ಮಂಗಳೂರು: ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ವಿರೋಧಿಸಿ ಬಿಜೆಪಿ ನಾಯಕರ ಪ್ರತಿಭಟನೆ
ಮಂಗಳೂರಿನ ಕಾವೂರಿನಲ್ಲಿ ಸೋಮವಾರ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ‘ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದರು. ಈ ಕುರಿತು ಕಾಂಗ್ರೆಸ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು. ಈ ಹಿನ್ನಲೆ ಅದನ್ನು ವಿರೋಧಿಸಿ ಇಂದು(ಜು.13)ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ದಕ್ಷಿಣ ಕನ್ನಡ, ಜು.13: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ(Dr. Bharath Shetty Y) ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಈ ಹಿನ್ನಲೆ ಇಂದು (ಶನಿವಾರ) ಮಂಗಳೂರಿನ ಕಾವೂರು ಜಂಕ್ಷನ್ನಲ್ಲಿ ಬಿಜೆಪಿ(BJP) ನಾಯಕರು ಧರಣಿ ನಡೆಸಿದ್ದರು. ‘ಶಾಸಕರ ಮೇಲೆ ಕಾಂಗ್ರೆಸ್ ಸರ್ಕಾರ ಸುಳ್ಳು ಎಫ್.ಐ.ಆರ್ ದಾಖಲಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಘಟನೆ ವಿವರ
ಮಂಗಳೂರಿನ ಕಾವೂರಿನಲ್ಲಿ ಸೋಮವಾರ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ‘ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದರು. ಜೊತೆಗೆ ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ ಎಂದಿದ್ದರು. ಈ ಹಿನ್ನಲೆ ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ವ್ಯಕ್ತಿಯನ್ನ ನಿಂದಿಸಿ, ಶಸ್ತ್ರಾಸ್ತ್ರ ಉಪಯೋಗಿಸಿ ಹೋರಾಟ ಮಾಡೋಣ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪಾಲಿಕೆ ಸದಸ್ಯ ಕಾಂಗ್ರೆಸ್ನ ಅನಿಲ್ ಕುಮಾರ್ ದೂರಿನ ಮೇಲೆ BNS 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ವೈ ಭರತ್ ಶೆಟ್ಟಿ ಮೇಲೆ ಎಫ್ಐಆರ್
ಷರತ್ತು ಬದ್ಧ ಜಾಮೀನು
ಇನ್ನು ಎಫ್.ಐ.ಆರ್ ದಾಖಲು ಬೆನ್ನಲ್ಲೇ ಶಾಸಕ ಭರತ್ ಶೆಟ್ಟಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದೆ. ಹೌದು, ಷರತ್ತು ಬದ್ಧ ಜಾಮೀನು ನೀಡಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿ
ಇನ್ನು ಪ್ರತಿಭಟನೆಯಲ್ಲಿ ಶಾಸಕ ಭರತ್ ಶೆಟ್ಟಿಗೆ ಸಾಥ್ ನೀಡಲಿರುವ ಬಿಜೆಪಿ ನಾಯಕರಾದ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಘಟಕದ ಪ್ರ. ಕಾರ್ಯದರ್ಶಿ ಸುನೀಲ್ ಕುಮಾರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಈ ಹಿನ್ನಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದ್ದು, ಕೆ.ಎಸ್.ಆರ್.ಪಿ, ಸಿ.ಎ.ಆರ್ ಪೊಲೀಸರ ನಿಯೋಜಿಸಲಾಗಿತ್ತು.
ಠಾಣೆಗೆ ಮುತ್ತಿಗೆ ಹಾಕಲು ಯತ್ನ
ಇತ್ತ ಪ್ರತಿಭಟನಾ ಸಭೆ ಮುಗಿಯುತ್ತಿದ್ದಂತೆ ಕಾವೂರು ಪೊಲೀಸ್ ಠಾಣೆಗೆ ಮೆರವಣಿಗೆ ಮೂಲಕ ಮುತ್ತಿಗೆ ಹಾಕಲು ತೆರಳ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸ್ ಠಾಣೆಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ಪೊಲೀಸರ ತಡೆದಿದ್ದಾರೆ. ಆದರೆ, ಬಿಜೆಪಿ ನಾಯಕರಿಗೆ ಮಾತ್ರ ಪೊಲೀಸ್ ಠಾಣೆ ಬಳಿ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಹೋರಾಟ ಪೊಲೀಸರ ಹಿಂದಿರುವ ಕಾಣದ ಕೈಗಳ ವಿರುದ್ಧ- ಅಶೋಕ್
ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ಈ ಹೋರಾಟ ಪೊಲೀಸರ ವಿರುದ್ಧ ಅಲ್ಲ, ಅವರ ಹಿಂದಿರುವ ಕಾಣದ ಕೈಗಳ ವಿರುದ್ಧ ಎಂದರು. ‘ಬಿಜೆಪಿ ಶಾಸಕರನ್ನ ಹೆದರಿಸುವ ಕುತಂತ್ರ ಕಾಂಗ್ರೆಸ್ ಮಾಡ್ತಿದೆ. ಮೋದಿ ಹತ್ಯೆ ಮಾಡಬೇಕು ಎಂದವನಿಗೆ ಟಿಕೆಟ್ ನೀಡಿದೆ. ಪಾಕ್ ಜಿಂದಾಬಾದ್ ಎಂದವರ ಪರ ಮಂತ್ರಿಗಳು ಬ್ಯಾಟಿಂಗ್ ಮಾಡಿದ್ದಾರೆ. ಬಾಂಬ್ ಹಾಕಿದವರನ್ನ ಡಿಕೆ ಸೋದರರು ಬ್ರದರ್ಸ್ ಅಂತಾರೆ. ಕಾಂಗ್ರೆಸ್ ಹಿಂದೂ ವಿರೋಧಿ ತನ ಪದೇಪದೆ ತೋರಿಸುತ್ತದೆ. ಜೈ ಶ್ರೀರಾಮ್ ಅಂದ್ರೆ ಚಾಕು ಹಾಕ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ-ಸುನಿಲ್ ಕುಮಾರ್
ಇದೇ ವೇಳೆ ಮಾಜಿ ಸಚಿವ ಸುನಿಲ್ ಕುಮಾರ್, ‘ಶಾಸಕ ಭರತ್ ಶೆಟ್ಟಿ ವಿರುದ್ದ ಸುಳ್ಳು ಮೊಕದ್ದಮೆ ದಾಖಲಿಸಲಾಗಿದ್ದು, ಈ ಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರಕಾರ ನಿರಂತರ ಸುಳ್ಳು ಕೇಸ್ ಹಾಕುತ್ತಿದೆ. ರಾಹುಲ್ ಗಾಂಧಿಯವರು ಯಾವುದೇ ಜನಪರ ಭಾಷಣ ಮಾಡಿದ್ದಲ್ಲ, ಹಿಂದೂಗಳು ಹಿಂಸಾವಾದಿಗಳು ಎಂದು ಭಾಷಣ ಮಾಡಿ ಹಿಂದೂಗಳಿಗೆ ಅಪಮಾನ ಮಾಡಿದ್ದರು. ಅವರ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಶಾಸಕ ಭರತ್ ಶೆಟ್ಟಿ ಮಾತನಾಡಿದ್ದರು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 pm, Sat, 13 July 24