ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲವೆಂದ ಸಿಟಿ ರವಿ: ತನಿಖೆಗೆ ಒತ್ತಾಯ
ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಬೆದರಿಕೆಗೆ ಹೆದರದ ಅವರು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಬೆದರಿಕೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ. ಬೆದರಿಕೆ ಪತ್ರದ ಬಗ್ಗೆ ತನಿಖೆಯಾಗಬೇಕು, ನಿರ್ಲಕ್ಷ್ಯವಾಗಬಾರದು ಎಂದು ಹೇಳಿದ್ದಾರೆ.
ಚಿಕ್ಕಮಗಳೂರು, ಜನವರಿ 11: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ (CT Ravi) ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ಮುಂದವರೆಯುತ್ತಿದೆ. ಹೊರತು ಮುಗಿಯುವಂತೆ ಕಾಣುತ್ತಿಲ್ಲ. ಈ ಮಧ್ಯೆ ಇಂದು ಸಿಟಿ ರವಿ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಜೀವ ಬೆದರಿಕೆ ಪತ್ರ ರವಾನಿಸಿದ್ದಾರೆ. ಸದ್ಯ ವಿಚಾರವಾಗಿ ಮಾತನಾಡಿರುವ ಸಿಟಿ ರವಿ, ಈ ಎಲ್ಲಾ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಮ್ಮ ಆಯಸ್ಸು ಬರೆಯುವವನು ಭಗವಂತ. ಆ ಬೆದರಿಕೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ. ತನಿಖೆಯಾಗಬೇಕು, ನಿರ್ಲಕ್ಷವಾಗಬಾರದು ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ವಿಜಯಪುರ ಪ್ರವಾಸದಲ್ಲಿದ್ದಾಗ ಕಾರ್ಯಾಲಯಕ್ಕೆ ಪತ್ರ ಬಂದಿದೆ ಎಂದು ಸಿಬ್ಬಂದಿಗಳು ತಿಳಿಸಿದರು. ಕಚೇರಿಯಿಂದ ಪತ್ರವನ್ನು ವಾಟ್ಸಪ್ ಮೂಲಕ ತರಿಸಿಕೊಂಡೆ. ತಕ್ಷಣ ಎಸ್ಪಿ ಅವರಿಗೆ ಫಾರ್ವರ್ಡ್ ಮಾಡಿ, ಕಾರ್ಯಾಲಯದಿಂದ ದೂರು ಸಲ್ಲಿಸಲು ತಿಳಿಸಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ಎಸ್ಪಿಯವರು ಈಗಾಗಲೇ ತಂಡ ರಚನೆ ಮಾಡಿ, ಎಲ್ಲಿಂದ ಪೋಸ್ಟ್ ಮಾಡಿದ್ದಾರೆ, ಯಾರ್ಯಾರು ಹೋಗಿದ್ದಾರೆ. ಸಿಸಿಟಿವಿ ನೋಡಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಕೇಸ್: ಸಿಟಿ ರವಿಗೆ ಬೆದರಿಕೆ ಪತ್ರ
ಅಧಿಕಾರ ಕೊಡುವವನು ಭಗವಂತ. ಜನರ ಮೂಲಕ ಅಧಿಕಾರ ಕೊಡಬೇಕು ಅಂದರೆ ಭಗವಂತನೇ ಕೊಡುತ್ತಾನೆ. ಬೆದರಿಕೆಯನ್ನ 35-40 ವರ್ಷದಿಂದಲೂ ಕೇಳಿಕೊಂಡೆ ಬಂದಿದ್ದೇನೆ. ಆ ಬೆದರಿಕೆಗಳಿಗೆ ಹೆದರಿ ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ಆಗಲ್ಲ ಎಂದಿದ್ದಾರೆ.
