ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ನಾಯಕಿ ಸೇರಿ 9 ಮಂದಿ ವಿರುದ್ಧ ಕೇಸ್
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿ ಅರೆನಗ್ನಗೊಳಿಸಿದ ಪ್ರಕರಣ ಸಂಬಂಧ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ಸೇರಿ 9 ಜನರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಗಂಭೀರ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯ ನಂತರ ಕೇಶ್ವಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಬ್ಬಳ್ಳಿ, ಜನವರಿ 8: ಬಿಜೆಪಿ (BJP) ಕಾರ್ಯಕರ್ತೆಯ ಅರೆನಗ್ನಗೊಳಿಸಿ ಹಲ್ಲೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ (Hubballi) ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ (Congress) ಸದಸ್ಯೆ ಸುವರ್ಣಾ ಕಲಕುಂಟ್ಲಾ, ಡೇವಿಡ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ, ಗಲಭೆ ಸೇರಿ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಜನವರಿ 2ರಂದು ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ, ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ ಸಹೋದರ ಮರಿಯಾದಾಸ್ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109, 115(2), 118(1), 189(2), 191(2), 74, 190 ಹಾಗೂ 351ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದ್ದರು. ಮಾಜಿ ಶಾಸಕ ಸೀಮಾ ಮಸೂತಿ, ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ್ ಚೌಹಾಣ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಬುಧವಾರ ಸಂಜೆ 7 ಗಂಟೆಯವರೆಗೆ ಮುಂದುವರಿದಿತ್ತು. ಪ್ರತಿಭಟನೆಯ ಒತ್ತಡದ ಬೆನ್ನಲ್ಲೇ ಕೇಶ್ವಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಎರಡು ಕುಟುಂಬಗಳ ವೈಯಕ್ತಿಕ ಜಗಳಕ್ಕೆ ರಾಜಕೀಯ ಬಣ್ಣ?
ಈ ಪ್ರಕರಣಕ್ಕೆ ಎರಡು ಕುಟುಂಬಗಳ ನಡುವಿನ ಹಳೆಯ ವೈಯಕ್ತಿಕ ವೈಷಮ್ಯ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಹಾಗೂ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ನಡುವೆ ಕಳೆದ ಕೆಲ ವರ್ಷಗಳಿಂದ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆಯುತ್ತಿದ್ದು, ಏರಿಯಾದಲ್ಲಿ ಹಿಡಿತ ಸಾಧಿಸುವ ಪೈಪೋಟಿ ಇದಕ್ಕೆ ಕಾರಣ ಎನ್ನಲಾಗಿದೆ. ಮೊದಲು ಸುವರ್ಣಾ ಕಲಕುಂಟ್ಲಾ ಜೊತೆಗೆ ಇದ್ದ ಸುಜಾತಾ ಹಂಡಿ, ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಿಕೊಂಡ ಬಳಿಕ ಇಬ್ಬರ ನಡುವಿನ ವೈಷಮ್ಯ ಮತ್ತಷ್ಟು ತೀವ್ರಗೊಂಡಿದೆ. ಈ ವೈಯಕ್ತಿಕ ಜಗಳವೇ ಇದೀಗ ರಾಜಕೀಯ ಆಯಾಮ ಪಡೆದು ದೊಡ್ಡ ರಾದ್ದಾಂತಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿ ಕಾರ್ಯಕರ್ತೆಯ ಅರೆನಗ್ನಗೊಳಿಸಿ ಹಲ್ಲೆ ಪ್ರಕರಣದ ಹಿನ್ನೆಲೆ
ಜನವರಿ 5ರಂದು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ ವೇಳೆ, ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಂಧನದ ಸಮಯದಲ್ಲಿ ಪೊಲೀಸ್ ವಾಹನದಲ್ಲೇ ಸುಜಾತಾ ಅರೆನಗ್ನ ಸ್ಥಿತಿಯಲ್ಲಿ ಇರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ವರ್ತನೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆ ನಡೆಸಿ, ಆರೋಪಿತ ಪೊಲೀಸರ ಅಮಾನತಿಗೆ ಆಗ್ರಹಿಸಿದ್ದರು.
ಇದನ್ನೂ ಓದಿ: BJP ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿದ್ದು ಯಾರು? ಮಹಿಳೆಯ ಹೈಡ್ರಾಮಾವೋ? ಪೊಲಿಸರ ಕ್ರೌರ್ಯವೋ?
ಆದರೆ ಪೊಲೀಸರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಮಹಿಳೆ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಹಲ್ಲೆ ಆರೋಪ ಹಾಗೂ ವಿಡಿಯೋ ವೈರಲ್ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಇತ್ತ, ಈ ಘಟನೆ ಕಾಂಗ್ರೆಸ್ ಕಾರ್ಪೋರೇಟರ್ ಕುಮ್ಮಕ್ಕಿನಿಂದ ನಡೆದ ದೌರ್ಜನ್ಯ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಪ್ರಕರಣ ರಾಜ್ಯ ರಾಜಕೀಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.