ಸೌಜನ್ಯ ಕೇಸ್‌ಗೆ ಮರು ತನಿಖೆಗೆ ಪ್ರಮುಖ ಸಾಕ್ಷಿಯಾಗುತ್ತಾ ಚೂಡಿದಾರ್ ಟಾಪ್? ಮೆಟೀರಿಯಲ್ ಆಬ್ಜೆಕ್ಟ್ ನಂ 15ಕ್ಕೆ ಬಂತು ಮಹತ್ವ

ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ‘ಚೂಡಿದಾರ್ ಟಾಪ್’ ಎಂದು ಗುರುತಿಸಲಾದ ಮೆಟೀರಿಯಲ್ ಆಬ್ಜೆಕ್ಟ್ ನಂ 15 ಮಹತ್ವದ ಸಾಕ್ಷ್ಯವಾಗಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಇನ್ನೂ ಸಾಕ್ಷಿ ಮೌಲ್ಯ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ, ಅದರಲ್ಲಿನ ಡಿಎನ್​ಎ ಮಾದರಿಯನ್ನು ಹೊಸದಾಗಿ ಪತ್ತೆಯಾಗುವ ಶಂಕಿತರ ಡಿಎನ್​ಎಯೊಂದಿಗೆ ಹೋಲಿಕೆ ಮಾಡಬಹುದಾಗಿದೆ.

ಸೌಜನ್ಯ ಕೇಸ್‌ಗೆ ಮರು ತನಿಖೆಗೆ ಪ್ರಮುಖ ಸಾಕ್ಷಿಯಾಗುತ್ತಾ ಚೂಡಿದಾರ್ ಟಾಪ್? ಮೆಟೀರಿಯಲ್ ಆಬ್ಜೆಕ್ಟ್ ನಂ 15ಕ್ಕೆ ಬಂತು ಮಹತ್ವ
ಸೌಜನ್ಯ ಹಾಗೂ ಸುಪ್ರೀಂ ಕೋರ್ಟ್
Image Credit source: tv9
Edited By:

Updated on: Sep 22, 2026 | 11:19 AM

ಮುಖ್ಯಾಂಶಗಳು

  • ಮೆಟೀರಿಯಲ್ ಆಬ್ಜೆಕ್ಟ್ ನಂ 15ಗೆ ಸುಪ್ರೀಂ ಮಹತ್ವ
  • ಎಂಟು ಸಂಭಾವ್ಯ ಸಾಕ್ಷಿಗಳಿಗೂ ರಕ್ಷಣೆ
  • ಚೂಡಿದಾರ್ ಟಾಪ್​ನಲ್ಲಿ ಇತ್ತು ಆರೋಪಿಯನ್ನು ಹೊರತುಪಡಿಸಿದ ವ್ಯಕ್ತಿಗಳ ಕೂದಲು!

ಮಂಗಳೂರು. ಸೆಪ್ಟೆಂಬರ್ 22: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಮೆಟೀರಿಯಲ್ ಆಬ್ಜೆಕ್ಟ್ ನಂ 15 (Material Object No.15) ಮಹತ್ವದ ಸಾಕ್ಷ್ಯವಾಗಿ ಮುನ್ನೆಲೆಗೆ ಬಂದಿದೆ. ಸೌಜನ್ಯ ಅವರ ‘ಚೂಡಿದಾರ್ ಟಾಪ್’ ಎಂದು ಗುರುತಿಸಲಾಗಿರುವ ಮೆಟೀರಿಯಲ್ ಆಬ್ಜೆಕ್ಟ್ ನಂ 15ರಲ್ಲಿ ಪತ್ತೆಯಾಗಿರುವ ಡಿಎನ್​ಎ ಮಾದರಿಯು ಹೊಸ ತನಿಖೆಗೆ ಇನ್ನೂ ಸಾಕ್ಷಿ ಮೌಲ್ಯ (Evidentiary value) ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಸೆಷನ್ಸ್ ಕೋರ್ಟ್ ತೀರ್ಪಿನಲ್ಲಿನ ಹಲವು ಅಂಶಗಳನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ಮರುತನಿಖೆಗೆ ಸದ್ಯ ಲಭ್ಯವಿರುವ ಸಾಕ್ಷ್ಯಗಳನ್ನೇ ಬಳಸಿಕೊಳ್ಳಬಹುದು ಎಂದು ಸೂಚಿಸಿದೆ. ಬೆಂಗಳೂರು ಟಾಕ್ಸಿಕಾಲಜಿ ಡಿವಿಷನ್​​ನ ಸಹಾಯಕ ನಿರ್ದೇಶಕ ವಿನೋದ್ ಜೆ. ಲಕ್ಕಪ್ಪನ್ ಅವರು ಈ ಹಿಂದೆ ಡಿಎನ್​ಎ ವಿಶ್ಲೇಷಣೆ ನಡೆಸಿದ್ದರು. ಕೋರ್ಟ್‌ನಲ್ಲಿ ಸಾಕ್ಷ್ಯ ನೀಡುವ ವೇಳೆ ವಶಪಡಿಸಿಕೊಂಡ ವಸ್ತುಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದರು.

