AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಪಾಪ್‌ಕಾರ್ನ್ ಮೆಕ್ಕೆಜೋಳಕ್ಕೆ ಗಿಳಿಗಳ ಕಾಟ; ಕಂಗಾಲಾದ ರೈತ

ಕಳೆದ ಬಾರಿ ಭೀಕರ ಬರದಿಂದ ಕಂಗಾಲಾಗಿದ್ದ ರೈತರಿಗೆ, ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಬೆಳೆ ಕೂಡ ಉತ್ತಮವಾಗಿ ಬಂದಿದ್ದು, ಕೈತುಂಬ ಆದಾಯಗಳಿಸುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಬೆಳೆಯ ಮೇಲೆ ಗಿಳಿಗಳ ಹಿಂಡು ದಾಳಿ ಮಾಡಿ ಬೆಳೆಯನ್ನ ತಿಂದು ಹಾಕುತ್ತಿರುವುದು ರೈತರ ನಿದ್ದೆಗೆಡಿಸಿದೆ. ಹಾಗಿದ್ದರೆ ಯಾವುದು ಆ ಬೆಳೆ, ಗಿಳಿಗಳ ಹಿಂಡು ದಾಳಿ ಮಾಡುತ್ತಿರೋದಾದರೂ ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.

ದಾವಣಗೆರೆ: ಪಾಪ್‌ಕಾರ್ನ್ ಮೆಕ್ಕೆಜೋಳಕ್ಕೆ ಗಿಳಿಗಳ ಕಾಟ; ಕಂಗಾಲಾದ ರೈತ
ದಾವಣಗೆರೆ: ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಗೆ ಗಿಳಿಗಳ ಕಾಟ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Aug 20, 2024 | 10:23 PM

Share

ದಾವಣಗೆರೆ, ಆ.20: ಬೆಳೆದಿರುವ ಬೆಳೆಯನ್ನು ಗಿಳಿಗಳಿಂದ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ತಮಟೆ, ತಟ್ಟೆ ಬಡಿಯುತ್ತಾ ಜಮೀನಿನಲ್ಲಿ ಓಡಾಡುತ್ತಿದ್ದಾರೆ. ಹೌದು, ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಬ್ಬಿಗೆರೆ, ಸಂತೇಬೆನ್ನೂರು ಹೋಬಳಿಯಲ್ಲಿ ಏಳು ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಅದರಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಪಾಪ್​ಕಾರ್ನ್ ಮೆಕ್ಕೆಜೋಳವನ್ನು ಬಿತ್ತನೆ ಮಾಡಲಾಗಿದೆ. ಈ ಬಾರಿ ಉತ್ತಮವಾಗಿ ಮಳೆ ಆಗಿದ್ದರಿಂದ ಬೆಳೆ ಕೂಡ ಉತ್ತಮವಾಗಿ ಬೆಳೆದಿದ್ದು, ಈಗ ಕಾಳು ಕಟ್ಟಲು ಆರಂಭವಾಗಿದೆ. ಆದರೆ, ಇದೀಗ ಮೆಕ್ಕೆಜೋಳ ಬೆಳೆಯ ಮೇಲೆ ಗಿಳಿಗಳ ಹಿಂಡು ದಾಳಿ ಮಾಡುತ್ತಿದ್ದು, ಹಾಲು ಕಾಳುಗಳನ್ನು ತಿಂದು ಹಾಕುತ್ತಿರುವುದರಿಂದ ರೈತರು ನಿದ್ದೆಗೆಡುವಂತೆ ಮಾಡಿದೆ.

ರೈತರು ಸಾಲ ಸೋಲ ಮಾಡಿ ದುಬಾರಿ ಬೆಲೆಯ ಪಾಪ್​ಕಾರ್ನ್ ಮೆಕ್ಕೆಜೋಳದ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬಂದಿದ್ದರಿಂದ ಬೆಳೆ ಕೂಡ ಹುಲುಸಾಗಿ ಬೆಳೆದಿತ್ತು. ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರಬೇಕು ಎನ್ನುವಷ್ಟರಲ್ಲಿ ಗಿಳಿಗಳ ಹಾವಳಿಯಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಸಾವಿರಾರು ಗಿಳಗಳ ಹಿಂಡು ಪ್ರತಿದಿನ ಮೆಕ್ಕೆಜೋಳದ ಜಮೀನಿಗೆ ಲಗ್ಗೆ ಇಡುತ್ತಿದ್ದು, ರೈತರು ತಮಟೆ ಬಾರಿಸಿ, ತಟ್ಟೆ ಬಾರಿಸಿ, ಮೈಕ್​ಗಳ ಮೂಲಕ ಗಿಳಿಗಳನ್ನು ಓಡಿಸಿದರೂ ಪುನಃ ಹಾರಿ ಬಂದು ಕಾಳು ತಿನ್ನುತ್ತಾ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ರೈತರ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ:ಎಳೆ ಜೋಳ ತಿಂದು ರೈತರ ಜೊತೆ ಜೂಟಾಟ ಆಡುತ್ತಿರುವ ಗಿಳಿಗಳು! ತೆನೆ ರಕ್ಷಣೆಗೆ ಹಾವೇರಿ ಅನ್ನದಾತನ ಹರಸಾಹಸ

ಒಟ್ಟಿನಲ್ಲಿ ಕಳೆದ ವರ್ಷ ಬರಗಾಲದಿಂದ ನಷ್ಟ ಅನುಭವಿಸಿದ್ದ ರೈತರಿಗೆ ಈ ಬಾರಿ ಗಿಳಿಗಳ ದಾಳಿ, ಗಾಯದ ಮೇಲೆ ಬರೆ ಎಳೆದಂತಾಗಿದೆ. ಏನೇ ಆಗಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೆಳೆ ಕೆಳೆದುಕೊಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ರೈತರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:22 pm, Tue, 20 August 24