ಶಾಲೆಯಿಂದ ದೂರವಾದ ಮಕ್ಕಳಿಗೆ ಪತ್ರ ಬರೆದ ಶಿಕ್ಷಕಿ; ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಚಿಕ್ಕಮಗಳೂರಿನಲ್ಲಿ ಮೆಚ್ಚುಗೆ

ಶಾಲೆಯಿಂದ ದೂರವಾದ ಮಕ್ಕಳಿಗೆ ಪತ್ರ ಬರೆದ ಶಿಕ್ಷಕಿ; ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಚಿಕ್ಕಮಗಳೂರಿನಲ್ಲಿ ಮೆಚ್ಚುಗೆ
ಶಾಲೆಯಿಂದ ದೂರವಾದ ಮಕ್ಕಳಿಗೊಂದು ಪತ್ರ

ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಈ ಪತ್ರ ಬಂದಿದೆ. ಇದೇ ಶಾಲೆಯ ಶಿಕ್ಷಕಿ ಗೀತಾ ಎಂಬುವವರು ಎಲ್ಲಾ ವಿದ್ಯಾರ್ಥಿಗಳಿಗೂ ಪತ್ರ ಬರೆದು ಯೋಗಕ್ಷೇಮ ವಿಚಾರಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಜತೆಗಿನ ಶಾಲೆಯಲ್ಲಿನ ಹಳೆಯ ನೆನಪುಗಳನ್ನು ಸ್ಮರಿಸಿ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.

TV9kannada Web Team

| Edited By: preethi shettigar

Jun 06, 2021 | 11:22 AM

ಚಿಕ್ಕಮಗಳೂರು: ಕೊರೊನಾ ಸೋಂಕು ಶುರುವಾದಾಗಿನಿಂದಲೂ ಮಕ್ಕಳು ಶಾಲೆಯಿಂದ ದೂರವಾಗಿದ್ದಾರೆ. ಮೊದಲ ಅಲೆ ಮುಗಿಯಿತು ಇನ್ನೇನು ಶಾಲೆ ಆರಂಭವಾಗುತ್ತದೆ ಎಂದು ಕನಸು ಹೊತ್ತಿದ್ದ ಮಕ್ಕಳಿಗೆ ಕೊರೊನಾ ಎರಡನೇ ಅಲೆ ಮನೆಯಲ್ಲಿಯೇ ಇರುವಂತೆ ಮಾಡಿದೆ. ಪುಟ್ಟ ಪುಟ್ಟ ಮಕ್ಕಳಂತೂ ತಮ್ಮ ಸ್ನೇಹಿತರನ್ನು, ಅಚ್ಚುಮೆಚ್ಚಿನ ಶಿಕ್ಷಕರನ್ನು ನೆನೆದು ಬೇಸರದಿಂದಿದ್ದಾರೆ. ಆದರೆ ಮಲೆನಾಡಿನ ಶಿಕ್ಷಕರೊಬ್ಬರು ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದು, ಮನೆಯಲ್ಲಿ ಕುಳಿತಿರುವ ಪ್ರತಿಯೊಬ್ಬ ಮಕ್ಕಳಿಗೂ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದಲ್ಲದೇ ಯೋಗಕ್ಷೇಮವನ್ನು ಆ ಮೂಲಕ ವಿಚಾರಿಸಿದ್ದಾರೆ. ಈ ಪತ್ರ ಶಿಕ್ಷಕರ ಮತ್ತು ಮಕ್ಕಳ ಬಾಂಧವ್ಯವನ್ನು ಗಟ್ಟಿಗೊಳಿಸಿದೆ.

