ಹುಬ್ಬಳ್ಳಿಯಲ್ಲಿ ಮತ್ತೊಬ್ಬ ರೌಡಿಶೀಟರ್ ಫಜಲ್ ಅಹ್ಮದ್ ಗಡಿಪಾರು, ಇನ್ನುಳಿದವರೆಗೂ ಖಡಕ್ ಎಚ್ಚರಿಕೆ
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಚ್ಚೆತ್ತ ಹುಬ್ಬಳ್ಳಿ ಪೊಲೀಸರು, ರೌಡಿಶೀಟರ್ಗಳನ್ನು ಗಡಿಪಾರು ಮಾಡುವ ಮೂಲಕ ಖಡಕ್ ಎಚ್ಚರಿಕೆ ಕೊಡುತ್ತಿದ್ದಾರೆ. ಅದರಂತೆ ಇಂದು ಬೆಂಡಿಗೇರಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆದ ಫಜಲ್ ಅಹ್ಮದ್ ಪುಣೆವಾಲೆ ಎಂಬುವವನನ್ನು ಬೀದರ್ ಜಿಲ್ಲೆಗೆ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆದೇಶಿಸಿದ್ದಾರೆ.
ಹುಬ್ಬಳ್ಳಿ, ಫೆ.23: ಇನ್ನೇನು ಲೋಕಸಭೆ ಚುನಾವಣೆ(Lok Sabha Elections) ಹತ್ತಿರ ಬರುತ್ತಿದೆ. ಈ ಹಿನ್ನಲೆ ಎಚ್ಚೆತ್ತ ಹುಬ್ಬಳ್ಳಿ ಪೊಲೀಸರು ಮತ್ತೊಬ್ಬ ರೌಡಿಶೀಟರ್(Rowdy Sheeter) ಫಜಲ್ ಅಹ್ಮದ್ ಪುಣೆವಾಲೆ ಎಂಬುವವನನ್ನು ಗಡಿಪಾರು ಮಾಡಿದ್ದಾರೆ. ಬೆಂಡಿಗೇರಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆದ ಇತ, ಹುಬ್ಬಳ್ಳಿಯ ಮಂಟೂರು ರಸ್ತೆಯ ಮಿಲ್ಲತ್ ನಗರ ನಿವಾಸಿ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಕೇಳಿಬಂದಿದೆ. ಇದರಿಂದ ಬೀದರ್ ಜಿಲ್ಲೆಗೆ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆದೇಶಿಸಿದ್ದಾರೆ.
ಆರು ತಿಂಗಳ ಅವಧಿಗೆ ಬೀದರ್ ಜಿಲ್ಲೆಗೆ ಗಡಿಪಾರು
ಎಲೆಕ್ಟ್ರೀಷಿಯನ್ ಉದ್ಯೋಗ ಮಾಡುತ್ತಿರುವ ಫಜಲ್, ಬಡಜನರ ಮೇಲೆ ಹಲ್ಲೆ, ಕೂಲಿ, ಹಮಾಲಿ, ಸಣ್ಣಪುಟ್ಟ ವ್ಯಾಪಾರ ಮಾಡುವವರ ಮೇಲೆ ದೌರ್ಜನ್ಯ ಜೊತೆಗೆ ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಸುತ್ತಿದ್ದ ಆರೋಪ ಬಂದಿದೆ. ಅಷ್ಟೇ ಅಲ್ಲ, ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುತ್ತಾ ರೌಡಿಸಂ ತೋರಿಸುತ್ತಿದ್ದ. ಕೆಲವರ ಕೊಲೆಗೂ ಪ್ರಯತ್ನಿಸುವ ಜೊತೆಗೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸಿದ್ದ. ಇತನ ಮೇಲೆ ಬೆಂಡಿಗೇರಿ, ವಿದ್ಯಾನಗರ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದ ಹಿನ್ನಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದ ಫಜಲ್, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಜೈಲಿನಿಂದ ಯುವತಿ ನಗ್ನ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ; ರೌಡಿಶೀಟರ್, ಸಹಚರರ ಬಂಧಿಸಿದ ಸಿಸಿಬಿ
ಅಪರಾಧ ಕೃತ್ಯದಲ್ಲಿ ಭಾಗಿಯಾಗುವವರ ವಿರುದ್ದ ಕ್ರಮ
ಹುಬ್ಬಳ್ಳಿ ನಗರ ವ್ಯಾಪ್ತಿಯ ರೌಡಿಶೀಟರ್ಗಳ ವಿರುದ್ಧ ಕ್ರಮದ ಕುರಿತು ಮಾತನಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ‘ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಕಳೆದ ಎರಡು ತಿಂಗಳಲ್ಲಿ ನಾಲ್ವರು ರೌಡಿಶೀಟರ್ಗಳ ಗಡಿಪಾರು ಮಾಡಿದ್ದೇವೆ. ಕಳೆದ ವರ್ಷ 24 ರೌಡಿಶೀಟರ್ಗಳನ್ನು ಗಡಿಪಾರು ಮಾಡಲಾಗಿತ್ತು. ಈ ವರ್ಷ 1,500 ರೌಡಿಶೀಟರ್ಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ರೌಡಿಶೀಟರ್ಗಳನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:24 pm, Fri, 23 February 24