ಚಿಕ್ಕಮಗಳೂರಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ಕು ಮಕ್ಕಳು ಜಲಸಮಾಧಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಚಿಕ್ಕಮಗಳೂರಿನ ಅರಳುಗುಪ್ಪೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಕೆರೆಯಲ್ಲಿ ಆಟವಾಡಲು ಹೋಗಿದ್ದ ನಾಲ್ವರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಓರ್ವ ಬಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರಂತ ಪ್ರಕರಣ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಚಿಕ್ಕಮಗಳೂರು, ಮೇ 04: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿರುವಂತಹ (death) ಘಟನೆ ಚಿಕ್ಕಮಗಳೂರಿನ (Chikkamagaluru) ಅರಳುಗುಪ್ಪೆ ಗ್ರಾಮದ ಕಾರಂಜಿ ಕರೆಯಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ (9), ನಯಾಜ್(12), ಮದಿನಾ ಬಾನು(9), ಆರುನ್(8) ಮೃತರು. ಕೆರೆಯಲ್ಲಿ ಆಟವಾಡಲು ತೆರಳಿದ್ದಾಗ ದುರಂತ ಸಂಭವಿಸಿದೆ. ಅರ್ಮನ್ ಎಂಬಾತ ಬದುಕುಳಿದಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಮನೆಯ ಪಕ್ಕದಲ್ಲೊಂದು ಕೆರೆ ಇದೆ. ಬಿಸಿಲ ಝಳಕ್ಕೆ ಕೆರೆ ಸಂಪೂರ್ಣ ಖಾಲಿಯಾಗಿ ಮಧ್ಯದಲ್ಲಿ ನೀರು ಇದೆ. ನೀರಿಗೆ ಬಿದ್ದ 4 ವರ್ಷದ ಬಾಲಕಿಯ ರಕ್ಷಣೆ ಮಾಡಲು ನಾಲ್ವರು ಮಕ್ಕಳ ಹೋಗಿದ್ದಾರೆ. ಆದರೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 4 ವರ್ಷದ ಅರ್ಮನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮದಲಗಟ್ಟಿಯಲ್ಲಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತ ಬಾಲಕನನ್ನು ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದ ನಿವಾಸಿ 16 ವರ್ಷದ ಜೀವನ್ ಎಂದು ಗುರುತಿಸಲಾಗಿದೆ.
ತನ್ನ ಕುಟುಂಬದವರೊಂದಿಗೆ ಮದಲಗಟ್ಟಿಯ ಆಂಜನೇಯ ಸ್ವಾಮಿಯ ದರ್ಶನಕ್ಕೆಂದು ಬಂದಿದ್ದ ಜೀವನ್, ಈ ವೇಳೆ ನದಿಯಲ್ಲಿ ಈಜಲು ಇಳಿದಿದ್ದಾನೆ. ಈ ಸಂದರ್ಭದಲ್ಲಿ ಬಾಲಕ ನೀರಿನಲ್ಲಿ ಮುಳುಗುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ರಕ್ಷಿಸಲು ಪ್ರಯತ್ನಿಸಿದರಾದರೂ, ನದಿಯಲ್ಲಿ ನೀರಿನ ಆಳ ಹೆಚ್ಚಾಗಿದ್ದರಿಂದ ಬಾಲಕನನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಕೃಷಿಹೊಂಡದಲ್ಲಿ ಯುವಕರ ಶವ ಪತ್ತೆ: ಈಜಲು ಹೋಗಿ ಇಬ್ಬರು ಕಾರ್ಮಿಕರ ದುರಂತ ಅಂತ್ಯ?
ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಅಪಘಾತ: ಕೆರೆಗೆ ಬಿದ್ದು ಸವಾರ ಸಾವು
ನೆಲಮಂಗಲದ ಕೆರೆಯ ಏರಿಯ ತಿರುವಿನಲ್ಲಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾರೆ. ಕೂಲಿಪುರ ಗ್ರಾಮದ 25 ವರ್ಷದ ಪ್ರಶಾಂತ್ ಮೃತ ಯುವಕ. ಪ್ರಶಾಂತ್ ಅವರು ತಮ್ಮ ಕೆಟಿಎಂ (KTM) ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಕೆರೆಗೆ ಬಿದ್ದಿದ್ದಾರೆ. ಈ ದುರ್ಘಟನೆಯಲ್ಲಿ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:51 pm, Mon, 4 May 26