ಒಂದು ಕಡೆ ಕೂತಲ್ಲಿ ಕೂರದ ಮಕ್ಕಳು ಕೊರೊನಾದಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲೆಗೆ ಬರಲಾಗದ ಮಕ್ಕಳನ್ನು ನೆನೆದ ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಕಿಯೊಬ್ಬರು ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೀತಿಯ ಪತ್ರವೊಂದನ್ನು ಬರೆದು ಅವರಿಗೆ ಸರ್​ಪ್ರೈಸ್ ಕೊಟ್ಟಿದ್ದಾರೆ. ತಾವು ಮನೆಯಲ್ಲಿರಬೇಕಾದರೆ ತನ್ನ ಹೆಸರಿಗೆ ಪತ್ರ ಬರೆದ ಅಚ್ಚುಮೆಚ್ಚಿನ ಶಿಕ್ಷಕಿ ಬಗ್ಗೆ ಮಕ್ಕಳ ಸಂಭ್ರಮಕ್ಕೆ ಸದ್ಯ ಪಾರವೇ ಇಲ್ಲದಂತಾಗಿದೆ. ಇನ್ನು ಮಕ್ಕಳ ಖುಷಿಯನ್ನು ಕಂಡ ಪೋಷಕರು ಶಿಕ್ಷಕಿಗೆ ವಿಚಾರ ಮುಟ್ಟಿಸಿ ಮಕ್ಕಳ ಅಭಿಮಾನವನ್ನು ತಿಳಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಈ ಪತ್ರ ಬಂದಿದೆ. ಇದೇ ಶಾಲೆಯ ಶಿಕ್ಷಕಿ ಗೀತಾ ಎಂಬುವವರು ಎಲ್ಲಾ ವಿದ್ಯಾರ್ಥಿಗಳಿಗೂ ಪತ್ರ ಬರೆದು ಯೋಗಕ್ಷೇಮ ವಿಚಾರಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಜತೆಗಿನ ಶಾಲೆಯಲ್ಲಿನ ಹಳೆಯ ನೆನಪುಗಳನ್ನು ಸ್ಮರಿಸಿ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಒಂದು ವರ್ಷದಿಂದ ಶಾಲೆಯ ಬಾಗಿಲು ಹಾಕಿದ್ದರೂ, ಆಗಾಗ ತಾವು ಪಾಠ ಮಾಡಿ ಕಳಿಸುತ್ತಿರುವ ವಿಡಿಯೋ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಾನು ಬರೆದ ಪತ್ರವನ್ನು ಓದಿ ಮಕ್ಕಳು ಖುಷಿಯಾಗಿರುವುದನ್ನು ಕೇಳಿ ನನಗೂ ಸಂತೋಷವಾಗಿದೆ ಎಂದು ಶಿಕ್ಷಕಿ ಗೀತ ಸಂತಸ ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ ಕೇವಲ ಮಕ್ಕಳ ಯೋಗಕ್ಷೇಮವನ್ನು ಮಾತ್ರ ಕೇಳದೇ ಕೊರೊನಾದ ಬಗ್ಗೆಯೂ ಎಚ್ಚರ ವಹಿಸುವಂತೆ ಕಿವಿಮಾತು ಹೇಳಿದ್ದಾರೆ. ರಜೆ ಇರುವುದರಿಂದ ಹೊರಗಡೆ ಬಾವಿ, ಕೆರೆ, ದೂರದ ಸ್ಥಳಗಳಿಗೆ ಆಟವಾಡುವುದಕ್ಕೆ ಹೋಗದಂತೆ ಪತ್ರದಲ್ಲಿ ಹೇಳಿದ್ದಾರೆ. ಜತೆಗೆ ಮೊಬೈಲನ್ನು ಕೂಡ ಅಗತ್ಯಕ್ಕಿಂತ ಹೆಚ್ಚು ಬಳಸದಂತೆ ಮಕ್ಕಳಿಗೆ ತಿಳಿ ಹೇಳಿ ಪತ್ರ ಬರೆದಿದ್ದನ್ನು ಕಂಡು ಮಕ್ಕಳು ಓಕೆ ಮಿಸ್ ಎಂದಿದ್ದಾರೆ. ಅಲ್ಲದೇ ಪ್ರೀತಿಯಿಂದ ಮಿಸ್ ಬರೆದ ಪತ್ರವನ್ನು ಜೋಪಾನವಾಗಿ ಬೀರುವಿನಲ್ಲಿಟ್ಟು, ಶಿಕ್ಷಕಿಗೂ ಮಕ್ಕಳು ಪತ್ರ ಬರೆದು ಖುಷಿ ಪಟ್ಟಿದ್ದಾರೆ. ನಾವೆಲ್ಲಾ ಆರೋಗ್ಯವಾಗಿದ್ದೇವೆ, ನೀವು ಕೂಡ ಕ್ಷೇಮವಾಗಿರಿ ಮಿಸ್ ಎಂದು ಮಕ್ಕಳು ತಿಳಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

