ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ: ಸರ್ಕಾರದ ವಿರುದ್ಧ ದೈವರಾಧಕರು ಕಿಡಿಕಾರಿದ್ದೇಕೆ?

ಕರ್ನಾಟಕ ಸರ್ಕಾರ ಶಾಲಾ ರಂಗೋತ್ಸವ ಕಾರ್ಯಕ್ರಮದಲ್ಲಿ ದೈವಾರಾಧನೆಯನ್ನು ಸೇರಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ದೈವಾರಾಧನೆಯು ಒಂದು ಪವಿತ್ರ ಆಚರಣೆಯಾಗಿದ್ದು, ಮನರಂಜನಾ ಕಾರ್ಯಕ್ರಮವಲ್ಲ ಎಂದು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಲಾಗಿದೆ.

ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ: ಸರ್ಕಾರದ ವಿರುದ್ಧ ದೈವರಾಧಕರು ಕಿಡಿಕಾರಿದ್ದೇಕೆ?
ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ: ದೈವರಾಧಕರು ಕಿಡಿಕಾರಿದ್ದೇಕೆ?
Edited By:

Updated on: Feb 20, 2025 | 2:56 PM

ಮಂಗಳೂರು, ಫೆಬ್ರವರಿ 20: ನಾಡಿನ ವಿಭಿನ್ನ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ರಂಗೋತ್ಸವ ಎಂಬ ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಇಲ್ಲಿ ಮನರಂಜನಾ ಕಾರ್ಯಕ್ರಮದ ಪಟ್ಟಿಯಲ್ಲಿ ಕರಾವಳಿಯ ದೈವರಾಧನೆಯನ್ನು (daivaradhane)  ಸೇರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವಂತಹ ವಸ್ತುವಲ್ಲ ಎಂದು ದೈವರಾಧಕರು ಸರ್ಕಾರದ ವಿರುದ್ದ ಕಿಡಿಕಾರಿಕಾರಿದ್ದಾರೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತುಳುನಾಡಿನ ಶ್ರದ್ದಾಭಕ್ತಿಯ ಧಾರ್ಮಿಕ ಆಚರಣೆ ದೈವರಾಧನೆಗೆ ಒಂದಿಲ್ಲೊಂದು ಅಪಚಾರವಾಗುತ್ತಿದೆ. ಅದರಲ್ಲೂ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಬಂದ ಬಳಿಕ ಬೀದಿ ಬೀದಿಗಳಲ್ಲಿ ದೈವದ ವೇಷ ಭೂಷಣ ಹಾಕಿ ಅಣಕು ಪ್ರದರ್ಶನ ಮಾಡಲಾಗುತ್ತಿದೆ. ಇದರ ವಿರುದ್ದ ಕ್ರಮ ಕೈಗೊಳ್ಳಲು ದೈವರಾಧಕರು ಸರ್ಕಾರಕ್ಕೆ, ಆಡಳಿತ ವ್ಯವಸ್ಥೆಗೆ ಒತ್ತಾಯ ಮಾಡಿಕೊಂಡೆ ಬಂದಿದ್ದಾರೆ. ಆದರೆ ಇದೀಗ ಆಳುವ ಸರ್ಕಾರವೇ ದೈವರಾಧನೆಗೆ ಅಪಚಾರ ಎಸಗಿದೆ ಎಂದು ದೈವರಾಧಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಏಕಕಾಲದಲ್ಲಿ 9 ದೈವಗಳ ನರ್ತನೆ: ಇದು ಕರಾವಳಿಯಲ್ಲಿ ಮಾತ್ರ ನಡೆಯುವ ಏಕೈಕ ನವ ಗುಳಿಗ ಸೇವೆ