ಚೂಡಿದಾರ್ ಟಾಪ್​ನಲ್ಲಿ ಇತ್ತು ಆರೋಪಿಯನ್ನು ಹೊರತುಪಡಿಸಿದ ವ್ಯಕ್ತಿಗಳ ಕೂದಲು!

ವಸ್ತುಗಳು ತಮ್ಮ ಬಳಿ ಬಂದಾಗ ಅವುಗಳನ್ನು ತೆರೆದು ನೋಡುವುದಿಲ್ಲ ಎಂದು ವಿನೋದ್ ಜೆ. ಲಕ್ಕಪ್ಪನ್ ಹೇಳಿದ್ದರು. ಆದರೆ ಮೆಟೀರಿಯಲ್ ಆಬ್ಜೆಕ್ಟ್ ನಂ 15 ರಲ್ಲಿ ಆರೋಪಿಯನ್ನು ಹೊರತುಪಡಿಸಿ ಇತರ ವ್ಯಕ್ತಿಗಳ ಕೂದಲುಗಳೂ ಪತ್ತೆಯಾಗಿದ್ದವು ಎಂದು ಅವರು ಸಾಕ್ಷ್ಯ ನೀಡಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಪತ್ತೆಹಚ್ಚಿದರೆ ಅವರ ರಕ್ತದ ಮಾದರಿಗಳನ್ನು ಈಗಲೂ ಸಂಗ್ರಹಿಸಿ ಡಿಎನ್​ಎ ಪರೀಕ್ಷೆ ನಡೆಸಬಹುದು ಎಂದು ಅವರು ಹೇಳಿದ್ದರು. ಹೀಗಾಗಿ ಮೆಟೀರಿಯಲ್ ಆಬ್ಜೆಕ್ಟ್ ನಂ 15 ರಲ್ಲಿ ದೊರೆತ ಡಿಎನ್​ಎ ಮಾದರಿಯೊಂದಿಗೆ ಹೊಸದಾಗಿ ಪತ್ತೆಯಾಗುವ ಶಂಕಿತರ ಡಿಎನ್​​ಎಯನ್ನು ಹೋಲಿಕೆ ಮಾಡಲು ಸಾಧ್ಯವಿದೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಇದೇ ಕಾರಣಕ್ಕೆ ಪ್ರಕರಣದ ಮರುತನಿಖೆಗೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮತ್ತೆ ನಿರ್ಣಾಯಕವಾಗ್ತಾರಾ ಆ ಎಂಟು ಸಾಕ್ಷಿಗಳು?

ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ಎಂಟು ಸಂಭಾವ್ಯ ಸಾಕ್ಷಿಗಳೂ ಮತ್ತೆ ಮಹತ್ವ ಪಡೆಯುವ ಸಾಧ್ಯತೆಯಿದೆ. 2026ರ ಏಪ್ರಿಲ್ 29ರಂದು ಈ ಎಂಟು ಸಂಭಾವ್ಯ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದೇಶ ಹೊರಬಿದ್ದ ಮೂರು ವಾರಗಳೊಳಗೆ ಕರ್ನಾಟಕ ಸರ್ಕಾರ ಆ ಎಂಟು ಸಂಭಾವ್ಯ ಸಾಕ್ಷಿಗಳನ್ನು ಪತ್ತೆಹಚ್ಚಿ ರಕ್ಷಣೆ ನೀಡಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಸಾಕ್ಷಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದರೂ, ಈ ವ್ಯಕ್ತಿಗಳನ್ನು ಹಿಂದಿನ ಮೂರು ತನಿಖಾ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಏಕೆ ಪತ್ತೆಹಚ್ಚಿ ವಿಚಾರಿಸಲಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಈ ಎಂಟು ಸಾಕ್ಷಿದಾರರ ಬಗ್ಗೆ ಉಲ್ಲೇಖಿಸಿದ್ದರು. ಇವರಿಗೆ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ರಾಜ್ಯ ಸರ್ಕಾರ ಅವರನ್ನು ಪತ್ತೆಹಚ್ಚಿತ್ತು.

2024ರಲ್ಲಿ ಕರ್ನಾಟಕ ಹೈಕೋರ್ಟ್ ಮರುತನಿಖೆಯ ಅಗತ್ಯವನ್ನು ಒಪ್ಪಿಕೊಂಡಿದ್ದರೂ, ಬಹಳ ಸಮಯ ಕಳೆದಿರುವುದರಿಂದ ಈಗ ಸಾಕ್ಷ್ಯ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಮರುತನಿಖೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಇದೀಗ ಅರ್ಜಿದಾರರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಆ ನಿಲುವನ್ನು ಒಪ್ಪಿಲ್ಲ.

