ಚಾಮರಾಜನಗರದಲ್ಲಿ ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದ ಕೃಷಿ ಸಚಿವರ ವಿರುದ್ಧ ರೈತರ ಆಕ್ರೋಶ
ಜಿಲ್ಲೆಯಲ್ಲಿ ನಾಲ್ಕು ಬಿತ್ತನೆ ಬೀಜಗಳನ್ನು ಮಾತ್ರ ಸಬ್ಸಿಡಿ ಮೂಲಕ ನೀಡಲಾಗುತ್ತಿದ್ದು, ಉಳಿದ ಬೆಳೆಗಳನ್ನು ಖಾಸಗಿಯವರಿಗೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಇದೆ. ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಬಿಟ್ಟು ರೈತರೊಂದಿಗೆ ನೇರವಾಗಿ ಮಾತುಕತೆ ಮಾಡಿ ಜಿಲ್ಲೆಯ ರೈತರಿಗೆ ಬೇಕಾದ ಬೆಳೆಗಳ ಬಗ್ಗೆ ಚರ್ಚಿಸಬೇಕಾಗಿತ್ತು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಚಾಮರಾಜನಗರ: ಗಾಯದ ಮೇಲೆ ಬರೆ ಎಳೆದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈ ಕೊಟ್ಟಿದೆ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿರುವುದಿಂದ ಶೇಕಡ 39ರಷ್ಟು ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಮುಂಗಾರು ಮಳೆ ನಂಬಿ ಪೂರ್ವ ಮುಂಗಾರಿಗೆ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಲಾಂಭಿಸಿವೆ. ಸರ್ಕಾರದಿಂದ ಬೆರಳಣಿಕೆಯಷ್ಟು ಬಿತ್ತನೆ ಬೀಜ ನೀಡಿ, ರಸಗೊಬ್ಬರದ ಬೆಲೆ ಗಗನಕ್ಕೇ ಏರಿಸಿರುವುದು ರೈತಾಪಿ ವರ್ಗದಲ್ಲಿ ನಿರಾಶೆ ಮೂಡಿಸಿದೆ. ಸದ್ಯ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಹೇಳಿರುವ ಮಾತು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದಂತೆ ಕೃಷಿ ಸಚಿವ ಬಿ.ಸಿ ಪಾಟೀಲ್ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೇ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಕೃಷಿ ಸಚಿವ ಬಿ.ಸಿ ಪಾಟೀಲ್ ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರ, ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಯಂತೆ ಇಲ್ಲಿಯವರೆಗೆ 238.3 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. ಆದರೆ ಈವರೆಗೆ 194.4 ಮಿಲಿ ಮೀಟರ್ ಮಳೆಯಾಗಿದ್ದು, ಶೇಕಡಾ 18ರಷ್ಟು ಮಳೆಯ ಕೊರತೆ ಇದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಮಳೆಗೆ ಇಲ್ಲಿಯವರೆಗೆ 950 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳಾದ ಭತ್ತ, ಸ್ಥಳೀಯ ಜೋಳ, ರಾಗಿ, ಸಜ್ಜೆ, ತೃಣಮೂಲ ಧಾನ್ಯಗಳ ಬಿತ್ತನೆ ಕಾರ್ಯ ನಡೆಯಬೇಕಾಗಿತ್ತು. ಆದರೆ ಈಗ 424 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
ಇನ್ನೂ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಡೆ ಸೇರಿದಂತೆ ದ್ವಿದಳ ಧಾನ್ಯಗಳನ್ನ 22 ಸಾವಿರದ 630 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ 7979 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದ್ದು, 10868 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಬಾಕಿ ಉಳಿದಿದೆ. ಪೂರ್ವ ಮುಂಗಾರಿಲ್ಲಿ ಎಣ್ಣೆಕಾಳುಗಳಾದ ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹುಚ್ಚೇಳು ಬೆಳೆಗಳನ್ನು 19971 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇನ್ನೂ 5890 ಹೆಕ್ಟೇರ್ ಪ್ರದೇಶದಲ್ಲಿ ಪೂರ್ವ ಮುಂಗಾರು ಕೊರತೆಯಿಂದಾಗಿ ಬಿತ್ತನೆ ಕಾರ್ಯವಾಗಿಲ್ಲ.
ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ತಂಬಾಕು ಬೆಳೆಗಳನ್ನು 4584 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದ್ದು, 6806 ಹೆಕ್ಟೇರ್ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಬಿತ್ತನೆ ಮಾಡಲಾಗಿಲ್ಲ. ಜಿಲ್ಲೆಯಲ್ಲಿ 3235 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದ್ದು, ಇಲ್ಲಿಯವರೆಗೆ 2545 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಜಿಲ್ಲೆಯ 126000 ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ಬೇಕಾಗುವ 25197 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಇವುಗಳ ಪೈಕಿ 12990 ಮೆಟ್ರಿಕ್ ಟನ್ ಗೊಬ್ಬರ ಮಾರಾಟ ಆಗಿವಾಗಿದೆ. ಇನ್ನೂ 12206 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿನಲ್ಲಿ ಉಳಿಕೆಯಾಗಿದೆ. ಜಿಲ್ಲೆಯಲ್ಲಿ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಕೃಷಿ ಸಚಿವರ ಈ ಹೇಳಿಕೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ 14 ಬಿತ್ತನೆ ಬೀಜಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ರೈತರಿಗೆ ಬೇಕಾಗುವ ಬೀಜಗಳನ್ನು ನೀಡಲಾಗುತ್ತಿದೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ರೈತರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶೇಕಡ 39ರಷ್ಟು ಕಡಿಮೆಯಾಗಿದೆ. ಗೊಬ್ಬರದ ಸಮಸ್ಯೆ ಇಲ್ಲದೇ ಇದ್ದರೂ ಗೊಬ್ಬರದ ಬೆಲೆ ಗಗನಕ್ಕೆ ಏರಿದೆ. ಜಿಲ್ಲೆಯಲ್ಲಿ ನಾಲ್ಕು ಬಿತ್ತನೆ ಬೀಜಗಳನ್ನು ಮಾತ್ರ ಸಬ್ಸಿಡಿ ಮೂಲಕ ನೀಡಲಾಗುತ್ತಿದ್ದು, ಉಳಿದ ಬೆಳೆಗಳನ್ನು ಖಾಸಗಿಯವರಿಗೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಇದೆ. ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಬಿಟ್ಟು ರೈತರೊಂದಿಗೆ ನೇರವಾಗಿ ಮಾತುಕತೆ ಮಾಡಿ ಜಿಲ್ಲೆಯ ರೈತರಿಗೆ ಬೇಕಾದ ಬೆಳೆಗಳ ಬಗ್ಗೆ ಚರ್ಚಿಸಬೇಕಾಗಿತ್ತು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಟ್ಟಿನಲ್ಲಿ ಮುಂಗಾರು ಮಳೆ ಜತೆ ರೈತರ ಜೂಜಾಟ ಈ ಬಾರಿ ಕೂಡ ಜಿಲ್ಲೆಯಲ್ಲಿ ನಿಂತಿಲ್ಲ. 15 ದಿನಗಳಲ್ಲಿ ಮುಂಗಾರು ಬಾರದೇ ಇದ್ದರೆ ಮಳೆಯಾಶ್ರಿತ ಭೂಮಿ ಸಂಪೂರ್ಣವಾಗಿ ಪಾಳು ಬೀಳುವುದು ನಿಶ್ಚಿತವಾಗಿದ್ದು, ಮತ್ತೊಮ್ಮೆ ಚಾಮರಾಜನಗರ ಜಿಲ್ಲೆ ಬರಗಾಲಕ್ಕೆ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲವಾಗಿದೆ. ಕೊರೊನಾ ಸಂಕಷ್ಟದಲ್ಲಿ ವರುಣ ಕೂಡ ಕೈಕೊಡುತ್ತಿರುವುದು ಜಿಲ್ಲೆಯ ರೈತರಿಗೆ ಗಾಯಕ್ಕೆ ಮತ್ತೊಷ್ಟು ಉಪ್ಪು ಸುರಿದಂತೆ ಆಗಿದೆ.
ಇದನ್ನೂ ಓದಿ:
ಹಾವೇರಿಯಲ್ಲಿ ಕೃಷಿ ವಿಚಕ್ಷಣಾ ದಳದ ದಾಳಿ; ಎರಡು ಕೋಟಿ ಮೌಲ್ಯದ ಅನಧಿಕೃತ ಬಿತ್ತನೆ ಬೀಜ ಜಪ್ತಿ