
ಬೆಂಗಳೂರು, ಜುಲೈ 3: ಸಾರ್ವಜನಿಕ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೊಡೆಯಲು ಕೈಎತ್ತಿದ್ದರಿಂದ ಅವಮಾನಕ್ಕೆ ಒಳಗಾಗಿರುವುದಾಗಿ ಸ್ವಯಂ ನಿವೃತ್ತಿ ಪಡೆಯಲು ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಮುಂದಾಗಿದ್ದಾರೆ. ಇದನ್ನೇ ಪ್ರಸ್ತಾಪಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ (RAshoka) ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸರ್ಕಾರದಿಂದ (Congress govt) ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರ ಮೇಲೆ ನೀವು ಬಹಿರಂಗ ವೇದಿಕೆಯ ಮೇಲೆ ಕೈ ಎತ್ತಿದ್ದ ಘಟನೆಗೆ ಕಾರಣ ನಿಮ್ಮ ಅಧಿಕಾರದ ದರ್ಪವೋ, ಮದವೋ, ದುರಹಂಕಾರವೋ, ವಿಫಲ ಸರ್ಕಾರ ಮುನ್ನಡೆಸುತ್ತಿರುವ ಹತಾಶೆಯೋ, ಅಥವಾ ಇಷ್ಟರಲ್ಲೇ ಅಧಿಕಾರ ಬಿಟ್ಟುಕೊಡಬೇಕು ಎನ್ನುವ ಕಾತಾಳವೋ, ಅದನ್ನ
ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತೇನೆ. ಆದರೆ ನಿಮ್ಮ ನಡೆಯಿಂದ ಒಬ್ಬ ಕರ್ತವ್ಯನಿಷ್ಠ ಅಧಿಕಾರಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಇಡೀ ಪೊಲೀಸ್ ಇಲಾಖೆಯ ಮನೋಬಲಕ್ಕೆ ಚ್ಯುತಿ ತಂದಿದೆ. ಅಧಿಕಾರಶಾಹಿಯ ನೈತಿಕತೆಗೆ ಪೆಟ್ಟು ಕೊಟ್ಟಿದೆ, ನೌಕರಶಾಹಿಯ ಆತ್ಮಸ್ಥೈರ್ಯ ಕುಸಿದಿದೆ ಎಂದು ಅಶೋಕ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆ!
ಸಿಎಂ @siddaramaiah ನವರೇ,
ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರ ಮೇಲೆ ನೀವು ಬಹಿರಂಗ ವೇದಿಕೆಯ ಮೇಲೆ ಕೈ ಎತ್ತಿದ್ದ ಘಟನೆಗೆ ಕಾರಣ ನಿಮ್ಮ ಅಧಿಕಾರದ ದರ್ಪವೋ, ಮದವೋ, ದುರಹಂಕಾರವೋ, ವಿಫಲ ಸರ್ಕಾರ ಮುನ್ನಡೆಸುತ್ತಿರುವ ಹತಾಶೆಯೋ, ಅಥವಾ ಇಷ್ಟರಲ್ಲೇ ಅಧಿಕಾರ ಬಿಟ್ಟುಕೊಡಬೇಕು… pic.twitter.com/GtgBNTnM5K
— R. Ashoka (@RAshokaBJP) July 3, 2025
‘‘ನಿಮ್ಮ ಯಡವಟ್ಟುಗಳಿಂದ ಪ್ರತಿ ದಿನ ಒಂದಲ್ಲ ಒಂದು ಒಂದು ರೀತಿ ತಮ್ಮ ಸರ್ಕಾರಕ್ಕೆ, ವೈಯಕ್ತಿಕವಾಗಿ ತಮಗೆ ಕೆಟ್ಟ ಹೆಸರು ಬರುತ್ತಲೇ ಇದೆ. ಇನ್ನಾದರೂ ಈ ಭಂಡ ಬಾಳು ಬಿಡಿ. ಅಧಿಕಾರದ ವ್ಯಾಮೋಹ ಬಿಟ್ಟು ರಾಜನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ. ನಿವೃತ್ತಿಯ ಅಂಚಿನಲ್ಲಿ ಖಳನಾಯಕನಾಗಿ ಇತಿಹಾಸದ ಪುಟ ಸೇರುವುದಕ್ಕಿಂತ, ಗೌರವದಿಂದ ಕುರ್ಚಿ ತ್ಯಾಗ ಮಾಡುವುದು ನಿಮಗೂ ಒಳಿತು, ರಾಜ್ಯಕ್ಕೂ ಒಳಿತು’’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಅಶೋಕ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಕೈ ಎತ್ತಿದ್ದ ಸಿಎಂ: ಅವಮಾನದಿಂದ ಸ್ವಯಂ ನಿವೃತ್ತಿಗೆ ಮುಂದಾದ ಪೊಲೀಸ್ ಆಫೀಸರ್
ಬೆಳಗಾವಿಯಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಂತರ ಇದೀಗ ನಾರಾಯಣ ಭರಮನಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ. ಒಂದು ವೇಳೆ ಅವರ ಸ್ವಯಂ ನಿವೃತ್ತಿ ಅನುಮೋದನೆಗೊಂಡಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವುದರಿಂದ ಹಿರಿಯ ಅಧಿಕಾರಿಗಳು ನಾರಾಯಣ ಭರಮನಿ ಅವರ ಮನವೊಲಿಕೆ ಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.