AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ: IAS ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್ ಆದೇಶ

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ಆಡಳಿತದಲ್ಲಿ ನಡೆದಿದೆ ಎನ್ನಲಾದ ಬಟ್ಟೆ ಬ್ಯಾಗ್‌ ಖರೀದಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಜೆಡಿಎಸ್ ಮಾಜಿ ಶಾಸಕ ಸಾ.ರಾ.ಮಹೇಶ್ ಬಯಲಿಗೆ ಎಳೆದಿರುವ ಪ್ರಕರಣದಲ್ಲಿ ಇದೀಗ ಐಎಎಸ್ ಅಧಿಕಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ: IAS ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್ ಆದೇಶ
ಹೈಕೋರ್ಟ್​, ರೋಹಿಣಿ ಸಿಂಧೂರಿ
Ramesha M
| Edited By: |

Updated on:Apr 01, 2026 | 10:22 PM

Share

ಬೆಂಗಳೂರು, (ಏ 01): ಐಎಎಸ್ ಅಧಿಕಾರಿ ರೋಹಿಣಿ  ಸಿಂಧೂರಿ (Rohini Sindhuri) ವಿರುದ್ಧದ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್​ (Karnataka High Court) ಮಹತ್ವದ ಆದೇಶ ಹೊರಡಿಸಿದೆ. ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಲು ಅಧೀನ ಕಾರ್ಯದರ್ಶಿ, ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ಕ್ಯಾನ್ಸರ್, ಪ್ಲೇಗ್ ಇದ್ದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೇ ಬಿಟ್ಟರೆ ಪ್ರಜಾಸತ್ತಾತ್ಮಕ ಅಂಗಗಳನ್ನು ಅಸ್ಥಿರಗೊಳಿಸುತ್ತದೆ. ಭ್ರಷ್ಟಾಚಾರದ ಆರೋಪವಿದ್ದಾಗ ತನಿಖೆ ನಡೆಯದೇ ಸತ್ಯ ಬಹಿರಂಗವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ರೋಹಿಣಿ ಸಿಂಧೂರಿ ಅವರು ಮೈಸೂರು ಡಿಸಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಅನುಮತಿ ನಿರಾಕರಿಸಿತ್ತು. ಈ ಸಂಬಂಧ ದೂರುದಾರ ವಕೀಲ, ರವಿಚಂದ್ರೇಗೌಡ ಎನ್.ಆರ್ ಎನ್ನುವರು ಹೈಕೋರ್ಟ್​​​ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಇಂದು (ಏ 01) ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತನಿಖೆಗೆ ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮ ರದ್ದುಪಡಿಸಿದೆ. ಅಲ್ಲದೇ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ನಿರ್ದೇಶಿಸಿ ಆದೇಶ ಹೊರಡಿಸಿದೆ. ಇದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್​ಬ್ಯಾಕ್ ಅರೋಪ; ಅಮಾನತಿಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಆಗ್ರಹ

ಹಗರಣ ಬಯಲಿಗೆಳೆದಿದ್ದ ಜೆಡಿಎಸ್ ನಾಯಕ

ಅಂದಿನ ಜೆಡಿಎಸ್ ಶಾಸಕರಾಗಿದ್ದ ಸಾ.ರಾ.ಮಹೇಶ್ ಈ ಹಗರಣವನ್ನು ಬಯಲಿಗೆ ಎಳೆದಿದ್ದರು. ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್​ಗಳನ್ನು ಖರೀದಿಸಲಾಗಿತ್ತು ಎಂದು ಮಹೇಶ್ ದೂರಿದ್ದರು. ಚಿಲ್ಲರೆ ಮಾರುಕಟ್ಟೆಯಲ್ಲಿ 10ರಿಂದ 13ಗೆ ರೂಪಾಯಿಗೆ ಸಿಗುವ ಬ್ಯಾಗ್​ಗಳನ್ನು ಜಿಲ್ಲಾಧಿಕಾರಿ 52 ರೂ. ನೀಡಿ ಖರೀದಿಸಿದ್ದರು. ಇದರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮವಾಗಿದೆ ಎಂದು ಎಂದು ಸಾ.ರಾ.ಮಹೇಶ್ ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಅರೋಪ ಮಾಡಿದ್ದರು.

ಪ್ರಕರಣದ ಹಿನ್ನೆಲೆ

ಚಿಲ್ಲರೆ ಮಾರುಕಟ್ಟೆಯಲ್ಲಿ 10 ರಿಂದ 13 ರೂಪಾಯಿಗೆ ಸಿಗುತ್ತಿದ್ದ ಬಟ್ಟೆ ಬ್ಯಾಗ್ ಗಳನ್ನು 52 ರೂಪಾಯಿಗೆ ಖರೀದಿಸಲಾಗಿದೆ ಎಂದು ಶಾಸಕ ಸಾರಾ ಮಹೇಶ್‌ ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಆರೋಪ ಮಾಡಿದ್ದರು. ಕೈಮಗ್ಗ ಅಭಿವೃದ್ಧಿ ನಿಗಮವನ್ನು ಬಿಟ್ಟು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. 14.71 ಲಕ್ಷ ಬ್ಯಾಗ್ ಗಳ ಖರೀದಿಯಲ್ಲಿ ಸುಮಾರು 14 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್ಗಳನ್ನು ಖರೀದಿಸಲಾಗಿತ್ತು ಎಂದು ಶಾಸಕ ಸಾರಾ ಮಹೇಶ್ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಸಾರಾ ಮಹೇಶ್ ಆಗ್ರಹಿಸಿದಾಗ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:00 pm, Wed, 1 April 26

Follow Us