
ಬೆಂಗಳೂರು, (ಆಗಸ್ಟ್ 20): ಪರಿಶಿಷ್ಟ ಜಾತಿಗಳ ಒಳಮೀಸಲಾತಿ (SC internal reservation) ಕಲ್ಪಿಸುವ ಬಗ್ಗೆ ನಿನ್ನೆ(ಆಗಸ್ಟ್ 19) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನವಾಗಿದೆ. ಎಸ್ ಸಿ ಬಲಗೈ ಹಾಗೂ ಎಡಗೈ ಸಮುದಾಯಗಳಿಗೆ ಸಮಾನವಾಗಿ ಶೇ.6ರಷ್ಟು ಮೀಸಲಾತಿ. ಇನ್ನು ಸ್ಪೃಶ್ಯ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿಗೆ ತೀರ್ಮಾನಿಸಲಾಗಿದೆ.ಆದ್ರೆ, ಇದಕ್ಕೆ ಕೆಲ ದಲಿತ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಅಲೆಮಾರಿಗಳು ಸೇರಿದಂತೆ ಇತರೆ ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಗಳು ವ್ಯಕ್ತವಾಗಿವೆ. ಇದರ ನಡುವೆಯೂ ಸಿಎಂ ಸಿದ್ದರಾಮಯ್ಯ (Siddaramaiah) ಇಂದು (ಆಗಸ್ಟ್ 20) ಸದನದಲ್ಲಿ ಮೀಸಲಾತಿ ಬಗ್ಗೆ ತೆಗೆದುಕೊಂಡು ನಿರ್ಣಯವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಮುಖ್ಯವಾಗಿ ಈ ವೇಳೆ ಏನಾದರೂ ಬದಲಾವಣೆ ಮಾಡಬೇಕಾದ್ರೆ ಮುಂದಿನ ಹಂತದಲ್ಲಿ ತೀರ್ಮಾನ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಎಡಗೈ ಸಮುದಾಯಕ್ಕೆ 6%, ಬಲ ಸಮುದಾಯಕ್ಕೆ 6% ಹಾಗೂ ಸ್ಪೃಶ್ಯ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳನ್ನು ಕೆಲ ಮಾರ್ಪಾಡುಗಳೊಂದಿಗೆ ಒಳ ಮೀಸಲಾತಿ ಕಲ್ಪಿಸಲಾಗಿದೆ. A, B, C ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಲಾಗಿದ್ದು, ಒಳ ಮೀಸಲಾತಿ ಹೋರಾಟದ ಮೊಕದ್ದಮೆ ಹಿಂಪಡೆಯಲೂ ತೀರ್ಮಾನಿಸಲಾಗಿದೆ. ಈ ಮೂಲಕ ದಶಗಳ ಹೋರಾಟಕ್ಕೆ ನಮ್ಮ ಸರ್ಕಾರ ನ್ಯಾಯ ಒದಗಿಸಿದೆ ಎಂದರು.
ಏನಾದರೂ ಬದಲಾವಣೆ ಮಾಡಬೇಕಾದ್ರೆ ಮುಂದಿನ ಹಂತದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಹೇಳುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು. ಬಳಿಕ ವಿಪಕ್ಷ ಬಿಜೆಪಿ ಸದಸ್ಯರು ಮಾತನಾಡಲು ಮುಂದಾದರು. ಆದ್ರೆ, ಇದಕ್ಕೆ ಸ್ಪೀಕರ್ ಯುಟಿ ಖಾದರ್, ಈಗ ಮಾತನಾಡುವುದು ಬೇಡ ಎಂದು ಅವರಕಾಶ ಕೊಡಲಿಲ್ಲ. ಬಳಿಕ ಮಾತು ಮುಂದುವರಿಸಿದ ಸಿಎಂ, ನಿಮ್ಮ ಕೈಯಲ್ಲಿ ಮಾಡಲು ಆಗಿಲ್ಲ ಅಂತಾನೇ ನಾವು ಮಾಡಿದ್ದೇವೆ. ನಿಮ್ಮ ಕಂಡರೆ ಭಯ ಇಲ್ಲ ಎಂದು ಬಿಜೆಪಿಯವರಿಗೆ ಕೌಂಟರ್ ಕೊಟ್ಟರು.
ಇನ್ನು ಸಿಎಂ ಮಾತು ಮುಗಿಯುತ್ತಿದ್ದಂತೆಯೇ ವಿಪಕ್ಷ ನಾಯಕ ಆರ್ ಅಶೋಕ್ ಎದ್ದು ನಿಂತು ಮೀಸಲಾತಿ ಜಾರಿ ಬಗ್ಗೆ ಮಾತನಾಡಲು ಪಟ್ಟು ಹಿಡಿದರು. ಈಗ ಚರ್ಚೆ ಮಾಡಲು ಅವಕಾಶ ಇಲ್ಲ. ಸಿಎಂ ವಾಕೌಟ್ ಮಾಡಿಲ್ಲ. ವಿಧಾನ ಪರಿಷತ್ತಿನಲ್ಲಿ ಉತ್ತರ ಇದೆ. ಹೀಗಾಗಿ ಅಲ್ಲಿಗೆ ಹೋಗಿದ್ದಾರೆ ಎಂದು ಸ್ಪೀಕರ್ ಹೇಳಿದರು. ಈ ವೇಳೆ ಪ್ರಶ್ನೆಗೆ ಅವಕಾಶ ಇದೆ ಎಂದು ಬಿಜೆಪಿ ಸದಸ್ಯ ಸುನಿಲ್ ಕುಮಾರ್ ನಿಯಮದ ಪುಸ್ತಕ ಓದಿದರು. ಪ್ರಶ್ನೆ ಕೇಳಲು ಅವಕಾಶ ಇಲ್ಲ ಅಂದರೆ ಸರ್ಕಾರ ಏನೋ ಮುಚ್ಚಿಡಲು ಮುಂದಾಗಿದೆ. ಸಿಎಂ ಇಲ್ಲ ಅಂದರೆ ನಮಗೆ ಡಿಕೆ ಶಿವಕುಮಾರ್ ಸಿಎಂ .ಅವರಿಗೆ ಕೊಡುತ್ತೇವೆ. ಅನುಮತಿ ಕೊಡಿ ಎಂದು ವಿಪಕ್ಷ ನಾಯಕ ಅಶೋಕ್ ಪಟ್ಟು ಹಿಡಿದರು.
