ದೇವತೆ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತ ಸ್ನೇಹಮಯಿ ಫೋಟೋಗೆ ಅರ್ಪಣೆ
ಮಂಗಳೂರಿನಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ನಲ್ಲಿ ಪ್ರಾಣಿ ಬಲಿಯ ವಿಡಿಯೋಗಳು ಪತ್ತೆಯಾಗಿವೆ. ಪೊಲೀಸರು ವಶಪಡಿಸಿಕೊಂಡ ವಿಡಿಯೋಗಳಲ್ಲಿ ಶಕ್ತಿ ದೇವತೆಯ ಮುಂದೆ ಪ್ರಾಣಿಗಳನ್ನು ಬಲಿ ಕೊಟ್ಟು ರಕ್ತವನ್ನು ಮುಡಾ ಹಗರಣದ ದೂರುದಾರರ ಫೋಟೋಗಳಿಗೆ ಹಚ್ಚಿರುವುದು ಕಂಡುಬಂದಿದೆ. ಈ ಘಟನೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದು, ಪ್ರಸಾದ್ ಅತ್ತಾವರ ಮತ್ತು ಅನಂತ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಂಗಳೂರು, ಜನವರಿ 31: ಮಸಾಜ್ ಪರ್ಲಾರ್ ಗಲಾಟೆಯಲ್ಲಿ ಬಂಧನವಾಗಿರುವ ಶ್ರೀರಾಮ ಸೇನೆ (Sriram Sena) ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಅಂಶ ಪೊಲೀಸರಿಗೆ (Police) ತಿಳಿದಿದೆ. ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು (Gangaraju) ಫೋಟೋಗೆ ಹಚ್ಚಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ. ಸರಣಿ ಪ್ರಾಣಿ ಬಲಿ ಮಾಡಿರುವ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಶಕ್ತಿ ತುಂಬಲು ಈ ರೀತಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣತಿಯಂತೆ ಕದ್ರಿ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ದೂರು ನೀಡಿದ್ದು, ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಮದ್ಯರಾತ್ರಿ 1.30ಕ್ಕೆ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಹೈಕೋರ್ಟ್ನಲ್ಲಿ ನ್ಯಾಯ ಸಿಕ್ಕು ಮುಡಾ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಭರವಸೆ ಇದೆ: ಸ್ನೇಹಮಯಿ ಕೃಷ್ಣ
ಪ್ರಾಣಿಬಲಿಗೆ ಪ್ರಸಾದ್ ಅತ್ತಾವರನನಿಂದ ಹಣ ವರ್ಗಾವಣೆ ಆರೋಪ
ಈ ಸಂಬಂಧ ತನಿಖೆಗೆ ಇಳಿದ ಪೊಲೀಸರಿಗೆ ಇನ್ನೂ ಹಲವು ವಿಚಾರಗಳು ತಿಳಿದಿವೆ. ಪ್ರಾಣಿಬಲಿ ಪೂಜೆ ಮಾಡಲು ಪ್ರಸಾದ್ ಅತ್ತಾವರ, ಅನಂತ್ ಭಟ್ ಎಂಬುವರಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಸಾದ್ ಅತ್ತಾವರ್, ಅನಂತ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸ್ನೇಹಮಹಿ ಕೃಷ್ಣ, ಗಂಗರಾಜು ಬಲ ತುಂಬಲು ಬಲಿ: ಪೊಲೀಸ್ ಆಯುಕ್ತ
ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗಮರ್ ವಾಲ್ ಮಾತನಾಡಿ, ಒಂದು ವಾರದ ಹಿಂದೆ ಪ್ರಸಾದ್ ಅತ್ತಾವರ ಬಂಧನ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಮೊಬೈಲ್ ಪರಿಶೀಲನೆ ಮಾಡಿದ್ದೇವೆ. ಮೊಬೈಲ್ನಲ್ಲಿದ್ದ ವಿಡಿಯೋದಲ್ಲಿ ದೇವಸ್ಥಾನದಲ್ಲಿ ಐದು ಕುರಿಗಳನ್ನು ಬಲಿ ಬಲಿಕೊಡವ ದೃಶ್ಯ ಇತ್ತು. ಸ್ನೇಹಮಹಿ ಕೃಷ್ಣ ಮತ್ತು ಗಂಗರಾಜು ಬಲ ತುಂಬಲು ಬಲಿ ಕೊಟ್ಟಿದ್ದಾರೆ ಎಂದು ಹೇಳಿದರು.
