ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಬರ್ಬರ ಹತ್ಯೆ: ಗೋಡಂಬಿ ತೋಟದಲ್ಲಿ ಅಟ್ಟಾಡಿಸಿ ಕತ್ತುಕೊಯ್ದ ಗಂಡ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿಯಲ್ಲಿ, ಪತ್ನಿಯನ್ನು ಗೋಡಂಬಿ ತೋಟಕ್ಕೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿದ ಪತಿ, ನಂತರ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಬೇರೊಬ್ಬ ಮಹಿಳೆಯೊಂದಿಗಿನ ಸಂಬಂಧವನ್ನು ಪತ್ನಿ ಪ್ರಶ್ನಿಸುತ್ತಿದ್ದ ಕಾರಣ ಕೊಲೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಮುಖ್ಯಾಂಶಗಳು
- ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಹತ್ಯೆ
- ಗೋಡಂಬಿ ತೋಟದಲ್ಲಿ ಅಟ್ಟಾಡಿಸಿ ಕತ್ತುಕೊಯ್ದ ಆರೋಪ
- ಹತ್ಯೆ ಬಳಿಕ ಪೊಲೀಸರಿಗೆ ಶರಣಾದ ಆರೋಪಿ
ಚಿಕ್ಕಬಳ್ಳಾಪುರ, ನವೆಂಬರ್ 6: ಪತ್ನಿಯನ್ನು ಗೋಡಂಬಿ ತೋಟಕ್ಕೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿದ ಪತಿ, ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿಯಲ್ಲಿ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ನಕ್ಕಲಹಳ್ಳಿಯ ಚಂದ್ರಶೇಖರ್ ಆರೋಪಿ. ಆತನ ಪತ್ನಿ ಪದ್ಮಾ ಮೃತ ಮಹಿಳೆ. ಪದ್ಮಾ ಅವರು ತಾತಹಳ್ಳಿಯವರಾಗಿದ್ದು, 14 ವರ್ಷಗಳ ಹಿಂದೆ ಚಂದ್ರಶೇಖರ್ ಜತೆ ವಿವಾಹವಾಗಿತ್ತು. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಸಂಬಂಧಿಕರ ತಿಥಿ ಕಾರ್ಯಕ್ಕೆ ಬಂದಿದ್ದ ದಂಪತಿ
ಪದ್ಮಾ ಅವರ ತವರು ಮನೆಯ ಸಂಬಂಧಿಯೊಬ್ಬರ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು ಇಬ್ಬರೂ ಗುರುವಾರ ತಾತಹಳ್ಳಿಗೆ ಆಗಮಿಸಿದ್ದರು. ಸಂಜೆಯಾಗುತ್ತಿದ್ದಂತೆ ಚಂದ್ರಶೇಖರ್ ಪತ್ನಿಯನ್ನು ಪುಸಲಾಯಿಸಿ, ಗೋಡಂಬಿ ತೋಟ ನೋಡಿಕೊಂಡು ಬರುವುದಾಗಿ ಕರೆದೊಯ್ದಿದ್ದಾನೆ. ತೋಟಕ್ಕೆ ಕರೆದೊಯ್ದ ಬಳಿಕ ಪದ್ಮಾ ಅವರನ್ನು ಅಟ್ಟಾಡಿಸಿ ಹಲ್ಲೆ ಮಾಡಿ ಕತ್ತುಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸರಿಗೆ ಶರಣಾದ ಆರೋಪಿ
ಘಟನೆ ಬಳಿಕ ಆರೋಪಿ ಚಂದ್ರಶೇಖರ್ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಬಳಿಕ ಅತ್ತೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ, ಪದ್ಮಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿ, ಅಂತ್ಯಸಂಸ್ಕಾರ ನಡೆಸುವಂತೆ ಹೇಳಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ?
ಚಂದ್ರಶೇಖರ್‌ಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಎಂದು ತಿಳಿದುಬಂದಿದೆ. ಈ ವಿಚಾರವನ್ನು ಪದ್ಮಾ ಪ್ರಶ್ನಿಸುತ್ತಿದ್ದರು ಹಾಗೂ ಈ ಕಾರಣಕ್ಕೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿಯೇ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಕುರಿತು ಚಿಕ್ಕಬಳ್ಳಾಪುರ ಎಸ್ಪಿ ಪದ್ಮಿನಿ ಸಾಹು ಮಾಹಿತಿ ನೀಡಿದ್ದಾರೆ.
14 ವರ್ಷಗಳ ದಾಂಪತ್ಯ ಮತ್ತು ಮೂವರು ಮಕ್ಕಳಿದ್ದರೂ, ಕೌಟುಂಬಿಕ ಕಲಹದ ನಡುವೆ ಪತ್ನಿಯ ಹತ್ಯೆಯಾಗಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




