ನಿಗಮ ಮಂಡಳಿ ನಿರ್ದೇಶಕರು, ಸದಸ್ಯರ ನೇಮಕ ಗೊಂದಲಕ್ಕೆ ತೆರೆ ಎಳೆದ ಸಿಎಂ ಕಚೇರಿ
ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಿಗಳಿಗೆ 425 ರಿಂದ 428 ಮಂದಿ ನೂತನ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. ನವೆಂಬರ್ 11, 2026 ರಂದು ಪ್ರಕಟವಾದ ಆಯ್ಕೆ ಪ್ರಕ್ರಿಯೆ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ಹಲವು ಆಕ್ಷೇಪಗಳು ವ್ಯಕ್ತವಾಗಿವೆ. ಇನ್ನೊಂದೆಡೆ ಹಿಂದಿನ ಅವಧಿಯ ನಿರ್ದೇಶಕರು ಸ್ಥಾನದಲ್ಲಿ ಇರುವಾಗಲೇ ಹೊಸಬರ ನೇಮಕ ಮಾಡಿರುವುದು ಗೊಂದಲ ಸೃಷ್ಟಿಸಿದ್ದು, ಇದೀಗ ಈ ಎಲ್ಲಾ ಗೊಂದಲಗಳಿಗೆ ಸಿಎಂ ಕಚೇರಿ ಸ್ಪಷ್ಟತೆ ನೀಡಿದೆ.

ಬೆಂಗಳೂರು, (ನವೆಂಬರ್ 16): ಮೊನ್ನೆ ಅಷ್ಟೇ ಡಿಕೆ ಶಿವಕುಮಾರ್ ಸರ್ಕಾರ, ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಿಗಳಿಗೆ 425 ರಿಂದ 428 ಮಂದಿ ನೂತನ ನಿರ್ದೇಶಕರು ಹಾಗೂ ಸದಸ್ಯರ ನೇಮಕ ಮಾಡಿದ್ದು, ಇದೀಗ ಈ ನೆಮಕದ ಬಗ್ಗೆ ಇದ್ದ ಗೊಂದಲಗಳಿಗೆ ಸಿಎಂ ಕಚೇರಿ ತೆರೆ ಎಳೆದಿದೆ. ಹೌದು….ಹಿಂದಿನ ಅವಧಿಯ ನಿರ್ದೇಶಕರು ಸ್ಥಾನದಲ್ಲಿ ಇರುವಾಗಲೇ ಹೊಸಬರ ನೇಮಕ ಮಾಡಿದ್ದು ಗೊಂದಲ ಸೃಷ್ಟಿಸಿತ್ತು. ಈ ಸಂಬಂಧ 2 ವರ್ಷ ಅವಧಿ ಪೂರೈಸಿದ ನಿರ್ದೇಶಕರು ಮತ್ತು ಸದಸ್ಯರು ಸೇವೆಯಿಂದ ಮುಕ್ತಗೊಳಿಸಲು ಸಿಎಂ ಕಚೇರಿ ಸೂಚಿಸಿದೆ. ಈ ಮೂಲಕ ಹೊಸ ನಿರ್ದೇಶಕರು, ಸದಸ್ಯರ ನೇಮಕ ಗೊಂದಲಕ್ಕೆ ತೆರೆ ಎಳದಿದ್ದು, ಇದರೊಂದಿಗೆ ಸಿದ್ದರಾಮಯ್ಯನವರ ಅವಧಿಯಲ್ಲಿ ನೇಮಕಗೊಂಡವರಿಗೆ ಗೇಟ್ ಪಾಸ್ ನೀಡಲಾಗಿದೆ.
