
ಬೆಂಗಳೂರು, ಜುಲೈ 12: ಯುಪಿಐ (UPI) ಮೂಲಕ 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳು ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂಬ ನೋಟಿಸ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ (Karnataka Commercial Tax Department) ಸ್ಪಷ್ಟನೆ ನೀಡಿದ್ದು, ವಾರ್ಷಿಕ ವಹಿವಾಟು 1.5 ಕೋಟಿಗಿಂತ ಕಡಿಮೆ ಇದ್ದರೇ ಅಂತಹ ವರ್ತಕರು ಕೇವಲ ಶೇ 1 ರಷ್ಟು ಮಾತ್ರ ತೆರಿಗೆ ಪಾವತಿಸಬಹುದಾಗಿದೆ ಎಂದು ಹೇಳಿದೆ.
ಆದರೆ, ಯುಪಿಐ ಮೂಲಕ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಿದ ಇಲಾಖೆ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ – 2017ರಡಿಯಲ್ಲಿ ನೋಂದಣಿಯನ್ನು ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟೀಸ್ ನೀಡಿದೆ. ಈ ನೋಟಿಸುಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕು ಎಂದು ಇಲಾಖೆ ತಿಳಿಸಿದೆ.
ಜುಲೈ 1, 2017 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಕಲಂ 22 ರನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂಪಾಯಿಗಳನ್ನು ಮೀರಿದರೆ ಅಥವಾ ಸೇವೆಗಳ ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿಎಸ್ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.
ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು ಮತ್ತು ಸೇವೆಗಳು ಸೇರಿರುತ್ತದೆ. ಆದರೆ ತೆರಿಗೆ ಬಾಧ್ಯತೆಯು Taxable ಸರಕುಗಳು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾಧ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ದರಿಸಲ್ಪಡುತ್ತದೆ ಎಂದಿದೆ.
ವಾಣಿಜ್ಯ ತೆರಿಗೆಗಳ ಇಲಾಖೆಯು ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ)ಯ ಮೂಲಕ ವರ್ತಕರು 2021-22 ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯುಪಿಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿರುತ್ತಾರೆ. ವರ್ತಕರು ಮಾರಾಟದ ಹಣವನ್ನು (ಯುಪಿಐ) ಮಾತ್ರವಲ್ಲದೇ ನಗದು ಮತ್ತು ಇತರ ವಿಧಾನಗಳಲ್ಲಿ ಕೂಡ ಪಡೆಯುತ್ತಾರೆ. ಹಾಗಾಗಿ, ಯುಪಿಐ ಮೂಲಕ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿರುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ: ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಗುನ್ನ!
ಈ ಮಾಹಿತಿಯನ್ನು ಪರಿಶೀಲಿಸಿದ ಇಲಾಖೆ, 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ – 2017 ರಡಿಯಲ್ಲಿ ನೋಂದಣಿಯನ್ನು ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಈ ನೋಟಿಸುಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕು.
ಇಂತಹ ವರ್ತಕರು ತಕ್ಷಣ ನೋಂದಣಿ ಪಡೆಯಬೇಕು. ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು ಆಯ್ಕೆ ಮಾಡಿ, ಇನ್ಮುಂದೆ ಶೇ 1 ರಷ್ಟು ತೆರಿಗೆ ಪಾವತಿಸಬಹುದಾಗಿದೆ.
Published On - 4:27 pm, Sat, 12 July 25