ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಧ್ಯೆ ಸಂಧಾನಕ್ಕೆ ಮುಹೂರ್ತ ಫಿಕ್ಸ್! ಸಿಎಂ, ಡಿಸಿಎಂಗೆ ದೆಹಲಿಗೆ ಬುಲಾವ್ ಸಾಧ್ಯತೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಿಂದ ದೆಹಲಿಗೆ ವಾಪಸ್ ಆಗಿದ್ದಾರೆ. ರಾಜ್ಯದಲ್ಲಿ ಅನೇಕ ನಾಯಕರ ಅಭಿಪ್ರಾಯ ಸಂಗ್ರಹಿಸಿರುವ ಖರ್ಗೆ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಸಂಧಾನಕ್ಕೆ ಹೈಕಮಾಂಡ್ ಮುಹೂರ್ತ ನಿಗದಿ ಮಾಡಿದೆ ಎಂಬ ಎಕ್ಸ್ಕ್ಲೂಸಿವ್ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ.

ನವದೆಹಲಿ, ನವೆಂಬರ್ 26: ಕರ್ನಾಟಕ ಕಾಂಗ್ರೆಸ್ನಲ್ಲಿ (Congress) ಕುರ್ಚಿ ಚರ್ಚೆ ಗೊಂದಲದ ಚೆಂಡು ಹೈಕಮಾಂಡ್ ಅಂಗಳಕ್ಕೆ ಬಿದ್ದಿದೆ. ಇಷ್ಟು ದಿನ ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ದೆಹಲಿಗೆ ವಾಪಸ್ ಆಗಿದ್ದಾರೆ. ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಖರ್ಗೆ, ಸಭೆ ನಡೆದರೆ ಚರ್ಚಿಸುತ್ತೇನೆ ಎಂದಿದ್ದಾರೆ. ಈ ಮಧ್ಯೆ, ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಚರ್ಚೆ ನಡೆಸಿರುವ ಹೈಕಮಾಂಡ್, ಇದೀಗ ಸಿಎಂ ಮತ್ತು ಡಿಸಿಎಂ ನಡುವೆ ಸಂಧಾನಕ್ಕೆ ದಿನಾಂಕ ನಿಗದಿ ಮಾಡಿದ ಎಕ್ಸ್ಕ್ಲೂಸಿವ್ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಸಿಎಂ, ಡಿಸಿಎಂ ನಡುವೆ ಸಂಧಾನ ಮಾತುಕತೆ ನಡೆಯುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ಶೀಘ್ರದಲ್ಲೇ ದೆಹಲಿಗೆ ಬರುವಂತೆ ಬುಲಾವ್ ನೀಡುವ ಸಾಧ್ಯತೆ ಇದೆ. ಅದರಂತೆ ನವೆಂಬರ್ 29ರಂದು ಸಂಧಾನ ಮಾತುಕತೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎನ್ನಲಾಗಿದ್ದು, ಬಹುತೇಕ ವಾರಾಂತ್ಯಕ್ಕೆ ಸಿಎಂ, ಡಿಸಿಎಂ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಸಿಎಂ ಸ್ಥಾನ ಹಂಚಿಕೆ ಬಗ್ಗೆ ಎದ್ದಿರುವ ಗೊಂದಲವನ್ನು ಹೈಕಮಾಂಡ್ ಮಧ್ಯಪ್ರವೇಶಿಸಿ ತೆರೆ ಎಳೆಯುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಹೀಗಾಗಿ ಈ ವಿಷಯವನ್ನು ಸಿಎಂ, ಡಿಸಿಎಂ ಗಮನಕ್ಕೆ ತಂದು, ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆಯಲು ಕೈಪಡೆ ಪ್ಲ್ಯಾನ್ ಮಾಡಿದೆ.
ಇದೆಲ್ಲದರ ನಡುವೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಒಂದು ಕಾಲದಲ್ಲಿ ಖರ್ಗೆ ವಿಚಾರದಲ್ಲಿ ನಾನು ತಪ್ಪು ಮಾಡಿದ್ದೇನೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಬಾಹ್ಯ ಬೆಂಬಲ ಕೊಡುವುದಾದರೆ ನಾವು ಸಿದ್ಧ: ಸದಾನಂದಗೌಡ
ಕಾಂಗ್ರೆಸ್ ಕುರ್ಚಿ ಕದನದ ನಡುವೆ, ಡಿಕೆ ಶಿವಕುಮಾರ್ ಬಾಹ್ಯ ಬೆಂಬಲ ಕೊಡುವುದಾದರೆ ನಾವು ಸಿದ್ಧ. ವರಿಷ್ಠರು ತೀರ್ಮಾನ ಮಾಡಿದರೆ ನಾವು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಅವರ ವಕ್ತಾರ ಅಲ್ಲ. ಅವರಿಗೆಲ್ಲ ನಾನು ಉತ್ತರ ಕೊಡಲ್ಲ ಎಂದು ತಿರುಗೇಟು ನೀಡಿದ್ದಾರೆ. ಆದರೆ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತ್ರ, ನಾವು ಡಿಕೆಶಿ ಸಹವಾಸ ಮಾಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಕುರ್ಚಿ ಕದನ: ದೆಹಲಿಯಿಂದ ಬಂದಿಳಿಯುತ್ತಿದ್ದಂತೆಯೇ ಹೊಸ ಬಾಂಬ್ ಸಿಡಿಸಿದ ಡಿಕೆಶಿ ಬಣದ ಶಾಸಕ
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಬಣ ಬೆಳವಣಿಗೆಗಳು ನಡೆಯುತ್ತಿವೆ. ಇದು ಗುರುವಾರದ ವೇಳೆಗೆ ಮತ್ತಷ್ಟು ರೋಚಕತೆ ಪಡೆಯುವ ಸಾಧ್ಯತೆ ಇದೆ.



