
ಮಂಗಳೂರು, ಸೆಪ್ಟೆಂಬರ್ 25): ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. 2025ರ ಮೇ ತಿಂಗಳಿನಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ನಡೆದಿತ್ತು. ಹತ್ಯೆ ವೇಳೆ ಆರೋಪಿಗಳ ಜೊತೆ ಕಲ್ಲಡ್ಕ ಪ್ರಭಾಕರ್ ಭಟ್ ನಿರಂತರ ಫೋನ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿದ್ದು, ನಾಳೆ (ಸೆ.26) ಕಲ್ಲಡ್ಕದ ಮನೆಯಲ್ಲೇ ಪ್ರಭಾಕರ್ ಭಟ್ ಅವರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಇನ್ನು ಪ್ರಭಾಕರ್ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಕ್ಕೆ ವಿಹೆಚ್ಪಿ ಮುಖಂಡ ಶರಣ್ ಪಂಪ್ ವೆಲ್ ಕೆಂಡವಾಗಿದ್ದಾರೆ. ಅಬ್ದುಲ್ ರೆಹಮಾನ್ ಹತ್ಯೆಗೂ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಏನು ಸಂಬಂಧ? ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಯನ್ನ ಟಾರ್ಗೆಟ್ ಮಾಡುತ್ತಿದೆ. ಯಾರನ್ನೋ ಮೆಚ್ಚಿಸಲು ಹಿಂದೂ ಸಂಘಟನೆಯನ್ನ ಟಾರ್ಗೆಟ್ ಮಾಡಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸುತ್ತಾರೆ. ನಮ್ಮ ಸಂಘಟನೆ ರಾಷ್ಟ್ರಕ್ಕೋಸ್ಕರ ಕೆಲಸ ಮಾಡುವ ಸಂಘಟನೆ. ನಮ್ಮನ್ನ ಮುಗಿಸುವ ಹುನ್ನಾರ ಮಾಡಿದ್ರೆ ಹಿಂದೂ ಬಾಂಧವರು ಉತ್ತರಿಸುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಚಾರಣೆ ನೆಪದಲ್ಲಿ ಪ್ರಭಾಕರ ಭಟ್ರನ್ನ ಬಂಧಿಸುವ ಹುನ್ನಾರ ನಡೆಯುತ್ತಿದೆ. 2 ಚಾರ್ಜ್ಶೀಟ್ ಆದ ಪ್ರಕರಣದಲ್ಲಿ ವಿಚಾರಣೆ ಏನಿದೆ? ಬಿ.ಸಿ.ರೋಡ್ ಚಲೋ ಹಮ್ಮಿಕೊಂಡ ಬೆನ್ನಲ್ಲೇ ನೋಟಿಸ್ ನೀಡಲಾಗಿದೆ. ಇದು ಹಿಂದೂಗಳ ಧ್ವನಿಯನ್ನು ಅಡಗಿಸುವಂತಹ ಪ್ರಯತ್ನ. ಕಲ್ಲಡ್ಕ ಪ್ರಭಾಕರ ಭಟ್ಗೆ ಕೊಟ್ಟ ನೋಟಿಸ್ ಹಿಂಪಡೆಯಿರಿ. ಇಲ್ಲದಿದ್ರೆ ಹಿಂದೂ ಕಾರ್ಯಕರ್ತರು ಬೀದಿಗಿಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ (ಕುರಿಯಾಲ ಗ್ರಾಮ) ಬಳಿ 2025ರ ಮೇ 25ರಂದು ಅಬ್ದುಲ್ ರೆಹಮಾನ್ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಕ್‌ಅಪ್ ಟ್ರಕ್‌ನಿಂದ ಮರಳು ಇಳಿಸುತ್ತಿದ್ದ ವೇಳೆ ಅಬ್ದುಲ್ ರೆಹಮಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಮೃತ ಅಬ್ದುಲ್ ಜೊತೆ ಕಲಂದರ್ ಶಫಿ ಮೇಲೆ ಗಂಭೀರ ಹಲ್ಲೆ ನಡೆಸಲಾಗಿತ್ತು. ಈ ಕೊಲೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಸುಹಾಸ್ ಶೆಟ್ಟಿ ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದರಿಂದ, ಇದು ಪ್ರತಿಕಾರದ ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.