ಎಡಗೈ ಜೊತೆ ಬಲಗೈ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಕಲ್ಪಿಸಿ ಸರ್ಕಾರ ಎಚ್ಚರಿಕೆ ಇಟ್ಟಿದೆ. ಆದ್ರೆ ಲಂಬಾಣಿ, ಬೋವಿ, ಅಲೆಮಾರಿ ಸೇರಿ 60 ಪರಿಶಿಷ್ಟ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ನೀಡಿರುವುದು ಹೊಸ ಸಂಘರ್ಷಕ್ಕೆ ನಾಂದಿಹಾಡಿದೆ. ಇನ್ನು ಒಳಮೀಸಲಾತಿ ಜಾರಿಗೆ ಸಂಬಂಧ ಕೆಲ ತಪ್ಪುಗಳಾಗಿವೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರಿಸುವಾಗ ಬದಲಾವಣೆ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಈ ಮೂಲಕ ಅಲೆಮಾರಿ ಜನಾಂಗದ ಆಕ್ರೋಶ ಹೆಚ್ಚಾದರೆ ಏನಾದರೂ ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಇನ್ನು ಈ ಒಳಮೀಸಲಾತಿ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡದ ಬಳಿಕ ವಿಧಾನ ಪರಿಷತ್ ನಲ್ಲೂ ಸಹ ಪ್ರಸ್ತಾಪ ಮಾಡಿದ್ದು, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳ ವಿವೇಚನೆಗೆ ಬಿಟ್ಟಿತ್ತು.ಒಳ ಮೀಸಲಾತಿ ವರ್ಗೀಕರಣ ರಾಜ್ಯ ಸರ್ಕಾರಗಳಿಗೆ ಸಾಂವಿಧಾನಿಕವಾಗಿ ಬಂದ ಅಧಿಕಾರ ಎಂಬುದನ್ನು ಸುಪ್ರಿಂ ಕೋರ್ಟ್ ಹೇಳಿದೆ. 11-11-2024ರಂದು ರಂದು ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ರಚನೆ ಮಾಡಲಾಯಿತು. ನಾಗಮೋಹನ್ ದಾಸ್ ಆಯೋಗ 101 ಪರಿಶಿಷ್ಟ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಿದೆ.
ಆದ್ರೆ, ಕೆಲವು ಮಾರ್ಪಾಡು ಮಾಡಿ ವರದಿಯನ್ನು ಅಂಗೀಕರಿಸಿದ್ದೇವ. ಬಲಗೈ ಸಮೂಹಕ್ಕೆ 6% ಮೀಸಲಾತಿ, ಎಡಗೈ ಸಮೂಹಕ್ಕೆ 6% ಮೀಸಲಾತಿ ಕಲ್ಪಿಸಿ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ. ಇನ್ನು ಸ್ಪೃಶ್ಯ ಜಾತಿಗಳಿಗೆ ಶೆ.4ರಷ್ಟು ಮೀಸಲಾತಿ ನೀಡುವ ಬಗ್ಗೆ ನಾಗಮೋಹನ್ ದಾಸ್ ಶಿಫಾರಸು ಮಾಡಿದ್ದರು. ಕೆಲವು ತಾಂತ್ರಿಕ ಕಾರಣಗಳಿಂದ ಒಂದೇ ಗುಂಪಿಗೆ ಸೇರಿಸಿ ವರ್ಗ- ಸಿ ಗೆ 5% ಮೀಸಲಾತಿ ನೀಡಲು ನಿರ್ಧರಿಸಿದ್ದೇವೆ. ಸಮಾನತೆ ನ್ಯಾಯ ಸಮ್ಮತೆ ಖಚಿತಪಡಿಸಿಕೊಳ್ಳಲು ಮಾರ್ಪಾಡು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ಸ್ಥಾಪನೆಗೆ ತೀರ್ಮಾನ ಮಾಡಿದ್ದೇವೆ. ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ. ಇನ್ನು ಒಳಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನೂ ಹಿಂಪಡೆಯಲು ತೀರ್ಮಾನ ಮಾಡಿದ್ದೇವೆ. ಇದರೊಂದಿಗೆ ಒಳ ಮೀಸಲಾತಿ ಕುರಿತ ದಶಕದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
Published On - 4:44 pm, Wed, 20 August 25