ಧರ್ಮದ ಬೇಲಿ ದಾಟಿದ ಭಕ್ತಿ: ಎನ್.ಆರ್. ಪುರದಲ್ಲಿ 18 ವರ್ಷಗಳಿಂದ ಗಣೇಶೋತ್ಸವ ಸಮಿತಿ ಮುನ್ನಡೆಸುತ್ತಿರುವ ಮುಸ್ಲಿಂ ಮಹಿಳೆ ಜುಬೇದಾ
ಚಿಕ್ಕಮಗಳೂರಿನ ಎನ್.ಆರ್. ಪುರದಲ್ಲಿ ಜುಬೇದಾ ಎಂಬ ಮುಸ್ಲಿಂ ಮಹಿಳೆ ಕಳೆದ 18 ವರ್ಷಗಳಿಂದ 'ಶ್ರೀ ವಿನಾಯಕ ಸೇವಾ ಸಮಿತಿ' ಅಧ್ಯಕ್ಷೆಯಾಗಿ ಗಣೇಶೋತ್ಸವವನ್ನು ಅತ್ಯಂತ ಶ್ರದ್ಧೆಯಿಂದ ಮುನ್ನಡೆಸುತ್ತಿದ್ದಾರೆ. ವಿಭಜಕ ಶಕ್ತಿಗಳ ನಡುವೆ ಮಾನವೀಯತೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಸಾರುತ್ತಿರುವ ಜುಬೇದಾ, ನಿರ್ಗತಿಕ ಮಹಿಳೆಯರಿಗೆ ಸಹಾಯ ಮಾಡುವ ಮೂಲಕವೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದು ಕರಾವಳಿ-ಮಲೆನಾಡಿನ ಸೌಹಾರ್ದ ಸಂಕೇತವಾಗಿದೆ.

ಚಿಕ್ಕಮಗಳೂರು, ಸೆ.15: ಜಾತೀಯತೆ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಶಕ್ತಿಗಳು ಕ್ರಿಯಾಶೀಲವಾಗಿರುವ ಪ್ರಸ್ತುತ ದಿನಗಳಲ್ಲಿ, ಕರಾವಳಿ-ಮಲೆನಾಡಿನ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ (ನರಸಿಂಹರಾಜಪುರ) ಪಟ್ಟಣದಲ್ಲಿ ಸಾಮರಸ್ಯದ ಅಪೂರ್ವ ಪರಿಮಳ ಬೀರುತ್ತಿದೆ. ಇಲ್ಲಿನ ಮುಸ್ಲಿಂ ಸಮುದಾಯದ ನಾಯಕಿ ಜುಬೇದಾ ಅವರು ಕಳೆದ 18 ವರ್ಷಗಳಿಂದ ಸತತವಾಗಿ ‘ಶ್ರೀ ವಿನಾಯಕ ಸೇವಾ ಸಮಿತಿ’ಯ ಅಧ್ಯಕ್ಷೆಯಾಗಿ ಗಣೇಶೋತ್ಸವವನ್ನು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಎನ್.ಆರ್. ಪುರ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆಯಾಗಿರುವ ಜುಬೇದಾ, ಇಲ್ಲಿನ ರಾಜೀವನಗರ ಶ್ರೀ ವಿನಾಯಕ ಸೇವಾ ಸಮಿತಿಯ ಚುಕ್ಕಾಣಿ ಹಿಡಿದಿದ್ದು, ಪ್ರತಿವರ್ಷ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಪ್ರತಿಷ್ಠಾಪಿಸುವ ಗಣೇಶೋತ್ಸವದ ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತಾರೆ.
ಜುಬೇದಾ ಅವರು ಸೇವಾ ಸಮಿತಿಯ ಸಾರಥಿಯಾಗಿ ಕೇವಲ ಹೆಸರಿಗಷ್ಟೇ ಸೀಮಿತವಾಗದೆ, ಉತ್ಸವದ ಪ್ರತಿಯೊಂದು ಹಂತದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಗಣಪತಿ ಪೆಂಡಾಲ್ ಆವರಣವನ್ನು ಸಗಣಿಯಿಂದ ಸಾರಿಸಿ, ವರ್ಣರಂಜಿತ ರಂಗೋಲಿಗಳಿಂದ ಅಲಂಕರಿಸಲು ಸ್ಥಳೀಯ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಾರೆ. ಯುವಕರ ಪಡೆ ಪೆಂಡಾಲ್ ನಿರ್ಮಾಣದಲ್ಲಿ ಸಾಥ್ ನೀಡುತ್ತದೆ.
ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಮೂರು ದಿನಗಳ ಕಾಲ ನಡೆಯುವ ಪ್ರತಿಯೊಂದು ಪೂಜಾ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರುವಂತೆ ನೋಡಿಕೊಂಡು, ವಿಸರ್ಜನಾ ಮಹೋತ್ಸವದವರೆಗೆ ಸಂಪೂರ್ಣ ಜವಾಬ್ದಾರಿ ಹೊರತ್ತಾರೆ. ಇಷ್ಟೇ ಅಲ್ಲದೆ, ಪಟ್ಟಣದ ಅಶ್ವತ್ಥಕಟ್ಟೆ ಬಳಿಯ ನಾಗರಬಾಣದಲ್ಲಿ ನಡೆಯುವ ಕಾರ್ತಿಕ ದೀಪೋತ್ಸವ ಸಮಿತಿಯ ಕಾರ್ಯದರ್ಶಿಯಾಗಿಯೂ ಅವರು ದೇವತಾ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣದ ಇತರ ಗಣೇಶ ಪೆಂಡಾಲ್‌ಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸುವ ಜುಬೇದಾ, ಹಿಂದೂ ಬಾಂಧವರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಪ್ರಸಾದ ಸ್ವೀಕರಿಸುತ್ತಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಕೇದಾರನಾಥ ದರ್ಶನ: ಹಿಮಾಲಯದ ಮಾದರಿ ಪೆಂಡಾಲ್‌ನಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ
“ನನಗೆ ಧರ್ಮಕ್ಕಿಂತ ಮಾನವೀಯತೆಯೇ ದೊಡ್ಡದು”: ಜುಬೇದಾ
ತಮ್ಮ ಈ ಸುದೀರ್ಘ ಸೌಹಾರ್ದ ಸೇವೆಯ ಕುರಿತು ಮಾತನಾಡಿದ ಜುಬೇದಾ, “ನನಗೆ ಮೊದಲ ಆದ್ಯತೆ ‘ನಾನೊಬ್ಬ ಭಾರತೀಯೆ’ ಎಂಬ ಭಾವನೆ, ಆ ನಂತರವಷ್ಟೇ ಧರ್ಮ ಮತ್ತು ಜಾತಿ. ನನ್ನ ಸ್ವಧರ್ಮದ ನಿಷ್ಠೆಯ ಜೊತೆಗೆ ಇತರ ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ನನಗೆ ಧರ್ಮಕ್ಕಿಂತ ಮಾನವೀಯತೆಯೇ ಅತ್ಯಂತ ಮೌಲ್ಯಯುತವಾದದ್ದು. ನಾವು ಹಿಂದೂ ಬಾಂಧವರ ಹಬ್ಬಗಳಲ್ಲಿ ಭಾಗಿಯಾದಾಗ, ಅವರು ನಮ್ಮ ಮುಸ್ಲಿಂ ಹಬ್ಬಗಳಲ್ಲಿ ಪ್ರೀತಿಯಿಂದ ಪಾಲ್ಗೊಳ್ಳುತ್ತಾರೆ. ಇಲ್ಲಿ ಎಲ್ಲ ಧರ್ಮದ ಜನರೂ ಪರಿಪೂರ್ಣ ಸಾಮರಸ್ಯದಿಂದ ಬಾಳುತ್ತಿದ್ದೇವೆ,” ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಜುಬೇದಾ ಅವರ ಸಾಮಾಜಿಕ ಮತ್ತು ಮಾನವೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಅಪಾರ ಗೌರವವಿದೆ. ಹೌಸಿಂಗ್ ಬೋರ್ಡ್ ನಿವಾಸಿ ಶಾಂತಮ್ಮ ಅವರ ಪ್ರಕಾರ, ಜುಬೇದಾ ಅವರು ಸಂಕಷ್ಟದಲ್ಲಿರುವ ಬಡ ಹಿಂದೂ ಮಹಿಳೆಯರಿಗೆ ‘ಧರ್ಮ ದೇವತೆ’ಯಂತೆ ನೆರವಾಗುತ್ತಾರೆ. ಹಬ್ಬಗಳ ಸಮಯದಲ್ಲಿ ಆರ್ಥಿಕ ಸಹಾಯ ನೀಡುವುದಲ್ಲದೆ, ಬಡ ಮಹಿಳೆಯರು ಸ್ವಾವಲಂಬಿಗಳಾಗಲು ಉಚಿತ ಹೊಲಿಗೆ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ. ನೇತಾಜಿ ಯುವಕ ಸಂಘದ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಸ್.ಇ. ಪರಮೇಶ್ವರ ಮಾತನಾಡಿ, “ಜುಬೇದಾ ಅವರು ಪ್ರತಿಯೊಬ್ಬರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾರೆ. ದೀಪಾವಳಿ ಹಬ್ಬದ ವೇಳೆ ತಮ್ಮ ಸ್ವಂತ ಮನೆಯನ್ನು ದೀಪಗಳಿಂದ ಶೃಂಗರಿಸುತ್ತಾರೆ. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷದ ಬೀಜ ಬಿತ್ತಲು ಯತ್ನಿಸುವವರು ಜುಬೇದಾ ಅವರ ಜೀವನವನ್ನು ನೋಡಿ ಪಾಠ ಕಲಿಯಬೇಕಿದೆ,” ಎಂದು ಪ್ರಶಂಸಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




