ಅಭಿವೃದ್ಧಿಯ ಹೆಸರಲ್ಲಿ ಅನ್ನದಾತನ ಬದುಕಿಗೆ ಕೊಳ್ಳಿ: ಭೂಸ್ವಾಧೀನದ ಕಾರ್ಮೋಡ; ಸೂರು ಕಳೆದುಕೊಳ್ಳುವ ಭೀತಿಯಲ್ಲಿ ನೂರಾರು ಕುಟುಂಬ

ಧಾರವಾಡ-ಬೆಳಗಾವಿ ನಡುವಿನ ಕೈಗಾರಿಕಾ ಕಾರಿಡಾರ್ ಯೋಜನೆಗೆ ಸರ್ಕಾರ ಕೈಗೊಂಡಿರುವ ಬೃಹತ್ ಭೂಸ್ವಾಧೀನ ಪ್ರಕ್ರಿಯೆ, ದಶಕಗಳಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ನೂರಾರು ರೈತ ಕುಟುಂಬಗಳ ಬದುಕನ್ನು ಅಕ್ಷರಶಃ ಬೀದಿಗೆ ತಳ್ಳುವ ಆತಂಕ ಸೃಷ್ಟಿಸಿದೆ. ಕೃಷಿ ಭೂಮಿ ಜೊತೆಗೆ ಮನೆಯನ್ನು ಕಳೆದುಕೊಳ್ಳುವ ಅನಿವಾರ್ಯತೆ ಅನ್ನದಾತರಿಗೆ ಎದುರಾಗಿದೆ.

ಅಭಿವೃದ್ಧಿಯ ಹೆಸರಲ್ಲಿ ಅನ್ನದಾತನ ಬದುಕಿಗೆ ಕೊಳ್ಳಿ: ಭೂಸ್ವಾಧೀನದ ಕಾರ್ಮೋಡ; ಸೂರು ಕಳೆದುಕೊಳ್ಳುವ ಭೀತಿಯಲ್ಲಿ ನೂರಾರು ಕುಟುಂಬ
ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ
Image Credit source: tv9 kannada
Edited By:

Updated on: Sep 04, 2026 | 8:43 PM

ಧಾರವಾಡ, ಸೆಪ್ಟೆಂಬರ್​ 04: ಅಭಿವೃದ್ಧಿಗೆ ಕೈಗಾರಿಕೆಗಳು ಅತ್ಯವಶ್ಯಕ. ಆದರೆ ಈ ಕೈಗಾರಿಕೆಗಳ ಸ್ಥಾಪನೆಗೆ ಭೂಮಿಯ ಅವಶ್ಯಕತೆಯೂ ಬಲು ಮುಖ್ಯ. ಹೀಗಾಗಿ ಸರಕಾರ ಯಾವುದೇ ಇದ್ದರೂ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ನೀಡುತ್ತವೆ. ಆದರೆ ಹೀಗೆ ಸ್ವಾಧೀನಪಡಿಸಿಕೊಳ್ಳುವಾಗ ರೈತರು ನಡೆದುಕೊಂಡು ಬಂದ ದಾರಿ, ಅವರ ಜೀವನ ಶೈಲಿ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದಾಗಿ ರೈತರು ಬೇರೆ ಬೇರೆ ಕಷ್ಟಗಳಿಗೆ ಸಿಲುಕುತ್ತಾರೆ. ಇದೀಗ ಧಾರವಾಡ ಜಿಲ್ಲೆಯಲ್ಲೂ ಅದೇ ಆಗಿದೆ. ಭೂಸ್ವಾಧೀನದಿಂದಾಗಿ ರೈತರು ಹೊಲಗಳ ಜೊತೆಗೆ ಮನೆಗಳನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

