ಸಂಗೊಳ್ಳಿ ರಾಯಣ್ಣ ಯಾವಾಗ ಬಿಜೆಪಿ ರಾಯಣ್ಣ ಆದ್ರು ಎಂದು ಸರ್ಕಾರವನ್ನ ಪ್ರಶ್ನಿಸಿದ ಕಾಫಿನಾಡಿನ ಜನ
ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇದೀಗ ಬಿಜೆಯ ರಾಯಣ್ಣ ಆಗಿದ್ದಾರೆ. ಇದನ್ನ ಕಾಂಗ್ರೆಸ್, ಜೆಡಿಎಸ್‍ನವರು ಹೇಳುತ್ತಿಲ್ಲ. ಇದನ್ನ ಹೇಳುತ್ತಿರೋದು ಜನ. ಸಂಗೊಳ್ಳಿ ರಾಯಣ್ಣ ಯಾವಾಗ ಬಿಜೆಪಿ ರಾಯಣ್ಣ ಆದರೂ ಎಂದು ಕಾಫಿನಾಡಿನ ಜನ ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ.

ಚಿಕ್ಕಮಗಳೂರು: ಇದು ಸ್ವಾತಂತ್ರ್ಯ ಹೋರಾಟಗಾರ, ಚೆನ್ನಮ್ಮಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಗರದ ದಂಟರಮಕ್ಕಿ ವೃತ್ತದಲ್ಲಿ ಸಿದ್ಧಗೊಂಡಿದೆ. ಇನ್ನೇನು ಒಂದೆರಡು ದಿನದಲ್ಲಿ ಉದ್ಘಾಟನೆಯೂ ಆಗಲಿದೆ. ಆದರೀಗ ಬಿಜೆಪಿಯವರು ಈ ರಾಯಣ್ಣನನ್ನ ಬಿಜೆಪಿ ರಾಯಣ್ಣ ಎಂದು ಪೇಟೆಂಟ್ ತೆಗೆದುಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ. ಹೌದು ಈ ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ದಂಟರಮಕ್ಕಿ ಜನ ಕೂಡ ನಾವು ಹಣ ಕೊಡುತ್ತೇವೆ, ಈ ಮೂಲಕ ಒಳ್ಳೆ ಪ್ರತಿಮೆ ಮಾಡೋಣ ಎಂದು ಮುಂದೆ ಬಂದಿದ್ದರು. ಆದರೆ ಸರ್ಕಾರ ಎಲ್ಲರೂ ಹಣ ಹಾಕೋದು ಬೇಡ. ಸರ್ಕಾರದ ಅನುದಾನದಲ್ಲಿ ಮಾಡೋಣ ಎಂದು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿತ್ತು.
ದೇವಸ್ಥಾನದಲ್ಲಿ ಮಾತುಕತೆ ಸಂದರ್ಭದಲ್ಲಿ ಪ್ರತಿಮೆಯಲ್ಲಿ ಬೇರೆ ಯಾರ ಹೆಸರೂ ಬೇಡ. ಶಾಸಕ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ಮಾಜಿ ಎಂ.ಎಲ್.ಸಿ. ಗಾಯತ್ರಿ ಶಾಂತೇಗೌಡ ಹೆಸರು ಮಾತ್ರ ಇರಲಿ ಎಂದು ತೀರ್ಮಾನವಾಗಿತ್ತು. ಆದರೆ ಇಂದು ನಾಮಫಲಕದಲ್ಲಿ ಸಿ.ಟಿ.ರವಿ, ಭೈರತಿ ಬಸವರಾಜ್ ಜೊತೆ ಗಾಯತ್ರಿ ಶಾಂತೇಗೌಡ ಅವರ ಹೆಸರಿಲ್ಲ. ಇದು ಸ್ಥಳಿಯರು, ಗಾಯತ್ರಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ನೀವು ಅವತ್ತು ಹೇಳಿದ್ದೇನು, ಇವತ್ತು ಮಾಡಿದ್ದೇನು ಎಂದು ಬಿಜೆಪಿಗರಿಗೆ ರಾಯಣ್ಣನ ಪ್ರತಿಮೆ ಬಳಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಸಾವರ್ಕರ್ ಆಯ್ತು ಈಗ ಸಂಗೊಳ್ಳಿ ರಾಯಣ್ಣ: ರಾಯಣ್ಣ ಭಾವಚಿತ್ರ ಹರಿದು ಕೃತ್ಯ, ಅಭಿಮಾನಿಗಳಿಂದ ಪ್ರತಿಭಟನೆ
