ಬೆಂಗಳೂರು, (ಮೇ 28): ಭೀಕರ ಬರಗಾಲದ ನಡುವೆ ಅನ್ನದಾತರಿಗೆ (Farmers) ಬಿತ್ತನೆ ಬೀಜದ ಬೆಲೆ(sowing seeds Price) ಏರಿಕೆ ಬಿಸಿ ತಟ್ಟಿದೆ. ಈಗಾಗಲೇ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚುರುಕುಗೊಂಡಿದ್ದು, ರೈತರು ಸಾಲ ಸೂಲ ಮಾಡಿ ಭೂಮಿ ಬತ್ತನೆಗೆ ರೆಡಿಯಾಗಿದ್ದಾರೆ. ಆದ್ರೆ ಬಿತ್ತನೆ ಬೀಜಗಳ ದರ ಏರಿಕೆಯಿಂದ ಶಾಕ್ ಆಗಿದ್ದಾರೆ. ಇನ್ನು ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಮಗಿಬಿದ್ದಿವೆ. ಇದರ ಬೆನ್ನಲ್ಲೇ ಇದೀಗ ಇದಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ತೀವ್ರ ಬರಗಾಲದಿಂದಾಗಿ ಬೀಜೋತ್ಪಾದನೆ ಕುಂಠಿತವಾಗಿದೆ. ಹೀಗಾಗಿ ಬಿತ್ತನೆ ಬೀಜ ದರ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಿತ್ತನೆ ಬೀಜದ ದರ ಕಡಿಮೆ ಇದೆ ಎಂದು ವಿಪಕ್ಷಗಳ ಟೀಕೆಗಳಿಗೆ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಬಿತ್ತನೆ ಬೀಜ ದರ ಏರಿಕೆಗೆ ಸಂಬಂಧಿಸಿದಂತೆ ವಿಪಕ್ಷ ಟೀಕೆಗೆ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನೆರೆಯ ರಾಜ್ಯಗಳ ಹೋಲಿಕೆಯಲ್ಲಿ ಬಿತ್ತನೆ ಬೀಜಗಳ ದರ ರಾಜ್ಯದಲ್ಲಿ ಕಡಿಮೆ. ಬರಗಾಲದಿಂದ ಕುಂಠಿತವಾದ ಬೀಜೋತ್ಪಾದನೆ ದರ ಹೆಚ್ಚಳಕ್ಕೆ ಕಾರಣವಾಗಿದೆ. 2023-24ನೇ ಸಾಲಿನ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದೆ. ಬೀಜೋತ್ಪಾದಕರಿಂದ ಖರೀದಿಸುವ ಬಿತ್ತನೆ ಬೀಜದ ದರಗಳು ಸಹ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜದ ಮಾರಾಟದ ದರ ಏರಿಕೆಯಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವಾರವೂ ತರಕಾರಿ ದುಬಾರಿ, 220 ರೂ. ದಾಟಿದ ಬೀನ್ಸ್ ದರ: ಇಲ್ಲಿದೆ ಬೆಲೆ ವಿವರ
ಈ ದರ ಏರಿಕೆ ಮುಂಗಾರು ಬೆಳೆ ಬೆಳೆಯುವ ಎಲ್ಲ ರಾಜ್ಯಗಳಲ್ಲಿಯೂ ಆಗಿದ್ದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೀಜಗಳ ದರ ಕಡಿಮೆ ಇದೆ. ಬಿತ್ತನೆ ಬೀಜಗಳ ಮಾರಾಟ ದರಗಳನ್ನು ನಿಗದಿಪಡಿಸುವ ಸಂದರ್ಭಗಳಲ್ಲಿ ಬಿತ್ತನೆ ಬೀಜ ಖರೀದಿ ದರಗಳು ಹಾಗೂ ಗರಿಷ್ಠ APMC ಮಾರಾಟ ದರಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. 2022-23ನೇ ಸಾಲಿಗೆ ಹೋಲಿಸಿದಾಗ 2023-24ನೇ ಸಾಲಿನಲ್ಲಿ ವಿವಿಧ ಬೆಳೆಗಳ ಖರೀದಿ ದರಗಳಲ್ಲಿ (Procurement Rates) ಗರಿಷ್ಠ ಶೇ.59.58ರಷ್ಟು ವ್ಯತ್ಯಾಸವಾಗಿರುತ್ತದೆ ಎಂದು ತಿಳಿಸಿದ್ದಾರೆ.
ರೈತರು ತಮ್ಮ ಜಮೀನಿನಲ್ಲಿಯೇ ಬೀಜಗಳನ್ನು ಉತ್ಪಾದನೆ ಮಾಡುತ್ತಾರೆ. ಇದನ್ನು ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ರಾಜ್ಯ ಬೀಜ ನಿಗಮ, ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡು ಸರಬರಾಜು ಮಾಡುತ್ತವೆ. ಈ ಬಾರಿ ಹೆಸರು ಬೆಳೆಯ ಬಿತ್ತನೆ ಬೀಜಗಳ ಎಲ್-1 ದರ ಶೇ.48.5, ಉದ್ದು ಬೆಳೆಯ ದರ ಶೇ.37.72, ತೊಗರಿ ಬೆಳೆಯ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69ರಷ್ಟು ಮತ್ತು ಜೋಳದ ಬೆಳೆಯ ಎಲ್-1 ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಾಗಿರುತ್ತದೆ ಎಂದು ಬಿತ್ತನೆ ಬೀಜ ದರ ಏರಿಕೆಗೆ ಕಾರಣ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