ಸಿದ್ದರಾಮಯ್ಯ ಅವಧಿಯಲ್ಲಿದ್ದವರಿಗೆ ಗೇಟ್ ಪಾಸ್
2 ವರ್ಷ ಅವಧಿ ಪೂರೈಸಿದ ನಿರ್ದೇಶಕರು, ಸದಸ್ಯರನ್ನು ಸೇವೆಯಿಂದ ಮುಕ್ತಗೊಳಿಸಲು ಸಿಎಂ ಕಚೇರಿ ಸೂಚನೆ ನೀಡಿದೆ. ಇದರೊಂದಿಗೆ ಈ ಹಿಂದೆ ಅಂದರೆ ಸಿದ್ದರಾಮಯ್ಯನವರ ಅವಧಿಯಲ್ಲಿನ ನಿರ್ದೇಶಕರು ಮತ್ತು ಸದಸ್ಯರುಗಳಿಗೆ ಗೇಟ್ ಪಾಸ್ ನೀಡಲಾಗಿದ್ದು, ಡಿಕೆ ಶಿವಕುಮಾರ್ ನೇಮಕ ಮಾಡಿದವರನ್ನ ಆ ಸ್ಥಾನಕ್ಕೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಕೊನೆಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಗಿಫ್ಟ್ ಕೊಟ್ಟ ಸರ್ಕಾರ: ನಿಗಮ ಮಂಡಳಿ, ಪ್ರಾಧಿಕಾರಗಳಿಗೆ 428 ಕಾರ್ಯಕರ್ತರ ನೇಮಕ
ನಿಗಮ ಮಂಡಳಿಗಳ ಹಿಂದಿನ ನಿರ್ದೇಶಕರು ಹಾಗೂ ಸದಸ್ಯರ ನೇಮಕ ರದ್ದುಗೊಳಿಸದೇ ಹೊಸ ನಿರ್ದೇಶಕರ ನೇಮಿಸಲಾಗಿತ್ತು. ಹಿಂದಿನ ಅವಧಿಯ ನಿರ್ದೇಶಕರು ಸ್ಥಾನದಲ್ಲಿ ಇರುವಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹೊಹೊಸ ಪಟ್ಟಿ ಬಿಡುಗಡೆ ಮಾಡಿದ್ದರು. ಇದರಿಂದ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ, ಗೊಂದಲಕ್ಕೊಳಗಾಗಿ ಅಧಿಕೃತ ಆದೇಶ ಮಾಡದೇ ಸುಮ್ಮನಾಗಿತ್ತು. ಇದರಿಂದ ಗೊಂದಲಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಅಂತಿಮವಾಗಿ ತೆರೆ ಬಿದ್ದಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳೇ ಕಳೆದಿದ್ದರೂ ನಿಗಮ-ಮಂಡಳಿಗಳ ನೇಮಕಾತಿ ಮಾತ್ರ ಮುಂದೂಡಿಕೆಯಾಗುತ್ತಲೇ ಬಂದಿತ್ತು. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ತಳಮಟ್ಟದ ಕಾರ್ಯಕರ್ತರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂಬ ಬೇಡಿಕೆ ನಿರಂತರವಾಗಿ ಕೇಳಿಬರುತ್ತಿತ್ತು. ಕೊನೆಗೂ ಸರ್ಕಾರ ನೇಮಕಾತಿ ಪಟ್ಟಿ ಪ್ರಕಟಿಸಿದ್ದು, ಕಾರ್ಯಕರ್ತರ ಹಲವು ವರ್ಷಗಳ ಆಸೆ ಈಡೇರಿದೆ.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ದೃಷ್ಟಿಯಿಂದ ಆಡಳಿತಾತ್ಮಕ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ನಿಗಮಗಳು, ಮಂಡಳಿಗಳು ಹಾಗೂ ಅಭಿವೃದ್ಧಿ ಪ್ರಾಧಿಕಾರಗಳ ನಿರ್ದೇಶಕರು ಮತ್ತು ಸದಸ್ಯರನ್ನ ನೇಮಕ ಮಾಡಲಾಗಿದೆ.
ನಿರ್ದೇಶಕರು ಮತ್ತು ಸದಸ್ಯರ ನೇಮಕಕ್ಕೆ ಅಸಮಾಧಾನ
ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಿಗಳಿಗೆ 425 ರಿಂದ 428 ಮಂದಿ ನೂತನ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ತೀವ್ರ ಅಸಮಾಧಾನ ಹಾಗೂ ಗೊಂದಲ ಸೃಷ್ಟಿಯಾಗಿದೆ. ಪಟ್ಟಿಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳಿಗೆ ಸೂಕ್ತ ಮನ್ನಣೆ ನೀಡಿಲ್ಲ ಎಂದು ಕೆಪಿಸಿಸಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿವೆ. ಅಲ್ಲದೇ ನೇಮಕಾತಿ ಪಟ್ಟಿಯಲ್ಲಿ ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ಕಾರ್ಯಕರ್ತರಿಗೂ ನಿರ್ದೇಶಕ ಸ್ಥಾನ ನೀಡಲಾಗಿದೆ ಎಂಬ ಆರೋಪವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
