ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಧ್ವಜಾರೋಹಣ: ರಂಗೇರಿದ ರಾಜಕಾರಣ!

| Updated By: ಗಣಪತಿ ಶರ್ಮ

Updated on: Aug 15, 2024 | 2:47 PM

ಸ್ವಾತಂತ್ರ್ಯ ದಿನಾಚರಣೆಯಂದೇ ಚನ್ನಪಟ್ಟಣದ ರಾಜಕಾರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಳೆದೊಂದು ತಿಂಗಳಿನಿಂದ ಚನ್ನಪಟ್ಟಣದಲ್ಲಿ ಸುತ್ತಾಡುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಇಂದು ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಡಿಕೆ ಜೊತೆ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿದ್ದಾರೆ.

ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಧ್ವಜಾರೋಹಣ: ರಂಗೇರಿದ ರಾಜಕಾರಣ!
ಡಿಕೆ ಶಿವಕುಮಾರ್, ಸಿಪಿ ಯೋಗೇಶ್ವರ್
Follow us on

ರಾಮನಗರ, ಆಗಸ್ಟ್ 15: ದೇಶದೆಲ್ಲೆಡೆ ಇವತ್ತು ಸ್ವಾತಂತ್ರೋತ್ಸವದ ಸಂಭ್ರಮ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ 11ನೇ ಬಾರಿ ಧ್ವಜಾರೋಹಣ ಮಾಡಿದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ಮಾಡಿದರು. ವಿಶೇಷವಾಗಿ ಕಂಡಿದ್ದು ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ನೆರವೇರಿಸಿದ ಧ್ವಜಾರೋಹಣ.

ಅಕ್ಕ ಪಕ್ಕ ಕೂತು ಕುತೂಹಲ ಮೂಡಿಸಿದ ಡಿಕೆ, ಯೋಗೇಶ್ವರ್!

ಚನ್ನಪಟ್ಟಣದ ಇತಿಹಾಸದಲ್ಲೇ ಮೊದಲು ಎನ್ನುವಂತೆ ರಾಜ್ಯದ ಉಪಮುಖ್ಯಮಂತ್ರಿಯೊಬ್ಬರು ಇಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೇರವೇರಿಸಿದರು. ಬಳಿಕ ಪೊಲೀಸರ ವಿವಿಧ ತುಕಡಿಗಳಿಂದ, ವಿದ್ಯಾರ್ಥಿಗಳ ಪರೇಡ್ ನಡೆಯಿತು. ಡಿಸಿಎಂ ಡಿಕೆ ಗೌರವ ವಂದನೆ ಸ್ವೀಕರಿಸಿದರು.

ಬರೀ ಇಷ್ಟೇ ಆಗಲಿಲ್ಲ. ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಲವು ವಿಶೇಷತೆಗಳಿಗೆ, ರಾಜಕೀಯ ಪಟ್ಟುಗಳಿಗೆ ಸಾಕ್ಷಿಯಾಗಿದೆ.

ರಾಜಕಾರಣ ಮಾಡಲು ಬಂದಿಲ್ಲ ಎನ್ನುತ್ತಲೇ ಡಿಕೆ ದಾಳ

ಉಪಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣ ಅಖಾಡ ಈಗಾಗಲೇ ರಂಗೇರಿದೆ. ಒಂದೆಡೆ ಮೈತ್ರಿಗಳಾಗಿರುವ ಬಿಜೆಪಿ ಜೆಡಿಎಸ್ ಮಧ್ಯೆ ಟಿಕೆಟ್ ಫೈಟ್ ನಡೆಯುತ್ತಿದೆ. ಸಿಪಿಯೋಗೇಶ್ವರ್ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದ್ದಾರೆ. ಈ ಮಧ್ಯೆ ಇಂದು ಚನ್ನಪಟ್ಟಣದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ, ಸಿಪಿಯೋಗೇಶ್ವರ್ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಳ್ಳುವ ಮೂಲಕ ಕುತೂಹಲಕ್ಕೆ ಕಾರಣವಾಗಿದ್ದಾರೆ. ನಾನು ರಾಜಕಾರಣ ಮಾಡೋಕೆ ಬಂದಿಲ್ಲ ಎನ್ನುತ್ತಲೇ ದಾಳ ಉರುಳಿಸಿದ್ದಾರೆ.