6,000 ಎಕರೆ ಭೂಸ್ವಾಧೀನದ ಗುರಿ: ಒಕ್ಕಲೇಳಲು ರೈತರ ತೀವ್ರ ಪ್ರತಿರೋಧ

ಧಾರವಾಡ-ಬೆಳಗಾವಿ ನಡುವೆ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಸರಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಿದೆ. ಒಟ್ಟು 6000 ಎಕರೆ ಭೂಸ್ವಾಧೀನಕ್ಕೆ ಈಗಾಗಲೇ ಸರಕಾರ ಮುಂದಾಗಿದ್ದು, ಅದರಲ್ಲಿ 3500 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಇನ್ನುಳಿದ ರೈತರು ತಮ್ಮ ಭೂಮಿಯನ್ನು ನೀಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ. ಇದೆಲ್ಲದ ಮಧ್ಯೆಯೇ ಧಾರವಾಡ ತಾಲೂಕಿನ ಅನೇಕ ಕಡೆಗಳಲ್ಲಿ ಅನೇಕ ರೈತ ಕುಟುಂಬಗಳು ಬೀದಿಗೆ ಬೀಳುವ ಆತಂಕಕ್ಕೆ ಸಿಲುಕಿದ್ದಾರೆ. ಏಕೆಂದರೆ ಎಷ್ಟೋ ವರ್ಷಗಳಿಂದ ಆ ಕುಟುಂಬಗಳು ತಮ್ಮೂರನ್ನು ಬಿಟ್ಟು ಬಂದು ಹೊಲಗಳಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿಯೇ ಜೀವಿಸುತ್ತಾ, ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಆದರೆ ಇದೀಗ ಭೂಸ್ವಾಧೀನದಿಂದಾಗಿ ಅವರೆಲ್ಲಾ ಮನೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ರೈತರು ಹೇಳುವುದೇನು?

‘ತಮ್ಮ ಪೂರ್ವಜರು ಇಲ್ಲಿಯೇ ಮನೆ ಕಟ್ಟಿಕೊಂಡು ಜೀವಿಸಿದ್ದರು. ನಾವು ಕೂಡ ಇಲ್ಲಿಯೇ ಬದುಕನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಆದರೆ ಇದೀಗ ಭೂಸ್ವಾಧೀನವಾದರೆ ನಾವೆಲ್ಲಾ ಇಲ್ಲಿಂದ ಒಕ್ಕಲೆದ್ದು ಹೋಗಬೇಕಾಗಿದೆ. ಹೀಗಾಗಿ ನಮ್ಮ ಮುಂದಿನ ಬದುಕು ಏನು’ ಎಂಬ ಪ್ರಶ್ನೆ ಎದುರಾಗಿದೆ ಎನ್ನುತ್ತಾರೆ ರೈತ ಮಂಜುನಾಥ ಅವರು.


ಇದನ್ನೂ ಓದಿ: New Gas Connection Problem: ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ

ಧಾರವಾಡ ತಾಲೂಕಿನ ಹೊಸವಾಳು, ಕಲ್ಲೂರು, ನಾಗಲಾವಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಾಸಿಸುತ್ತಿದ್ದ ನೂರಾರು ಕುಟುಂಬಗಳು ಎಷ್ಟೋ ವರ್ಷಗಳ ಹಿಂದೆ ತಮ್ಮ ಹೊಲಗಳಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿವೆ. ಅಲ್ಲಿಯೇ ಹೈನುಗಾರಿಕೆ, ಮೇಕೆ-ಕೋಳಿ ಸಾಕಾಣಿಕೆ ಮಾಡುತ್ತಿವೆ. ಇದರೊಂದಿಗೆ ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನಿತ್ಯವೂ ತಮ್ಮೂರಿನಿಂದ ಹೊಲಕ್ಕೆ ಬರೋದಕ್ಕಿಂತ ಹೊಲಗಳಲ್ಲಿಯೇ ಮನೆ ಮಾಡಿಕೊಂಡರೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಅನ್ನೋ ಲೆಕ್ಕಾಚಾರ ಇವರೆಲ್ಲರದ್ದು.

ಮಾಲಿನ್ಯದ ನಡುವೆ ಬದುಕುವುದು ಹೇಗೆ?