ರಾಜ್ಯ ಶಿಕ್ಷಣ ಇಲಾಖೆ ಮಾಡಿರುವ ಎಡವಟ್ಟಿನಿಂದ ದೈವ ಭಕ್ತರು ಸರ್ಕಾರದ ವಿರುದ್ದ ಸಮರ ಸಾರಿದ್ದಾರೆ. ಮಕ್ಕಳಿಗೆ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಅರಿವು ಮೂಡಿಸಲು ಶಾಲೆಗಳಲ್ಲಿ ರಂಗೋತ್ಸವ ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಶಾಲೆಗಳಿಗೂ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಆದರೆ ಈ ಸುತ್ತೋಲೆಯಲ್ಲಿ ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಬೊಂಬೆಯಾಟ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ‌ ಜೊತೆ ದೈವಾರಾಧನೆ ಸೇರ್ಪಡೆ ಮಾಡಿರುವುದು ದೈವರಾಧಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವ ಮಧು ಬಂಗಾರಪ್ಪ ವಿರುದ್ಧ ದೈವರಾಧಕರ ಆಕ್ರೋಶ

ದೈವರಾಧನೆ ರಂಗೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ಆಗುವ ಕಲೆಯಲ್ಲ. ಇದರಿಂದ ಸಮಸ್ತ ತುಳುನಾಡಿನ ದೈವಭಕ್ತರ ನಂಬಿಕೆಗೆ ಧಕ್ಕೆಯಾಗಿದೆ. ಈ ಸುತ್ತೋಲೆಯನ್ನು ವಾಪಾಸು ಪಡೆಯುವಂತೆ ದೈವರಾಧಕರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ದೈವರಾಧಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ಬಾರಿಯೂ ರಂಗೋತ್ಸವ ಕಾರ್ಯಕ್ರಮದಲ್ಲಿ ಇದೇ ರೀತಿ ಭೂತರಾಧನೆಯನ್ನು ಸೇರಿಸಲಾಗಿತ್ತು. ಬಳಿಕ ಮಾಜಿ ಸಚಿವ ಸುನೀಲ್ ಕುಮಾರ್ ಮನವಿ ಮೇರೆಗೆ ಕೈ ಬಿಡಲಾಗಿತ್ತು. ಈಗ ಮತ್ತೆ ಅದೇ ತಪ್ಪನ್ನು‌ ಮಾಡಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಶಿಕ್ಷಣ ಸಚಿವ ಮಧುಬಂಗಾರಪ್ಪ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ದೈವರಾಧನೆ ತುಳುನಾಡಿನ ಶ್ರದ್ಧಾ ಭಕ್ತಿಯ ಧಾರ್ಮಿಕ ಆಚರಣೆ. ಈ ಕಲೆಯು ಯಾವುದೇ ಮನರಂಜನೆ ಕಲೆ ಅಲ್ಲ. ತುಳುನಾಡಿನ ಆಚಾರ ವಿಚಾರಗಳಿಗೆ ಕಿಂಚಿತ್ತು ಧಕ್ಕೆಯಾದರೂ ಸಹಿಸಲ್ಲ. ಹೊರಡಿಸಿರುವ ಸುತ್ತೋಲೆಯಲ್ಲಿ ಭೂತರಾಧನೆ ಚಟುವಟಿಕೆಯನ್ನು ಕೂಡಲೇ ಕೈ ಬಿಡಬೇಕು. ಈ ಬಗ್ಗೆ ಇಲಾಖಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣಕನ್ನಡ ಜಿಲ್ಲೆ ಕುಂಪಲ ಗ್ರಾಮದಲ್ಲಿ ಸರಣಿ ಆತ್ಮಹತ್ಯೆ, ಅಪಘಾತಗಳಲ್ಲಿ ಸಾವು: ದೈವದ ಮುನಿಸೇ ಕಾರಣವಾಯ್ತಾ?

ಶಿಕ್ಷಣ ಇಲಾಖೆ ಹೊರಡಿಸಿರುವ ಈ ಸುತ್ತೋಲೆಗೆ ದೈವರಾಧಕರು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ರೀತಿ ರಿವಾಜು ಮೂಲಕ ಇಂತಹುದೇ ಸ್ಥಳದಲ್ಲಿ ನಡೆಯಬೇಕೆಂದು ಇರುವ ದೈವರಾಧನೆ ಇದೀಗ ಎಲ್ಲೆಂದರಲ್ಲಿ ನಡೆಯುತ್ತಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಜವಬ್ದಾರಿ ಎಲ್ಲರಲ್ಲೂ ಬರಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Follow Us