ಇಷ್ಟೇ ಅಲ್ಲದೆ, ಚನ್ನಪಟ್ಟಣದ ಜನರನ್ನ ಅರ್ಧಕ್ಕೆ ಬಿಟ್ಟು ಹೋಗುವುದಿಲ್ಲ. ಇದು ಕೇವಲ ಧ್ವಜಾರೋಹಣ ಅಲ್ಲ, ಚನ್ನಪಟ್ಟಣದ ಆರೋಹಣ ಎಂದು ಡಿಕೆ ಬಣ್ಣಿಸಿದರು. ಚನ್ನಪಟ್ಟಣಕ್ಕೆ ಕೊಟ್ಟ ಕೊಡುಗೆಗಳನ್ನ ಉಲ್ಲೇಖಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಚನ್ನಪಟ್ಟಣ ನನಗೆ ಪ್ರಿಯವಾದ ಜಾಗ ಎನ್ನುತ್ತಲೇ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಗೆ ಮಾತಿನಲ್ಲೇ ಚುಚ್ಚಿದರು. ಅಷ್ಟೇ ಅಲ್ಲ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡಲು ಜನ ನಿರ್ಧರಿಸಿದ್ದಾರೆ ಎಂದರು.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಧ್ವಜಾರೋಹಣ, ಜಿಲ್ಲೆಯ ನಾನಾ ಕಡೆಗಳಲ್ಲಿ ಹೇಗಿತ್ತು ಸಂಭ್ರಮ

ಹೀಗೆ ಚನ್ನಪಟ್ಟಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ರಾಜಕಾರಣ ಮಾಡಲು ಬಂದಿಲ್ಲ ಎನ್ನುತ್ತಲೇ ಯಾರಿಗೆ ಏನು ಸಂದೇಶ ತಲುಪಿಸಬೇಕೋ ಅದನ್ನ ತಲುಪಿಸಿದರು. ಈ ಮಧ್ಯೆ ಡಿಕೆ ಮತ್ತು ಸಿಪಿಯೋಗೇಶ್ವರ್ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿತು. ಟಿಕೆಟ್ ಸಿಗದೇ ಇದ್ದರೆ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯೋಗೇಶ್ವರ್ ಸಜ್ಜಾಗಿದ್ದಾರೆ. ಈ ಮಧ್ಯೆ ಯೋಗೇಶ್ವರ್ ಕಾಂಗ್ರೆಸ್ ಸೇರ್ತಾರೆ ಎಂಬ ಚರ್ಚೆಗಳು ಹುಟ್ಟಿವೆ. ಹೀಗಾಗಿ ಇಬ್ಬರ ಮುಖಾಮುಖಿ ಕುತೂಹಲ ಹುಟ್ಟಿಸಿದೆ. ಅತ್ತ ಮಂಡ್ಯದಲ್ಲಿ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದ್ರೂ ಸ್ವಾಗತ ಎಂದಿದ್ದಾರೆ.

ಹೀಗೆ ಧ್ವಜಾರೋಹಣದ ಕಾರ್ಯಕ್ರಮದಲ್ಲಿಯೇ ಚನ್ನಪಟ್ಟಣ ಉಪಚುನಾವಣೆ ರಾಜಕಾರಣ ರಂಗೇರಿದೆ. ಕುಮಾರಸ್ವಾಮಿ ಈ ಬೆಳವಣಿಗೆಗೆ ಅದ್ಯಾವ ಪ್ರತಿಕ್ರಿಯೆ ಕೊಡುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