ಚಿಕ್ಕಬಳ್ಳಾಪುರ: ಪಹಣಿ ಪಡೆದ 28 ಜೋಡಿ ಗ್ರಾಮಗಳ ರೈತರು; ದಶಕಗಳ ಕನಸು ನನಸು!
ಯಾರದ್ದೋ ಆಸ್ತಿ ಇನ್ಯಾರಿಗೋ ನೋಂದಣಿಯಾಗುವುದನ್ನು ತಪ್ಪಿಸಲು ಕಂದಾಯ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಾರ್ಯವನ್ನು ಮಾಡಲಾಗುತ್ತಿದ್ದು, ಇದರ ಜೊತೆ ಈಗ ಜೋಡಿ ಗ್ರಾಮಗಳ ರೈತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಚಿಕ್ಕಬಳ್ಳಾಪುರ, ಸೆ.20: ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ “ಜಿಲ್ಲೆಯ 28 ಜೋಡಿ ಗ್ರಾಮಗಳ ರೈತರಿಗೆ ಪಹಣಿ(R.T.C) ವಿತರಣಾ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ(Krishna Byre Gowda) ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಜೋಡಿ ಗ್ರಾಮಗಳಿಗೆ ಗೋಲ್ ನಕ್ಷೆ, ಟಿಪ್ಪಣಿ ಪುಸ್ತಕ, ಪ್ರಸ್ತುತ ಚಾಲ್ತಿಯಲ್ಲಿನ ಗ್ರಾಮ ನಕಾಶೆ ಸಿದ್ದಪಡಿಸಲು ಗ್ರಾಮಲೆಕ್ಕಾಧಿಕಾರಿಗಳು, ಭೂ ಮಾಪಕರು, ತಹಶೀಲ್ದಾರರು ಬಹಳ ಶ್ರಮವಹಿಸಿದ್ದಾರೆ. ಅವರ ಶ್ರಮದ ಫಲವಾಗಿ ಇಂದು ರೈತರಿಗೆ ಪಹಣಿ ಹಾಗೂ ಇತರ ಕಂದಾಯ ದಾಖಲೆಗಳು ಸಿಗುತ್ತಿವೆ ಎಂದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1954 ರಿಂದ ಜೋಡಿ ಗ್ರಾಮಗಳ ರೈತರಿಗೆ ಪಹಣಿ ಆಗದೆ ಸಮಸ್ಯೆ ಆಗಿತ್ತು. ದಶಕಗಳ ಕನಸು ಇಂದು ನನಸಾಗಿದೆ. ಜಿಲ್ಲೆಯಲ್ಲಿ 28 ಜೋಡಿ ಗ್ರಾಮಗಳ 12,503 ಎಕರೆ ಜಮೀನುಗಳು ಪಹಣಿಗಳ ಸಮಸ್ಯೆಯಲ್ಲಿ ಸಿಲುಕಿದ್ದವು. ಕಳೆದ ಒಂದು ವರ್ಷದಲ್ಲಿ ಈ ಸಮಸ್ಯೆಯನ್ನು ಕೈಗೆತ್ತಿಕೊಂಡು 5,812 ಸರ್ವೆ ನಂಬರುಗಳನ್ನು ಸೃಜಿಸಲಾಗಿದೆ. ಈವರೆಗೆ 1,830 ಸರ್ವೆ ನಂಬರುಗಳನ್ನು ಇಂಡೀಕರಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ರೈತರ ಸ್ವಂತ ಜಮೀನಿನ ಪಹಣಿ ಪತ್ರದಲ್ಲಿ ಸರಕಾರ ಎಂದು ಬದಲಾವಣೆ ಆರೋಪ; ದಶಕಗಳಿಂದ ಬಗೆಹರೆಯದ 118 ರೈತ ಕುಟುಂಬಗಳ ಗೋಳಾಟ
ಇನ್ನು ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ನಮ್ಮ ಸರ್ಕಾರ ಜಾರಿಗೆ ಬಂದ ನಂತರ ಕಂದಾಯ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಕಾರ್ಯಗಳು ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿನ ಕತಡಗಳನ್ನು ಡಿಜಿಟಲಿಕರಣ ಮಾಡುವ ಕಾರ್ಯವು ಪ್ರಗತಿಯಲ್ಲಿದೆ. ಈಗಾಗಲೇ 17 ಲಕ್ಷ ಪುಟಗಳ ದಾಖಲೆಯನ್ನು ಸ್ಕ್ಯಾನ್ ಮಾಡಲಾಗಿದ್ದು, ಒಂದೆರಡು ತಿಂಗಳುಗಳಲ್ಲಿ ದಾಖಲೆಗಳು ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ದೊರಕಲಿವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