ಅನಂತ್ ಭಟ್ ಯಾರು ಅಂತ ತನಿಖೆ ಮಾಡುತ್ತಿದ್ದೇವೆ. ಬಲಿ ಎಲ್ಲಿ ಕೊಟ್ಟಿದ್ದಾರೆ ಎಂಬುವುದಕ್ಕೆ ಸ್ಪಷ್ಟತೆ ಇಲ್ಲ. ಪ್ರಾರಂಭಿಕ ಮಾಹಿತಿ ಪ್ರಕಾರ ಸ್ನೇಹಮಹಿ ಕೃಷ್ಣ ಮತ್ತು ಗಂಗರಾಜು ಅವರಿಗಾಗಿ ಬಲಿ ಕೊಡಲಾಗಿದೆ ಎಂದು ತಿಳಿದುಬಂದಿದೆ. ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಾಣಿ ಬಲಿ ನಿಷೇಧ ಇದೆ. ಹಣದ ಬ್ಯಾಗ್‌ನ ಫೋಟೋ ಕೂಡ ಇತ್ತು ಎಂದು ತಿಳಿಸಿದರು.
ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಬಂಧನ ಏಕೆ?
ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ಗೆ ರಾಮ ಸೇನಾ ಕಾರ್ಯಕರ್ತರು ನಿನ್ನೆ ಏಕಾಏಕಿ ನುಗ್ಗಿ ದಾಳಿ ಮಾಡಿದ್ದರು. ಪಾರ್ಲರ್ನಲ್ಲಿ ಅನೈತಿಕ ಚಟುವಟಿಕೆಯ ಆರೋಪಿಸಿ ದಾಳಿ ಮಾಡಿದ್ದರು. ಪಾರ್ಲರ್ನ ಪೀಠೋಪಕರಣ, ಕನ್ನಡಿ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪುಡಿ ಗೈದು ದಾಂಧಲೆ ಎಸಗಿದ್ದರು.
ಈ ವೇಳೆ ಯಾವುದೇ ಗ್ರಾಹಕರು ಇಲ್ಲವಾಗಿದ್ದು, ಸೆಲೂನ್ನಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ದಾಳಿಯ ವಿಡಿಯೋಗಳು ಲಭ್ಯವಾಗಿದ್ದು, 9 ರಿಂದ 10 ಕಾರ್ಯಕರ್ತರು ದಾಳಿ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿತ್ತು. ಘಟನೆ ಬೆನ್ನಲ್ಲೇ ಮಾಲೀಕರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಆಗಮಿಸಿ ಮಾಹಿತಿ ಪಡೆದಿದ್ದು, ಮಹಿಳಾ ಸಿಬ್ಬಂದಿ ಹೇಳಿಕೆ ದಾಖಲಿಸಿಕೊಂಡಿದ್ದರು.
ಈ ಘಟನೆ ಸಂಬಂಧ ದಕ್ಷಿಣ ಕನ್ನಡ ಪೊಲೀಸರು ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಿದ್ದಾರೆ. ಸದ್ಯ ಪ್ರಸಾದ್ ಅತ್ತಾವರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇವರು ಅರ್ಜಿ ವಾಪಸ್ ಪಡೆಯುವಂತೆ ನನಗೆ ಏಕೆ ಒತ್ತಡ ಹಾಕುತ್ತಿದ್ದರು: ಸ್ನೇಹಮಯಿ
ರಕ್ತಾಭಿಷೇಕ ವಿಚಾರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಈ ಹಿಂದೆ ಇವರು ಪಾರ್ವತಿ ಅವರ ಪರವಾಗಿ ಮಾತನಾಡಿದ್ದರು. ನನ್ನ ಶಕ್ತಿ ತುಂಬುವ ಕೆಲಸ ಮಾಡಿದ್ದರೆ ಅರ್ಜಿ ವಾಪಸ್ ಪಡೆಯುವಂತೆ ನನಗೆ ಏಕೆ ಒತ್ತಡ ಹಾಕುತ್ತಿದ್ದರು. ಯಾರು ಏನೇ ಮಾಡಿದರೂ ನಮ್ಮ ನಿರ್ಣಯ ಬದಲಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Fri, 31 January 25