
ಚಾಮರಾಜನಗರ, ಅಕ್ಟೋಬರ್ 04: ಮಾದಪ್ಪನ ಭಕ್ತರಿಗೆ ವಾಸ್ತವ್ಯದ ತೊಂದರೆಯಾಗಬಾರದು, ಜಾತ್ರಾ ಮಹೋತ್ಸವದಲ್ಲಿ ಸೇರುವ ಲಕ್ಷಾಂತರ ಭಕ್ತರಿಗೆ ಸುಸಜ್ಜಿತ ವಸತಿ ಕಲ್ಪಿಸಬೇಕೆಂಬ ಉದ್ದೇಶದಿಂದಲೇ ಬೃಹತ್ ವಜ್ರಮಲೆ ಭವನವನ್ನು ನಿರ್ಮಿಸಲಾಗಿತ್ತು. ಖುದ್ದು ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಭವನವನ್ನು ಅದ್ಧೂರಿಯಾಗಿ ಉದ್ಘಾಟಿಸಿದ್ದರು. ಆದರೆ ಕೋಟ್ಯಂತರ ರೂ ವೆಚ್ಚದ ಭವ್ಯ ಕಟ್ಟಡ ಉದ್ಘಾಟನೆಗೊಂಡು ತಿಂಗಳುಗಳೇ ಕಳೆದರೂ ಭಕ್ತರ ಉಪಯೋಗಕ್ಕೆ ಮಾತ್ರ ಲಭ್ಯವಾಗುತ್ತಿಲ್ಲ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ವತಿಯಿಂದ 69 ಕೋಟಿ ರೂ ವೆಚ್ಚದಲ್ಲಿ 5 ಅಂತಸ್ತಿನ, 376 ಕೊಠಡಿಯುಳ್ಳ ಬೃಹತ್ ವಜ್ರ ಮಲೆ ಭವನವನ್ನ ನಿರ್ಮಾಣ ಮಾಡಲಾಗಿದ್ದು, ಅಂದಿನ ಸಿಎಂ ಸಿದ್ದರಾಮಯ್ಯನವರೇ ಉದ್ಘಾಟಿಸಿದ್ದರು. ಆದರೆ ಈಗಲು ಭಕ್ತರ ಉಪಯೋಗಕ್ಕೆ ಮಾತ್ರ ಈ ವಜ್ರ ಮಲೆ ಭವನ ಲಭ್ಯವಾಗುತ್ತಿಲ್ಲ.
ಇದನ್ನೂ ಓದಿ: ಸಿಎಂ ಉದ್ಘಾಟಿಸಿದ್ರೂ ಬಳಕೆಯಾಗದ ಐದಂತಸ್ತಿನ ಭವನ: ಮಾದಪ್ಪನ ಭಕ್ತರ ಪಾಡು ಕೇಳೋರ್‍ಯಾರು?
ಅಮಾವಾಸ್ಯೆ ಜಾತ್ರಾ ಮಹೋತ್ಸವದ ವೇಳೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಂತವರಿಗೆ ತಂಗಲು ಕೊಠಡಿಗಳ ಸಮಸ್ಯೆ ಆಗಬಾರದು ಅಂತ ವಜ್ರಮಲೆ ನಿರ್ಮಾಣವಾದರೆ ಇನ್ನು ಪೀಠೋಪಕರಣಗಳು ಸರಿಯಾಗಿ ನಿರ್ಮಾಣವಾಗದ ಕಾರಣ ಇನ್ನು ಭಕ್ತರ ಉಪಯೋಗಕ್ಕೆ ಬರುತ್ತಿಲ್ಲ.
ಬರೋಬ್ಬರಿ 69 ಕೋಟಿ ರೂ ವೆಚ್ಚದಲ್ಲಿ ಈ ಭವನ ನಿರ್ಮಾಣ ಮಾಡಲಾಗಿದೆ. ಆದರೆ ಗುತ್ತಿಗೆದಾರ ಮಂಚ, ಕುರ್ಚಿ, ಕಪಾಟು ಮಾಡುವ ವೇಳೆ ತೇಗ ಅಥವಾ ಸಾಗ್ವಾನಿ ಮರವನ್ನ ಬಳಸದೆ ಬಿಳಿ ಮರವನ್ನ ಬಳಸಿದ್ದ. ಇದನ್ನ ಗಮನಿಸಿದ್ದ ಅಂದಿನ ಸಚಿವ ಕೆ ವೆಂಕಟೇಶ್ ಗುತ್ತಿಗೆದಾರನಿಗೆ ವಾರ್ನಿಂಗ್ ಕೊಟ್ಟು ಪುನಃ ಉತ್ತಮ ಮರದಿಂದ ಪೀಠೋಪಕರಣ ನಿರ್ಮಾಣ ಮಾಡಲು ಹೇಳಿದ್ದರು. ಹೆಚ್ಚು ಕಡಿಮೆ 6 ತಿಂಗಳು ಕಳೆದರೂ ಇನ್ನು ನಿಧಾನಗತಿಯಾಗಿ ಕಾರ್ಯ ನಡೆಯುತ್ತಿರುವ ಕಾರಣ ಅಮಾವಾಸ್ಯೆ ದಿನಗಳಲ್ಲಿ, ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬರುವ ಭಕ್ತಾಧಿಗಳಿಗೆ ಕೊಠಡಿ ಸಿಗದೆ ಅನಿವಾರ್ಯವಾಗಿ ಖಾಸಗಿ ಲಾಡ್ಜ್‌ಗಳು ಕೇಳಿದಷ್ಟು ದುಬಾರಿ ಹಣ ತೆತ್ತು ತಂಗಬೇಕಾದ ದುಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟ: ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರೂ ಮಾದಪ್ಪನ ಭಕ್ತರ ಬಳಕೆಗೆ ಸಿಗದ ವಜ್ರಮಲೆ ಭವನ
ಒಟ್ಟಿನಲ್ಲಿ, ಕೋಟಿ-ಕೋಟಿ ರೂಪಾಯಿ ಸಾರ್ವಜನಿಕರ ಹಣ ಸುರಿದು ಸುಸಜ್ಜಿತ ಕಟ್ಟಡ ನಿರ್ಮಿಸಿದರೂ, ಉದ್ಘಾಟನೆ ಮುಗಿದಿದ್ದರೂ, ಓರ್ವ ಗುತ್ತಿಗೆದಾರನ ಬೇಜವಾಬ್ದಾರಿತನ ಹಾಗೂ ಆಮೆಗತಿ ಕೆಲಸದಿಂದಾಗಿ ಭಕ್ತರಿಗೆ ಈ ವಜ್ರಮಲೆ ಭವನದ ಪ್ರಯೋಜನ ಸಿಗದಿರುವುದು ದುರಂತವೇ ಸರಿ. ಪ್ರಾಧಿಕಾರ ಇನ್ನಾದರೂ ಎಚ್ಚೆತ್ತು ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಭಕ್ತರ ಬಳಕೆಗೆ ಮುಕ್ತಗೊಳಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.