ಅಲ್ಲದೇ ತಮ್ಮ ಹೊಲಗಳನ್ನು ಹಾಗೂ ಬೆಳೆಯನ್ನು ರಕ್ಷಿಸಿಕೊಳ್ಳಲು ಹೊಲಗಳಲ್ಲಿಯೇ ಇರೋದು ತುಂಬಾನೇ ಒಳ್ಳೆಯದು ಎನ್ನುತ್ತಾರೆ. ಆದರೆ ಇದೀಗ ಕೆಐಎಡಿಬಿ ತಮ್ಮ ಹೊಲಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರೋದ್ರಿಂದಾಗಿ ಎಲ್ಲವನ್ನು ಬಿಟ್ಟು ಬೇರೆ ಕಡೆಗೆ ಹೋಗಬೇಕಾಗುತ್ತೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ನೀವು ಬೇಕಾದರೆ ಇಲ್ಲಿಯೇ ನಿಮ್ಮ ಬದುಕಿನ್ನು ಮುಂದುವರೆಸಬಹುದು. ಅದಕ್ಕೂ ಕಾನೂನಿನಲ್ಲಿ ಅವಕಾಶವಿದೆ’ ಎನ್ನುತ್ತಾರೆ. ಆದರೆ ಕೃಷಿ ಭೂಮಿಯೇ ಇಲ್ಲದೇ ಇಲ್ಲಿರೋದಾದರೂ ಹೇಗೆ ಅನ್ನೋದು ಇವರೆಲ್ಲರ ಪ್ರಶ್ನೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಖಾನೆಗಳು ಸ್ಥಾಪನೆಯಾದರೆ ಅವುಗಳ ಮಾಲಿನ್ಯದ ನಡುವೆ ಬದುಕುವುದಾದರೂ ಹೇಗೆ ಅನ್ನೋದು ರೈತರ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಗಣೇಶ ಹಬ್ಬದ ವೇಳೆ ಸಕ್ಕರೆ ಲಭ್ಯತೆ, ಬೆಲೆ ಸ್ಥಿರತೆಗೆ ಕೇಂದ್ರ ಕಟ್ಟುನಿಟ್ಟಿನ ಕ್ರಮ, ಜೋಶಿ ತೀವ್ರ ನಿಗಾ

ಇಷ್ಟು ದಿನ ನಾವೆಲ್ಲಾ ಸ್ವಚ್ಛವಾದ ಪರಿಸರದಲ್ಲಿ ವಾಸಿಸಿದ್ದೇವೆ. ಆದರೆ ಇದೀಗ ನಮ್ಮ ಮನೆ, ಹೊಲಗಳನ್ನು ತೊರೆದು ಹೋಗಬೇಕೆಂದರೆ ಹೇಗೆ ಅನ್ನುತ್ತಿರೋ ಇವರೆಲ್ಲರಿಗೂ ಭವಿಷ್ಯದ ಆತಂಕ ಎದುರಾಗಿದೆ. ಕೃಷಿ ಬಿಟ್ಟು ಬೇರೆ ಯಾವುದೇ ವಿದ್ಯೆ ಗೊತ್ತಿಲ್ಲದ ಇವರು ಮುಂಬರುವ ದಿನಗಳಲ್ಲಿ ತಮ್ಮ ಹೊಲಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ತಲೆ ಎತ್ತಲಿರುವ ಕಾರ್ಖಾನೆಗಳಿಗೆ ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತೆ. ಹೀಗಾಗಿ ಅವರ ಈ ಸಮಸ್ಯೆಗೆ ಸರಕಾರ ಪರಿಹಾರ ಕಲ್ಪಿಸಬೇಕಿದೆ. ಒಟ್ಟಿನಲ್ಲಿ ಅಭಿವೃದ್ಧಿ ಜೊತೆಗೆ ರೈತರ ಹಿತ ಕಾಪಾಡುವುದು ಬಲು ಮುಖ್ಯ ಅನ್ನೋದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡಾಗ ಮಾತ್ರ ಇಂಥ ಅಮಾಯಕ ರೈತರು ಬದುಕು ಹಸನಾಗುತ್ತೆ.

Industrial Corridor: ನೂರಾರು ರೈತ ಕುಟುಂಬ ಬೀದಿಗೆ ಬರುವ ಆತಂಕ, ಇಂಡಸ್ಟ್ರಿಯಲ್ ಕಾರಿಡಾರ್ ಮುಳುವಾಗುತ್ತಾ?| #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:42 pm, Fri, 4 September 26

Loading...
Unable to load recommendations.
Follow Us