ಇಂತಹ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳಲು ಕೆಲವರು ಹೊಂಚು ಹಾಕುತ್ತಿರುತ್ತಾರೆ. ಆ ರೀತಿ ಯಾರಾದರೂ ಸಂದರ್ಭ ದುರುಪಯೋಗ ಪಡಿಸಿಕೊಳ್ಳಲು, ಹೊಂಚು ಹಾಕುತ್ತಿದ್ದಾರಾ ಎಂದು ಪೊಲೀಸ್ ಇಲಾಖೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧ ಸಿ.ಟಿ ರವಿ ವಾಗ್ದಾಳಿ
ಸಿ.ಟಿ ರವಿ ಒಬ್ಬ ಡ್ರಾಮಾ ಮಾಸ್ಟರ್ ಎಂದ್ದಿದ್ದ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರೇ ನೀವು ಉಪ ಮುಖ್ಯಮಂತ್ರಿ ಆಗಿದ್ದೀರಿ. ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ. ನೀವು ಮುಖ್ಯಮಂತ್ರಿಯಾಗುವ ಕನಸನ್ನು ಕಾಣುತ್ತಿದ್ದೀರಿ. ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿಕೊಳ್ಳಿ. ಯೋಗದಿಂದ ಮುಖ್ಯಮಂತ್ರಿಯಾಗಬಹುದು. ಯೋಗ್ಯತೆ ಇಲ್ಲ ಅಂದರೆ ಒಳ್ಳೆ ಮುಖ್ಯಮಂತ್ರಿ ಆಗುವುದಕ್ಕೆ ಆಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಹಲ್ಲೆ ಯತ್ನ ಆರೋಪ: ಸಿಐಡಿ ವಿಚಾರಣೆ ಬಳಿಕ ಸಿಟಿ ರವಿ ಹೇಳಿದ್ದಿಷ್ಟು
ನಿಮ್ಮ ವರ್ತನೆ ಸ್ಥಾನಕ್ಕೆ ತಕ್ಕ ವರ್ತನೆಯಲ್ಲ. ಏನ್ ಹೇಳಿದ್ರಿ ನೀವು ಬೆಳಗಾವಿಗೆ ಬಂದು ಬದುಕಿದ್ದೆ ಪುಣ್ಯ ಅಂದಿದ್ರಿ. ನೀವು ಗೂಂಡಗಳಾ, ನಾವು ಹೆದರಿಬಿಡಬೇಕಾ? ಸಭಾಪತಿ, ನ್ಯಾಯಾಲಯ ನಿರ್ಣಯ ಮಾಡಬೇಕು ಯಾರ್ಯಾರು ಏನೇನು ಹೇಳಿದರು ಅನ್ನೋದನ್ನ. ಡಿಕೆ ಶಿವಕುಮಾರ್ ಹೇಳಿದಂತೆ ಅಂತರಂಗ ಪರಮಾತ್ಮಕ್ಕೆ ಬಿಟ್ಟಿದ್ದು. ಅಂತರಂಗ ಪರಮಾತ್ಮನಿಗೆ ಎಲ್ಲಾ ಸಂಗತಿ ಗೊತ್ತಿರುತ್ತೆ. ಅಲ್ಲಿ ಯಾವುದನ್ನು ಮುಚ್ಚಿಡಲು ಆಗಲ್ಲ. ನಾನು ಕಾನೂನಿನ ಪ್ರಕಾರ ಹೋರಾಟ ಮಾಡುತ್ತೇನೆ. ಯಾರಿಗೂ ಹೆದರಿ ಕೂತುಕೊಳ್ಳುವುದಿಲ್ಲ. ಪ್ರೀತಿಗೆ ಬಗ್ಗುತ್ತೇನೆ ವಿಶ್ವಾಸಕ್ಕೆ ಜೀವಕ್ಕೆ ಜೀವ ಕೊಡುತ್ತೇವೆ. ನಾನು ವಿಶ್ವಾಸದ್ರೋಹಿ ಅಲ್ಲ, ನಾನು ನಂಬಿಸಿ ಕುತ್ತಿಗೆ ಕೊಯ್ದಿಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Sat, 11 January 25