ಅಷ್ಟಕ್ಕೂ ಮಕ್ಕಳು ಹೀಗೆ ವಾಪಸ್ ಪತ್ರ ಬರೆಯಲು, ಇದೇ ಶಿಕ್ಷಕಿ ತಾನು ಬರೆದ ಪತ್ರದಲ್ಲಿ ಇನ್ನೊಂದು ಖಾಲಿ ಇನ್ಲ್ಯಾಂಡ್ ಲೆಟರ್(ಪತ್ರವನ್ನ)​ ಕಳುಹಿಸಿದ್ದರು. ಈಗ ಲಾಕ್​ಡೌನ್ ಇರುವುದರಿಮದ ಹೊರಗಡೆ ಹೋಗಿ ಲೆಟರ್ ತಗೊಂಡು ಪತ್ರ ಬರೆಯಲು ಸಾಧ್ಯವಿಲ್ಲ ಎಂದು ಪತ್ರದೊಳಗೆ ಪತ್ರಗಳನ್ನು ಹಾಕಿ ಬುದ್ಧಿವಂತಿಕೆ ಮೆರೆದಿದ್ದಾರೆ. ಸದ್ಯ ಒಬ್ಬೊಬ್ಬರೇ ಮಕ್ಕಳು ಪತ್ರಕ್ಕೆ ಉತ್ತರ ನೀಡುತ್ತಿದ್ದು, ಶಿಕ್ಷಕಿ ಗೀತಾಗೂ ಸಂತಸ ತಂದಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕಿಯ ಪ್ರೀತಿಯ ಪತ್ರ ಹೊಸ ಬಾಂಧವ್ಯವನ್ನು ಬೆಸೆದಿದೆ. ಮಕ್ಕಳ ಜೊತೆ ನಿಕಟ ಸಂಬಂಧವನ್ನ ಇಟ್ಟುಕೊಂಡು ಯಾರೂ ಕೂಡ ಶಿಕ್ಷಣದಿಂದ ವಿಮುಖರಾಗದಂತೆ ಮಾಡಲು ಇದು ದಾರಿಯಾದಂತಾಗಿದೆ. ಒಟ್ಟಿನಲ್ಲಿ ಕೊರೊನಾದಿಂದ ಶಾಲೆಯಿಂದ ದೂರ ಉಳಿದ ಪ್ರತಿಯೊಬ್ಬ ಮಕ್ಕಳಿಗೆ ಪತ್ರ ಬರೆದ ಶಿಕ್ಷಕಿಯ ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಸಾರಿಗೆ ಸಚಿವ ಲಕ್ಷ್ಮಣ್​ ಸವದಿಯವರಿಗೆ ಪತ್ರ ಬರೆದು ಬಿಎಂಟಿಸಿ ವಿರುದ್ಧ ದೂರು ಹೇಳಿದ ಹಿರಿಯ ನಾಗರಿಕ; ಕ್ರಮ ಕೈಗೊಳ್ಳುವಂತೆ ಮನವಿ

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಉಚಿತವಾಗಿ ನೀಡಲು ಒತ್ತಾಯ; ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

Follow us on

Related Stories

Most Read Stories

Click on your DTH Provider to Add TV9 Kannada