ತುಕ್ಕು ಹಿಡಿದಿರುವ ಕಬ್ಬಿಣದ ರಾಡ್​ಗಳು, ಬಿರುಕು ಬಿಟ್ಟಿರುವ ಪಿಲ್ಲರ್​ಗಳು; ದಾವಣಗೆರೆ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ‘ಅನಾರೋಗ್ಯ’!

ದಾವಣಗೆರೆಯ ಐತಿಹಾಸಿಕ ಚಿಗಟೇರಿ ಜಿಲ್ಲಾಸ್ಪತ್ರೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮೇಲ್ಚಾವಣಿ ಪದರ ಕುಸಿದು ಮಗು ಸೇರಿ ಮೂವರು ಗಾಯಗೊಂಡಿದ್ದಾರೆ. ರೋಗಿಗಳು ಹಾಗೂ ಸಿಬ್ಬಂದಿ ಪ್ರಾಣಭಯದಲ್ಲೇ ಚಿಕಿತ್ಸೆ ಪಡೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ಕಟ್ಟಡ ತೆರವುಗೊಳಿಸಿ 7 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಹೊಸ ಆಸ್ಪತ್ರೆ ನಿರ್ಮಿಸಲು ಸರ್ಕಾರ ಯೋಜಿಸಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ತುಕ್ಕು ಹಿಡಿದಿರುವ ಕಬ್ಬಿಣದ ರಾಡ್​ಗಳು, ಬಿರುಕು ಬಿಟ್ಟಿರುವ ಪಿಲ್ಲರ್​ಗಳು; ದಾವಣಗೆರೆ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ‘ಅನಾರೋಗ್ಯ’!
ಚಿಗಟೇರಿ ಜಿಲ್ಲಾಸ್ಪತ್ರೆ
Edited By:

Updated on: Nov 02, 2026 | 10:54 AM

ಮುಖ್ಯಾಂಶಗಳು

  • ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಕುಸಿಯುವ ಹಂತದಲ್ಲಿದೆ.
  • ಮೇಲ್ಚಾವಣಿ ಕುಸಿದು ಮಗು ಸೇರಿ ಮೂವರು ರೋಗಿಗಳಿಗೆ ತೀವ್ರ ಗಾಯವಾಗಿದೆ.
  • ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಆಸ್ಪತ್ರೆ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ದಾವಣಗೆರೆ, ನವೆಂಬರ್ 02: ಮೈಸೂರು ಮಹಾರಾಜರ ಕಾಲದಲ್ಲಿ ದಾನಿಗಳಾದ ಚಿಗಟೇರಿ ಮರುಗೇಂದ್ರಪ್ಪ ಅವರು ಬಡವರ ಆರೋಗ್ಯಕ್ಕಾಗಿ ನಿರ್ಮಿಸಿಕೊಟ್ಟಿದ್ದ ಐತಿಹಾಸಿಕ ಚಿಗಟೇರಿ ಜಿಲ್ಲಾಸ್ಪತ್ರೆ ಇಂದು ಅವ್ಯವಸ್ಥೆಯ ಆಗರವಾಗಿದ್ದು, ಕುಸಿಯುವ ಹಂತ ತಲುಪಿದೆ. ದಾವಣಗೆರೆ ಮಾತ್ರವಲ್ಲದೆ ಹಾವೇರಿ, ವಿಜಯನಗರ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ನಂಬಿಕೊಂಡು ಬರುವ ಈ ಬೃಹತ್ ಸರ್ಕಾರಿ ಆಸ್ಪತ್ರೆ ಈಗ ಅಕ್ಷರಶಃ ‘ಡೆಂಜರ್ ಜೋನ್’ ಆಗಿದೆ.

ಮೇಲ್ಚಾವಣಿ ಕುಸಿದು ಮಗು ಸೇರಿ ಮೂವರಿಗೆ ಗಾಯ

ಅರ್ಧ ಶತಮಾನಕ್ಕೂ ಹಳೆಯದಾದ ಈ ಆಸ್ಪತ್ರೆಯ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿವೆ. ತುರ್ತು ಚಿಕಿತ್ಸಾ ಘಟಕದ ಎದುರಿನ ಮುಖ್ಯ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಪದರುಗಳು ಅನಿರೀಕ್ಷಿತವಾಗಿ ಉದುರುತ್ತಿವೆ. ಇತ್ತೀಚೆಗೆ ಮೇಲ್ಚಾವಣಿಯ ಸಿಮೆಂಟ್ ಪದರ ಬಿದ್ದು 2 ವರ್ಷದ ಮಗುವಿನ ತಲೆಗೆ ತೀವ್ರ ಪೆಟ್ಟಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಗೊಂಡಿದ್ದರು. ಕಟ್ಟಡವು ಬಳಕೆಗೆ ಸಂಪೂರ್ಣ ಯೋಗ್ಯವಾಗಿಲ್ಲ ಎಂದು ತಜ್ಞರ ಸಮಿತಿ ಸ್ಪಷ್ಟ ವರದಿ ನೀಡಿದ್ದರೂ, ಅನಿವಾರ್ಯವಾಗಿ ರೋಗಿಗಳಿಗೆ ಇದೇ ಕಟ್ಟಡದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪ್ರತಿದಿನ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಪ್ರಾಣಭಯದಲ್ಲೇ ಕಾಲ ಕಳೆಯುವಂತಾಗಿದೆ.

ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದ ಪ್ಲ್ಯಾನ್

ಪ್ರಾಣಾಘಾತಕ ಸ್ಥಿತಿಯಲ್ಲಿರುವ ಹಳೆಯ ಕಟ್ಟಡವನ್ನು ದುರಸ್ಥಿ ಮಾಡುವ ಬದಲು, ಸಂಪೂರ್ಣವಾಗಿ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಿದೆ. 7 ಎಕರೆ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ತಾತ್ಕಾಲಿಕವಾಗಿ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಿ ಕಾಮಗಾರಿ ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ರೋಗಿಗಳ ಆತಂಕ

ಸರ್ಕಾರ ಹೊಸ ಆಸ್ಪತ್ರೆ ನಿರ್ಮಿಸುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹವಾದರೂ, ಕಾಮಗಾರಿ ಪೂರ್ಣಗೊಳ್ಳುವವರೆಗೆ ಬಡ ರೋಗಿಗಳು ಎಲ್ಲಿಗೆ ಹೋಗಬೇಕು ಎಂಬ ಆತಂಕ ಮೂಡಿದೆ. ಯಾವುದೇ ಪ್ರಾಣಾಪಾಯ ಸಂಭವಿಸುವ ಮುನ್ನ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಕಾಲಮಿತಿಯೊಳಗೆ ಅತ್ಯಾಧುನಿಕ ಸೌಲಭ್ಯಗಳ ಹೊಸ ಆಸ್ಪತ್ರೆಯನ್ನು ನಿರ್ಮಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us