ಟಿಕೆಟ್ ಹಂಚಿಕೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿಯಿಂದ ಅನ್ಯಾಯ: ವಚನಾನಂದ ಶ್ರೀ
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಆದರೆ, ಟಿಕೆಟ್ ಹಂಚಿಕೆ ವಿಚಾರವಾಗಿ ಕರ್ನಾಟಕದಲ್ಲಿ ಬಹುಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ತಪ್ಪಿಸಲಾಗಿದೆ ಎನ್ನುವ ಆರೋಪವನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಆರೋಪಿಸಿದ್ದಾರೆ.
ದಾವಣಗೆರೆ, ಮಾ.25: ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihar) ತಾಲೂಕಿನ ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ (Vachanananda Swamiji) ಆರೋಪಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ನಮ್ಮ ಸಮಾಜ ನಿರ್ಲಕ್ಷಿಸಿವೆ ಎಂದಿದ್ದಾರೆ.
ಹನಗವಾಡಿ ಬಳಿ ಮಾತನಾಡಿದ ಸ್ವಾಮೀಜಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 2, ಬಿಜೆಪಿ 1 ಟಿಕೆಟ್ ನೀಡಿದೆ. ಆದರೆ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಿಲ್ಲ. ಅನ್ಯಾಯ ಸರಿಪಡಿಸದಿದ್ದರೆ ಸಮಾಜ ಒಗ್ಗಟ್ಟಿನ ಮಂತ್ರ ಪಠಿಸಲು ಹಾಗೂ ಹರಿಹರ ಪೀಠದ ನೇತೃತ್ವದಲ್ಲಿ ಹೋರಾಟ ನಡೆಸಲು ತೀರ್ಮಾನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲೇ ಟಿಕೆಟ್ ನೀಡಿಲ್ಲ. ಕಡಿಮೆ ಜನಸಂಖ್ಯೆವುಳ್ಳ ಸಮುದಾಯಕ್ಕೆ ನಾಲ್ಕಕ್ಕಿಂತ ಹೆಚ್ಚಿನ ಟಿಕೆಟ್ ನೀಡಲಾಗಿದೆ. ಬಹುಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ತಪ್ಪಿಸಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ 3 ಸೀಟ್ ನೀಡಬೇಕೆಂದು ಆಗ್ರಹ ಇದೆ. ಅಭ್ಯರ್ಥಿಗಳಿಗೆ ಬಿ ಫಾರಂ ಕೊಡಲು ಇನ್ನೂ ಸಮಯಾವಕಾಶವಿದೆ. ಟಿಕೆಟ್ ಕೊಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಗೆ ಲಿಂಗಾಯತ ಮುಖಂಡರಿಂದ ಒತ್ತಡ
ಸುಮಾರು 15 ಲೋಕಸಭಾ ಕ್ಷೇತ್ರಗಳಲ್ಲಿ ಪರಿಣಾಮ ಬೀರಬಲ್ಲ ಪಲಿತಾಂಶ ನಿರ್ಣಾಯಕ ಶಕ್ತಿ ನಮ್ಮ ಸಮುದಾಯಕ್ಕಿದೆ. ರಾಜ್ಯದ ಆಕಾಂಕ್ಷಿಗಳು ನಮಗೆ ಕರೆ ಮಾಡಿ ತಮಗಾದ ಅನ್ಯಾಯ ತೋಡಿಕೊಂಡಿದ್ದಾರೆ. ಟಿಕೇಟ್ ಹಂಚುವ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಪಕ್ಷದಲ್ಲಿನ ನಿಷ್ಠಾವಂತ ನಾಯಕರಿಗೆ ಟಿಕೇಟ್ ಕೊಡಿ. ಇಲ್ಲವಾದರೆ ವ್ಯತಿರಿಕ್ತ ಪರಿಣಾಮಗಳುಂಟಾಗುವ ಸಾಧ್ಯತೆ ಇದೆ ಎಂದರು.
ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಪಂಚಮಸಾಲಿ ಸಬಲವಾಗಿದೆ. 80 ಲಕ್ಷ ಜನಸಂಖ್ಯೆ ಇರುವ ಸಮುದಾಯಕ್ಕೆ ಅನ್ಯಾಯವಾಗಿದೆ. ಸಮಾಜದ ಸದ್ಗುರು ಜೊತೆಗೂಡಿ ರಾಜ್ಯಾದಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