಿಂಗ್ ಕೇಂದ್ರಗಳ ಆಧಾರದಲ್ಲಿ ನೀರಿನ ಲೆಕ್ಕಾಚಾರ ನಡೆಸಬೇಕು. ಪ್ರಸ್ತುತ ಹೆಚ್ಚುವರಿ ನೀರು ಬಿಡುಗಡೆ ಕುರಿತು ನಿರ್ಧಾರ ಕೈಗೊಳ್ಳದೆ, ಮುಂಗಾರು ಪರಿಸ್ಥಿತಿ ಮತ್ತು ಜಲಾಶಯಗಳ ಮಟ್ಟವನ್ನು ಗಮನಿಸಿ ನಂತರ ಮರುಪರಿಶೀಲಿಸಬೇಕು ಎಂದು ಕರ್ನಾಟಕ ವಾದಿಸಿತ್ತು.

ತಮಿಳುನಾಡು ವಾದ ಹೇಗಿತ್ತು?

ಜುಲೈ 29ರಿಂದ ಆ.12ರವರೆಗೆ 3,500 ಕ್ಯೂಸೆಕ್ ನೀರು ಬಿಡುವ ಹಿಂದಿನ ನಿರ್ದೇಶನ ಪರಿಷ್ಕರಿಸಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ. ಕೆಆರ್​​​ಎಸ್​ ಜಲಾಶಯ & ಕಬಿನಿ ಜಲಾಶಯದಿಂದ ನೀರು ಬಿಡುವ ಮೂಲಕ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿನ ಪಾಲು ತಲುಪುವಂತೆ ಮಾಡಬೇಕು. ಆಗಸ್ಟ್ 12ರ ವೇಳೆಗೆ ಕರ್ನಾಟಕ ಬಿಡಬೇಕಾದ 21.357 TMC ನೀರು ಬಾಕಿ ಉಳಿಯಲಿದೆ. ಆಗಸ್ಟ್ 13ರಿಂದ 31ರವರೆಗೆ ಪ್ರಮಾಣಾನುಪಾತದಂತೆ ನೀಡಬೇಕಿರುವ 15.278 ಟಿಎಂಸಿ ನೀರಿನ ಜೊತೆಗೆ ಬಾಕಿಯನ್ನೂ ಬಿಡಬೇಕು. ಆಗಸ್ಟ್ ಅಂತ್ಯದ ವೇಳೆಗೆ ಬಿಳಿಗುಂಡ್ಲುವಿನಲ್ಲಿ 36.472 TMC ಅಥವಾ ಸುಮಾರು 37 TMC ನೀರು ಖಚಿತಪಡಿಸಬೇಕು ಎಂದು ತಮಿಳುನಾಡು ವಾದಿಸಿತ್ತು.

ಮೇಲ್ಮನವಿ ಸಲ್ಲಿಸಲು ಕರ್ನಾಟಕ ತೀರ್ಮಾನ

Cauvery Water Dispute: ಕಾವೇರಿ ನದಿ ನೀರು ಬಿಡಲು CWRC ಆದೇಶ, ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ!

ತಮಿಳುನಾಡಿಗೆ ಮತ್ತೆ ನೀರು ಬಿಡಲು CWRC ಶಿಫಾರಸು ಹಿನ್ನೆಲೆ ಇಂದು ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರದ ತೀರ್ಮಾನಿಸಿದೆ. ಕರ್ನಾಟಕ ರಾಜ್ಯಕ್ಕೆ ಮತ್ತೆ ಮುಂಗಾರು ಮಳೆ ಬರಲು ಸಾಧ್ಯವಿಲ್ಲ. ಈ ತಿಂಗಳಲ್ಲಿ ಅಲ್ಪ ಪ್ರಮಾಣದ ಮಳೆ ಆಗುವ ನಿರೀಕ್ಷೆ ಇದೆ. ಆದರೆ ತಮಿಳುನಾಡಿಗೆ ಮತ್ತೆ ಹಿಂಗಾರು ಮಳೆ ಬರಲಿದೆ. ತಮಿಳುನಾಡಿಗೆ ನೀರು ಹರಿಸಿದ್ರೆ ನಮ್ಮ ವ್ಯವಸಾಯಕ್ಕೆ ನೀರು ಇರಲ್ಲ. ಹೀಗಾಗಿ 12 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಮೇಲ್ಮನವಿ ಸಲ್ಲಿಸಿ ವಾದ ಮಂಡಿಸಲಿರುವ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:16 pm, Tue, 11 August 26

Loading...
Unable to load recommendations.
Follow Us