ಚೆಕ್, ದಾಖಲೆಗಳಿಗೆ ಸಹಿ ಹಾಕಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮುರುಘಾ ಶ್ರೀ
ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗದ ಮುರುಘಾ ಶ್ರೀ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಚಿತ್ರದುರ್ಗ: ಮಠದ ಶಾಲಾ ವಿದ್ಯಾರ್ಥಿನಿಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗದ ಮುರುಘಾ ಶ್ರೀ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು.. ಮಠದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಚೆಕ್, ದಾಖಲೆಗಳಿಗೆ ಸಹಿ ಹಾಕಲು ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಠದ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ವೇತನ ನೀಡಿವ ಸಲುವಾಗಿ ಚೆಕ್ಗಳಿಗೆ ಸಹಿ ಹಾಕಲು ಅನುಮತಿ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದು, ಜೈಲಿನಿಂದಲೇ ಚೆಕ್, ದಾಖಲೆಗೆ ಸಹಿ ಹಾಕಲು ಅನುಮತಿ ಕೋರಿದ್ದಾರೆ.
ಜೈಲಿನಿಂದಲೇ ಚೆಕ್, ದಾಖಲೆಗೆ ಸಹಿ ಹಾಕಲು ಅನುಮತಿ ಕೋರಿ ಮುರುಘಾ ಶರಣ ಪರ ವಕೀಲರು ಚಿತ್ರದುರ್ಗದ ಸೆಷನ್ ಕೋರ್ಟ್ಗೆ ಮನವಿ ಮಾಡಿದ್ದರು. ಆದ್ರೆ, ಕೋರ್ಟ್, ಅನುಮತಿ ನಿರಾಕರಿಸಿ ಸೆ.20ರಂದು ಆದೇಶ ಹೊರಡಿಸಿತ್ತು.
ಮುರುಘಾ ಮಠದಿಂದ ನಡೆಸಲಾಗುತ್ತಿರುವ ಎಸ್.ಜೆ.ಎಂ ವಿದ್ಯಾಪೀಠದ ಸುಮಾರು 5000 ನೌಕರರಿಗೆ ವೇತನ ನೀಡಲು ಚೆಕ್ಗೆ ಅಧ್ಯಕ್ಷರಾದ ಶಿವಮೂರ್ತಿ ಶರಣರ ಸಹಿ ಅಗತ್ಯವಾಗಿದೆ ಎಂದು ವಕೀಲರು ವಾದ ಮಂಡಿಸಿದ್ದರು.
ಇದನ್ನೂ ಓದಿ: ಜೈಲಿನಲ್ಲಿರುವ ಮುರುಘಾ ಶ್ರೀ: ಮರುಘಾ ಮಠದ ವಿದ್ಯಾಸಂಸ್ಥೆಯ ಸಿಬ್ಬಂದಿಗೆ ಸಂಬಳ ಇಲ್ಲದೆ ಪೀಕಲಾಟ!
ಇದಕ್ಕೆ ಪ್ರತಿಯಾಗಿ ಸರ್ಕಾರಿ ವಕೀಲರು ಆಕ್ಷೇಪಿಸಿ, ಕಾರಾಗೃಹದಲ್ಲಿವವರಿಗೆ ಸಹಿ ಮಾಡುವ ಅಧಿಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಶ್ರೀಮಠದ ಆಸ್ತಿ-ಪಾಸ್ತಿಗಳಿಗೆ ತೊಂದರೆಗಳಾಗುವ ಸಾಧ್ಯತೆಗಳು ಇರುತ್ತವೆ. ಈಗಾಗಲೇ ಪ್ರಭಾರಿ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಹೀಗಾಗಿ ಮುರುಘಾ ಶರಣರಿಗೆ ಸಹಿ ಹಾಕುವ ಅಧಿಕಾರ ಅಗತ್ಯವಿಲ್ಲ ಎಂದು ಪ್ರತಿವಾದ ಮಂಡಿಸಿದ್ದರು. ಅಂತಿಮವಾಗಿ ಕೋರ್ಟ್ ಚೆಕ್ ಸಹಿ ಮಾಡಲು ಶ್ರಿಗಳಿಗೆ ಅವಕಾಶ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮುರುಘಾ ಶರಣರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ವಿದ್ಯಾಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡಲು ಸಂಸ್ಥೆಯ ಅಧ್ಯಕ್ಷರಾಗಿರುವ ಮುರುಘಾ ಶ್ರೀ ಸಹಿ ಅಗತ್ಯವಾಗಿದೆ. ಆದ್ರೆ, ಮುರುಘಾ ಶ್ರೀ ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಇದ್ದಾರೆ. ಹೀಗಾಗಿ ಸಂಬಳವಿಲ್ಲದೆ ಮಠದ ಸಿಬ್ಬಂದಿ ಹಾಗೂ ಶಿಕ್ಷಕರು ಪರದಾಡುವಂತಾಗಿದೆ.
ಮುರುಘಾಶ್ರೀಗೆ ಸದ್ಯಕ್ಕೆ ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಚಿತ್ರದುರ್ಗ ಸೆಷನ್ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆದ್ದರಿಂದ ಮುರುಘಾ ಶ್ರೀಗಳ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
Published On - 5:44 pm, Sun, 25 September 22