ಸಂತೋಷ್ ರಾವ್‌ಗೆ ಮತ್ತೆ ತನಿಖೆ ಇಲ್ಲ!

ಹೊಸ ಎಸ್ಐಟಿ ತನಿಖೆಯಿಂದ ಸಂತೋಷ್ ರಾವ್ ಅವರನ್ನು ಸುಪ್ರೀಂ ಕೋರ್ಟ್ ಹೊರಗಿಟ್ಟಿದೆ. ಈಗಾಗಲೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಖುಲಾಸೆಯಾಗಿರುವುದರಿಂದ ಸಂವಿಧಾನದ ವಿಧಿ 20(2) ಹಾಗೂ CrPC ಸೆಕ್ಷನ್ 300ರ ಅಡಿಯಲ್ಲಿ ಅವರಿಗೆ ರಕ್ಷಣೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೀಗಾಗಿ ಸಂತೋಷ್ ರಾವ್ ಅವರನ್ನು ಮತ್ತೊಮ್ಮೆ ತನಿಖೆಗೆ ಒಳಪಡಿಸುವುದು ಅಥವಾ ಅವರ ವಿರುದ್ಧ ಮತ್ತೊಮ್ಮೆ ವಿಚಾರಣೆ ಹಾಗೂ ಅಭಿಯೋಜನೆ ನಡೆಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಆದರೆ ಮಲ್ಲಿಕ್ ಜೈನ್, ದೀರಜ್ ಜೈನ್ ಹಾಗೂ ಉದಯ್ ಜೈನ್ ಅವರ ಪಾತ್ರಗಳ ಬಗ್ಗೆ ಎಸ್ಐಟಿ ಸ್ವತಂತ್ರವಾಗಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಹಾಗೆಂದು ಇದರಿಂದ ಅವರು ತಪ್ಪಿತಸ್ಥರು ಎಂದು ಅರ್ಥವಲ್ಲ ಎಂಬುದಾಗಿಯೂ ಉಲ್ಲೇಖಿಸಿರುವುದನ್ನು ಗಮನಿಸಬೇಕಾಗಿದೆ.

ಹೊಸ ಎಸ್ಐಟಿಗೆ ಮೂರು ತಿಂಗಳ ಗಡುವು

ಆಧುನಿಕ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಪೊಲೀಸ್ ಅಧಿಕಾರಿಗಳ ತಂಡವನ್ನು ಒಳಗೊಂಡಂತೆ ಹೊಸ ಎಸ್ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯದ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ತಂಡದ ನೇತೃತ್ವ ವಹಿಸಬೇಕು ಎಂದು ಸೂಚಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆ, ಸಿಐಡಿ ಅಥವಾ ಸಿಬಿಐ ವತಿಯಿಂದ ಪ್ರಕರಣದ ಹಿಂದಿನ ತನಿಖಾ ತಂಡಗಳಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಯನ್ನು ಹೊಸ ಎಸ್ಐಟಿಯಲ್ಲಿ ಸೇರಿಸಬಾರದು ಎಂದು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಕೇಸ್​​ ಮರು ತನಿಖೆಗೆ ಸುಪ್ರೀಂಕೋರ್ಟ್​ ಅಸ್ತು

ಹೊಸ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ, ಬಳಿಕ ಕಾನೂನು ಪ್ರಕಾರ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಪೊಲೀಸ್ ವರದಿ ಸಲ್ಲಿಸಬೇಕು. ನಂತರ ಪ್ರಕರಣವು ಕಾನೂನಿನ ಪ್ರಕಾರ ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಧರ್ಮಸ್ಥಳದ ಸೌಜನ್ಯ ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ

2012ರ ಅಕ್ಟೋಬರ್ 9ರಂದು ಉಜಿರೆಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ ಕಾಲೇಜಿನಿಂದ ಮನೆಗೆ ಮರಳುವ ವೇಳೆ ನಾಪತ್ತೆಯಾಗಿದ್ದರು. ಅಕ್ಟೋಬರ್ 10ರಂದು ನೇತ್ರಾವತಿ ನದಿ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದು, ಬಳಿಕ ಪ್ರಕರಣ ಸಿಐಡಿಗೆ ಹಾಗೂ 2013ರಲ್ಲಿ ಸಿಬಿಐಗೆ ವರ್ಗಾವಣೆಯಾಯಿತು. ಸಿಬಿಐ ಸಂತೋಷ್ ರಾವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಆದರೆ 2023ರ ಜೂನ್‌ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತು. ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ 2024ರಲ್ಲಿ ವಜಾಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ 2026ರ ಸೆಪ್ಟೆಂಬರ್ 21 ರಂದು ಪ್ರಕರಣದ ಮರುತನಿಖೆಗೆ ನಿರ್ದೇಶನ ನೀಡಿದ್ದು, ಹೊಸ ತನಿಖಾ ತಂಡವು ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿರುವುದು ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us