ಕರ್ನಾಟಕದ ಸಹಕಾರಿ ಬ್ಯಾಂಕ್ಗೆ ಆರ್ಬಿಐ ಶಾಕ್: ಬರೋಬ್ಬರಿ 5 ಲಕ್ಷ ರೂ ದಂಡ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ನಿರ್ದೇಶಕರಿಗೆ ಅಕ್ರಮ ಸಾಲ ಮಂಜೂರು ಮಾಡಿದ ಆರೋಪದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ಲಕ್ಷ ರೂ. ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಉಲ್ಲಂಘನೆಯಿಂದಾಗಿ ಈ ದಂಡ ವಿಧಿಸಲಾಗಿದೆ. RBI ಮತ್ತಷ್ಟು ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದೆ.

ಮಂಗಳೂರು, ಏಪ್ರಿಲ್ 04: ಸಾಲಗಳ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ (SCDCC) ಭಾರಿ ಅಕ್ರಮ ಶಂಕೆ ವ್ಯಕ್ತವಾದ ಹಿನ್ನೆಲೆ 5 ಲಕ್ಷ ರೂ ದಂಡ ವಿಧಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷತೆಯ ಮಂಗಳೂರು ಡಿಸಿಸಿ ಬ್ಯಾಂಕ್, ಆರ್ಬಿಐ ನಿಯಮ ಉಲ್ಲಂಘಿಸಿ ತನ್ನ ನಿರ್ದೇಶಕರಿಗೆ ಸಾಲ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಆರ್ಬಿಐನಿಂದ ಡಿಸಿಸಿ ಬ್ಯಾಂಕ್ ಸಾಲಗಳ ಬಗ್ಗೆ ಉನ್ನತ ತನಿಖೆ ಸಾಧ್ಯತೆ ಇದೆ.
ಈ ಪ್ರಕ್ರಿಯೆಯು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಸೆಕ್ಷನ್ 20 ಮತ್ತು 56ನ ನಿಯಮಗಳನ್ನು ಉಲ್ಲಂಘಿಸುತ್ತದೆ. ಆರ್ಬಿಐ ಸೆಕ್ಷನ್ 47A(1)(c), 46(4)(i) ಮತ್ತು 56 ಅನುಸಾರ ದಂಡ ವಿಧಿಸಲಾಗಿದೆ. 2023ರ ಮಾರ್ಚ್ 31ರಲ್ಲಿ ನಬಾರ್ಡ್ ಡಿಸಿಸಿ ಬ್ಯಾಂಕಿನ ಹಣಕಾಸು ಸ್ಥಿತಿಯ ಪರಿಶೀಲನೆ ಮಾಡಿತ್ತು. ಪರಿಶೀಲನೆ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಆ ಬಳಿಕ ಮಂಗಳೂರು ಡಿಸಿಸಿ ಬ್ಯಾಂಕ್ಗೆ ಆರ್ಬಿಐ ನೋಟೀಸ್ ಕೂಡ ನೀಡಿತ್ತು.
ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿ ಸೇರಿ 14 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ, ಬೆಂಗಳೂರು ಹವಾಮಾನ ಹೇಗಿದೆ?
ಬ್ಯಾಂಕ್ ನಿಯಮಾನುಸಾರ ಕೆಲಸ ಮಾಡದೇ ಇದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಆರ್ಬಿಐ, ಸೆಕ್ಷನ್ 20ರಡಿ ಯಾವುದೇ ವಾಣಿಜ್ಯ ಬ್ಯಾಂಕ್ ತನ್ನ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ಸಂಸ್ಥೆಗಳಿಗೆ ಯಾವುದೇ ರೀತಿಯ ಸಾಲ ಅಥವಾ ಹಣಕಾಸು ಸಹಾಯವನ್ನು ನೀಡುವಂತಿಲ್ಲ. ಇದು ಬ್ಯಾಂಕ್ನ ಆಡಳಿತ ಮಂಡಳಿಯ ಮೇಲೆ ಆರ್ಥಿಕ ಪ್ರಭಾವ ಬೀರುವ ಸಾಧ್ಯತೆ ಇರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಹಿತಾಸಕ್ತಿಗೆ ಬ್ಯಾಂಕ್ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಮಾಡಲಾಗಿದೆ. ಈ ನಿಯಮವನ್ನು ಪರಸ್ಪರ ಹಿತಾಸಕ್ತಿಯ ಮುನ್ಸೂಚನೆ ನಿವಾರಿಸಲು ಮತ್ತು ಗ್ರಾಹಕರ ಠೇವಣಿಗಳ ಸುರಕ್ಷತೆ ಕಾಪಾಡಲು ರೂಪಿಸಲಾಗಿದೆ.
ಇದನ್ನೂ ಓದಿ: ಭಾರೀ ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್ಆರ್ ಸರ್ವಿಸ್ ರಸ್ತೆ
ಸೆಕ್ಷನ್ 56ರಡಿ ಸಹಕಾರಿ ಬ್ಯಾಂಕ್‌ಗಳಿಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕೆಲವು ನಿರ್ದಿಷ್ಟ ನಿಯಮಗಳನ್ನು ಅಳವಡಿಸಲಾಗಿದೆ. ಇದು ಸಹಕಾರಿ ಬ್ಯಾಂಕ್‌ಗಳು ಸಹ ವಾಣಿಜ್ಯ ಬ್ಯಾಂಕ್‌ಗಳಂತೆ ನಿರ್ವಹಿಸಬೇಕು. ಆದರೆ ಸಹಕಾರಿ ಮೂಲಭೂತ ತತ್ವಗಳನ್ನು ಅನುಸರಿಸಬೇಕು ಎಂಬ ದೃಷ್ಟಿಯಿಂದ ರೂಪಿಸಲಾಗಿದೆ. ಅಂದರೆ ಸಹಕಾರಿ ಬ್ಯಾಂಕ್‌ಗಳು ತಮ್ಮ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ವ್ಯಕ್ತಿಗಳಿಗೆ ಸಾಲ ನೀಡಬಾರದು. ಆದರೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ನಿಯಮ ಉಲ್ಲಂಘಿಸಿ ಸಾಲ ನೀಡಲಾಗಿದೆ. ಬ್ಯಾಂಕ್ ನಿಯಮಕ್ಕೆ ವಿರುದ್ದವಾಗಿ ತನ್ನ ನಿರ್ದೇಶಕರಿಗೆ ಸಂಬಂಧಿಸಿದ ಸಾಲವನ್ನು ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.