ಇನ್ನೇನು ರಾಯಣ್ಣನ ಪ್ರತಿಮೆ ಉದ್ಘಾಟನೆಯ ಕೊನೆ ಕ್ಷಣದಲ್ಲಿ ವಿಷಯ ತಿಳಿದ ದಂಟರಮಕ್ಕಿ ನಿವಾಸಿಗಳು ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಪುಷ್ಪರಾಜ್‍ಗೆ ನಡುರಸ್ತೆಯಲ್ಲಿ ಮೈಚಳಿ ಬಿಡಿಸಿದ್ದಾರೆ. ಗ್ರಾಮದ ಪರವಾಗಿ ರಾಯಣ್ಣನ ಪ್ರತಿಮೆ ಮಾಡೋಣ ಎಂದಾಗ ಬೇಡ ಸರ್ಕಾರದ ಅನುದಾನವಿದೆ. ಅದರಲ್ಲಿ ಮಾಡೋಣ ಎಂದಿದ್ದರು. ಎಲ್ಲರೂ ಒಪ್ಪಿ ದೇವಸ್ಥಾನದಲ್ಲಿ ಸಿ.ಟಿ.ರವಿ, ಗಾಯತ್ರಿ ಶಾಂತೇಗೌಡ, ಭೈರತಿ ಬಸವರಾಜ್ ಮೂವರ ಹೆಸರು ಮಾತ್ರ ಇರಬೇಕೆಂದು ಒಪ್ಪಿಕೊಂಡಿದ್ದರು. ಆದರೆ ಇಂದು(ಮಾ.25) ಗಾಯತ್ರಿ ಶಾಂತೇಗೌಡರ ಹೆಸರು ಕೈಬಿಟ್ಟಿದ್ದಾರೆ.
ಗ್ರಾಮಕ್ಕೆ ಸಂಬಂಧವಿಲ್ಲದವರ ಹೆಸರನ್ನೆಲ್ಲ ಸೇರಿಸಿದ್ದು, ಕರಪತ್ರದಲ್ಲೂ, ಬ್ಯಾನರ್ನಲ್ಲಿಯೂ ಗಾಯತ್ರಿ ಹೆಸರಿಲ್ಲ. ಈ ಕಾರ್ಯಕ್ರಮ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಇರಬೇಕೆಂದು ನಮ್ಮ ಆಸೆ. ಆದರೆ ಬಿಜೆಪಿಯವರು ಚುನಾವಣೆ ಸಂದರ್ಭವಾಗಿರುವುದರಿಂದ ರಾಯಣ್ಣನನ್ನೂ ಪಕ್ಷಕ್ಕೆ ಸೀಮಿತವಾಗಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಯಣ್ಣ ಪ್ರತಿಮೆ ವಿವಾದ: ಸ್ವತಃ CM ಜವಾಬ್ದಾರಿ ಕೊಟ್ಟರೂ ಸ್ಥಳಕ್ಕೆ ಬಾರದ DC ಹಿರೇಮಠ್
ಒಟ್ಟಾರೆ, ಬಿಜೆಪಿಯ ಈ ಪ್ರತಿಮೆ ರಾಜಕಾರಣಕ್ಕೆ ಚಿಕ್ಕಮಗಳೂರು ನಗರದ ಜನ ಬಿಜೆಪಿ ಮುಖಂಡರ ಮೇಲೆ ಕಿಡಿಕಾರುತ್ತಿದ್ದಾರೆ. ಅವತ್ತು ನಾವೇ ಹಣ ಕೊಡ್ತೀವಿ ಎಂದು ಹೇಳಿದ್ರು ಬೇಡ ಎಂದು ಹೇಳಿ, ದೇವಸ್ಥಾನದಲ್ಲಿ ಒಂದು ಮಾತು ನೀಡಿ ಇಂದು ರಸ್ತೆ ಮಧ್ಯೆ ಮತ್ತೊಂದು ಕೆಲಸ ಮಾಡಿದ್ದಾರೆ. ಈ ರೀತಿಯ ರಾಜಕೀಯ ಏಕೆ ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಪ್ರತಿಮೆ ಕೆಳಗಡೆ ಪ್ರತಿಷ್ಠಾಪಿಸಲು ತಂದಿದ್ದ ನೇಮ್ ಬೋರ್ಡ್ ಕಲ್ಲನ್ನ ಹಾಕಲು ಬಿಡದೆ ವಾಪಸ್ ಕಳಿಸಿದ್ದಾರೆ.
ವರದಿ: ಅಶ್ವಿತ್ ಮಾವಿನಗುಣಿ ಟಿವಿ9 ಚಿಕ್ಕಮಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