ದರ್ಶನ್ ಕೇಸ್ ಎಫೆಕ್ಟ್: ಜೈಲಲ್ಲಿ ಖೈದಿಗಳು ಸಿಗರೇಟ್ ಸೇದುವ ಹಾಗಿಲ್ಲ; ಸುಪ್ರೀಂ ಖಡಕ್ ಸೂಚನೆ
Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ನಟ ದರ್ಶನ್ ಜಾಮೀನು ರದ್ದಾಗಿದೆ. ವಿಚಾರಣೆ ವೇಳೆ ಹೈಕೋರ್ಟ್ ಆದೇಶಗಳ ಲೋಪವನ್ನು ಎತ್ತಿ ತೋರಿಸಿದ ಸುಪ್ರೀಂ, ಇನ್ನು ಮುಂದೆ ಜೈಲಲ್ಲಿ ಖೈದಿಗಳು ಸಿಗರೇಟ್ ಸೇದಿದರೆ ಅಥವಾ ರಾಜ್ಯಾತಿಥ್ಯದ ಫೋಟೋ ಕಂಡು ಬಂದರೆ ಕ್ರಮಕೈಗೊಳ್ಳುವಂತೆ ಖಡಕ್ ಎಚ್ಚರಿಕೆ ನೀಡಿದೆ.

ಬೆಂಗಳೂರು, ಆಗಸ್ಟ್ 14: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan), ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ (Supreme Court) ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶಗಳ ಲೋಪವನ್ನು ಸುಪ್ರೀಂ ಎತ್ತಿ ತೋರಿಸಿದೆ. ಆ ಮೂಲಕ ಇನ್ನು ಮುಂದೆ ಆರೋಪಿಗಳು ಜೈಲಿನಲ್ಲಿ ಸಿಗರೇಟ್ ಸೇದಿದ ಅಥವಾ ರಾಜ್ಯಾತಿಥ್ಯದ ಯಾವುದೇ ಫೋಟೋ ಕಂಡು ಬಂದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ
ಸುಪ್ರೀಂಕೋರ್ಟ್ನ ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಪ್ರಕರಣ ವಿಚಾರಣೆ ಮಾಡಿದ್ದು, ಆರೋಪಿ ಎಷ್ಟೇ ದೊಡ್ಡವರಿದ್ದರೂ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಹೇಳಿದರು.
ಇದನ್ನೂ ಓದಿ: SC on Darshan Bail: ‘ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ದರ್ಶನ್ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್
ಇನ್ನು ಮುಂದೆ ರಾಜ್ಯಾತಿಥ್ಯದ ಯಾವುದೇ ಫೋಟೋ, ವಿಡಿಯೋ ಕಂಡು ಬಂದರೆ, ಆರೋಪಿ ಜೈಲಿನ ಲಾನ್ನಲ್ಲಿ ಕುಳಿತು ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಇದು ಲ್ಯಾಂಡ್ ಮಾರ್ಕ್ ತೀರ್ಪು. ಈ ತೀರ್ಪಿನ ಪ್ರತಿ ಎಲ್ಲಾ ಹೈಕೋರ್ಟ್ಗಳಿಗೆ ಮತ್ತು ಜೈಲುಗಳಿಗೂ ಕಳುಹಿಸುವಂತೆ ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು ರದ್ದು
ರೇಣುಕಾಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್ ಜೈಲು ಪಾಲಾಗಿದ್ದರು. ಬಳಿಕ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ದರ್ಶನ್ ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ಎಲ್ಲೆಡೆ ಹರಿದಾಡಿತ್ತು. ಇದು ಸಾಕಷ್ಟು ಸಂಚಲನಕ್ಕೂ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಇದು ಸರ್ಕಾರಕ್ಕೆ ಮುಜುಗರ ಕೂಡ ತಂದಿತ್ತು. ಬಳಿಕ ವಿಚಾರ ಗೊತ್ತಾದ ತಕ್ಷಣ 9 ಸಿಬ್ಬಂದಿ ಅಮಾನತು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 am, Thu, 14 August 25








