ಐದು ತಿಂಗಳುಗಳಿಂದ ಬಿಡುಗಡೆಯಾಗದ ಕ್ಷೀರಸಿರಿ ಯೋಜನೆ ಪ್ರೋತ್ಸಾಹಧನ: ಧರಣಿಗೆ ಮುಂದಾದ ರೈತರು
ಕರ್ನಾಟಕ ಸರ್ಕಾರದ ಕ್ಷೀರಸಿರಿ ಯೋಜನೆಯಡಿ ಹಾಲು ಉತ್ಪಾದಕರಿಗೆ ನೀಡಬೇಕಾದ 600 ಕೋಟಿ ರೂ. ಪ್ರೋತ್ಸಾಹಧನ ಕಳೆದ ಐದು ತಿಂಗಳುಗಳಿಂದ ಬಾಕಿ ಉಳಿದಿದೆ. ಇದರಿಂದಾಗಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿಭಟನೆಗೆ ಸಿದ್ಧಗೊಂಡಿದ್ದಾರೆ. ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡುವ ಯೋಜನೆಯು ಕಾರ್ಯಸಾಧ್ಯವಾಗದೆ ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ.

ಚಿಕ್ಕಬಳ್ಳಾಪುರ, ಫೆಬ್ರವರಿ 08: ಕರ್ನಾಟಕದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ, ರಾಜ್ಯ ಸರ್ಕಾರ ಗುಣಮಟ್ಟದ ಲೀಟರ್ ಹಾಲಿಗೆ (milk) ತಲಾ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಕಳೆದ ಐದು ತಿಂಗಳುಗಳಿಂದ ರೈತರಿಗೆ ನೀಡಬೇಕಾದ ಕ್ಷೀರಸಿರಿ ಯೋಜನೆಯ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಇದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರು ಹೈನೋದ್ಯಮವನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಅಷ್ಟೋ ಇಷ್ಟೋ ಹನಿ ಹನಿ ನೀರನ್ನೆ ಬಳಸಿಕೊಂಡು ಇರುವ ಭೂಮಿಯಲ್ಲಿ ಹುಲ್ಲು ಬೆಳೆದು ಹಸುಗಳನ್ನು ಸಾಕುತ್ತಿದ್ದಾರೆ. ಆದರೆ ಒಂದು ಲೀಟರ್ ಹಾಲು ಉತ್ಪಾದಿಸಲು 30 ರೂ. ಖರ್ಚು ಬರುತ್ತೆ ಅನ್ನೊ ರೈತರ ವಾದಕ್ಕೆ, ರಾಜ್ಯ ಸರ್ಕಾರ ಕ್ಷೀರಸಿರಿ ಯೋಜನೆಯಡಿ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹಣವನ್ನು ಪ್ರೋತ್ಸಾಹಧನವಾಗಿ ನೀಡುತ್ತಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಾಲು ಉತ್ಪಾದನೆಯಲ್ಲಿ ಕುಂಠಿತ: ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರಾ ರೈತರು?
ಆದರೆ ಗ್ಯಾರಂಟಿ ಯೋಜನೆಗಳ ಪರಿಣಾಮ ಕಳೆದ ಐದು ತಿಂಗಳುಗಳಿಂದ ಕ್ಷೀರಸಿರಿ ಯೋಜನೆಯ 600 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಿಲ್ಲ. ಇದರಿಂದ ರೈತರು ತಕ್ಷಣ ಕ್ಷೀರಸಿರಿ ಯೋಜನೆಯ 600 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದ್ಯಂತ ಇರುವ 16 ಹಾಲು ಒಕ್ಕೂಟಗಳ ಪರವಾಗಿ, ರಾಜ್ಯ ಸರ್ಕಾರ ಪ್ರತಿ ತಿಂಗಳು 120 ಕೋಟಿ ರೂ. ಪ್ರೋತ್ಸಾಹಧನ ನೀಡುತ್ತಿದೆ. ಕಳೆದ 5 ತಿಂಗಳುಗಳ ಬಾಕಿ ಹಣ 600 ಕೋಟಿ ರೂಪಾಯಿಗಳಲ್ಲಿ ಇದುವರೆಗೂ 147 ಕೋಟಿ ರೂಪಾಯಿ ಮಾತ್ರ ಬಂದಿದೆ. ಇನ್ನೂಳಿದ ಹಣ ಮಂಜೂರು ಮಾಡಿಲ್ಲ. ಹೀಗಾಹಿ ರೈತರು ಇದೆ ತಿಂಗಳು 10ರಂದು ಬೆಂಗಳೂರಿನ ಕೆ.ಎಂ.ಎಪ್ ಡೈರಿ ಮುಂದೆ ಧರಣಿ ಮಾಡಲು ಸನ್ನದ್ದರಾಗಿದ್ದಾರೆ.
ಇದನ್ನೂ ಓದಿ: ಗೋಡೌನ್ನಲ್ಲಿ ಕೊಳೆಯುತ್ತಿದೆ ಕೋಮುಲ್ನ ಹಾಲಿನ ಪೌಡರ್ ಮತ್ತು ಬೆಣ್ಣೆ
ಹಾಲಿಗೆ ಪ್ರೋತ್ಸಾಹಧನ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ, ಸಕಾಲಕ್ಕೆ ಕ್ಷೀರಸಿರಿ ಯೋಜನೆಯ ಧನಸಹಾಯ ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ ರೈತರು ಆಕ್ರೋಶವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಕ್ಷೀರಸಿರಿ ಯೋಜನೆಯ ಪ್ರೋತ್ಸಾಹಧನ ಬಿಡುಗಡೆ ಮಾಡುತ್ತಾ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.