ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ಹುಬ್ಬಳ್ಳಿ-ಧಾರವಾಡದಲ್ಲಿ ಲವ್ ಜಿಹಾದ್ ಆರೋಪಗಳು ಹೆಚ್ಚುತ್ತಿದ್ದು, ಕಳೆದ ಕೆಲ ತಿಂಗಳಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದು ಪ್ರೇಮ ಸಂಬಂಧವೋ ಅಥವಾ ಹಿಂದೂ ಯುವತಿಯರನ್ನು ಮತಾಂತರ ಮಾಡುವ ಷಡ್ಯಂತ್ರವೋ ಎಂಬ ಚರ್ಚೆ ಶುರುವಾಗಿದೆ. ಪೊಲೀಸ್ ತನಿಖೆ ಮುಂದುವರಿದಿದ್ದು, ಸತ್ಯಾಂಶ ಹೊರಬರಬೇಕಿದೆ. ಈ ಕುರಿತು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?
ಸಾಂದರ್ಭಿಕ ಚಿತ್ರ
Image Credit source: AI Image
Edited By:

Updated on: Apr 10, 2026 | 2:27 PM

ಹುಬ್ಬಳ್ಳಿ, ಏಪ್ರಿಲ್​​ 10: ರಾಜ್ಯದ ವಾಣಿಜ್ಯ ನಗರ ಹುಬ್ಬಳ್ಳಿ ಮತ್ತು ಶಿಕ್ಷಣ ಕಾಶಿ ಧಾರವಾಡದಲ್ಲಿ ಅದ್ಯಾಕೋ ಗೊತ್ತಿಲ್ಲ ಮೇಲಿಂದ ಮೇಲೆ ಲವ್​​ ಜಿಹಾದ್​​ ಆರೋಪ ಪ್ರಕರಣಗಳು ಕೇಳಿಬರತೊಡಗಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ಇಂತಹ ನಾಲ್ಕು ಆರೋಪಗಳು ವರದಿಯಾಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವರು ಇದನ್ನು ಪ್ರೇಮ ಸಂಬಂಧ ಮಾತ್ರ ಎಂದು ಕರೆದರೆ, ಇನ್ನು ಕೆಲವರು ಇದು ವ್ಯವಸ್ಥಿತವಾಗಿ ಹಿಂದೂ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಪ್ರೀತಿ ಪ್ರೇಮದ ಹೆಸರಲ್ಲಿ ಮತಾಂತರ ಮಾಡುವ ಷಡ್ಯಂತ್ರ ಎನ್ನುತ್ತಿದ್ದಾರೆ.

ಏನಿದು ಲವ್ ಜಿಹಾದ್?

ಹಿಂದೂ ಯುವತಿಯರು, ಮಹಿಳೆಯರನ್ನು ಮದುವೆಯಾಗಿ ನಂತರ ಅವರನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡೋದನ್ನು ಸಾಮಾನ್ಯವಾಗಿ ಲವ್ ಜಿಹಾದ್ ಎಂದು ಕರೆಯಲಾಗುತ್ತಿದೆ. ಈ ಲವ್​​ ಜಿಹಾದ್​​ ಕುರಿತು ನಿರ್ದಿಷ್ಟ ವ್ಯಾಖ್ಯಾನಗಳು ಇಲ್ಲದಿದ್ದರೂ ಇಂತಹ ಘಟನೆಗಳನ್ನು ಇದೇ ಹೆಸರಲ್ಲಿ ಉಲ್ಲೇಖಿಸಿಕೊಂಡು ಬರಲಾಗ್ತಿದೆ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ಕೇರಳ ಲವ್ ಸ್ಟೋರಿ ಪಾರ್ಟ್ 1 ಮತ್ತು ಇತ್ತೀಚೆಗೆ ಬಿಡುಗಡೆಯಾದ ಪಾರ್ಟ್ 2 ಸಿನಿಮಾಗಳ ನಂತರ ದೇಶದಲ್ಲಿ ಲವ್ ಜಿಹಾದ್ ಎಂಬ ಪದ ಹೆಚ್ಚು ಪ್ರಚಲಿತದಲ್ಲಿದೆ. ಈ ಹಿಂದೆ ಕೇರಳದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದ್ದ ಈ ಆರೋಪಗಳೀಗ ನಮ್ಮ ರಾಜ್ಯದ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಲ್ಲಿಯೂ ಕೇಳಿಬರತೊಡಗಿವೆ.

ಇದನ್ನೂ ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

2024ರ ಏಪ್ರಿಲ್ 18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್​​ನಲ್ಲಿ ಹಿಂದೂ ಯುವತಿ ನೇಹಾ ಹಿರೇಮಠ ಹತ್ಯೆಯಾಗಿತ್ತು. ಫಯಾಜ್ ಎಂಬ ಕಾಲೇಜು ಸ್ನೇಹಿತನೇ ಆಕೆಯನ್ನು ಕೊಲೆ ಮಾಡಿದ್ದ. ಮದುವೆಗೆ ನಿರಾಕರಣೆಯೇ ಘಟನೆಗೆ ಕಾರಣ ಎನ್ನಲಾಗಿತ್ತು. ಆ ಬಳಿಕ ಕೇಳಿಬರಲು ಆರಂಭವಾದ ಲವ್​​ ಜಿಹಾದ್​​ ಎಂಬ ಮಾತು ಇತ್ತೀಚಿನ ಕೆಲ ಪ್ರಕರಣಗಳಲ್ಲೂ ಪ್ರತಿಧ್ವನಿಸಿದೆ. ಜಿಮ್ ಟ್ರೈನರ್ ಸಮೀರ್ ವಿರುದ್ಧ ಕೇಳಿಬಂದ ಆರೋಪ ಸೇರಿ, ಕಾಲೇಜು ಯುವತಿಗೆ ಬೆದರಿಕೆ ಸಂಬಂಧ ಮುಪಿಜ್ ಮಿಯಾನವರ್ ಪ್ರಕರಣದವರೆಗೂ ಇದೇ ಪದ ಕೇಳಿಬಂದಿದೆ. ಮುಸ್ಲಿಂ ಧರ್ಮದ ವ್ಯಕ್ತಿಯ ಜೊತೆ ತನ್ನ ಮಗಳು ಓಡಿಹೋಗಿದ್ದಾಳೆ ಎಂಬ ತಾಯಿಯ ದೂರಿಗೂ ಲವ್​​ ಜಿಹಾದ್​​ ಆರೋಪ ಮೆತ್ತಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಲವ್ ಜಿಹಾದ್ ಆರೋಪ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ಮೂರು ತಿಂಗಳಲ್ಲಿ ನಾಲ್ಕು ಲವ್ ಜಿಹಾದ್ ಆರೋಪ ಕೇಸ್​​ಗಳು ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿ ಬಂದಿವೆ.

ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿ ಬರ್ತಿರುವ ಲವ್ ಜಿಹಾದ್ ಆರೋಪ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್, ಸದ್ಯ ಯಾವೆಲ್ಲ ಪ್ರಕರಣದಲ್ಲಿ ದೂರು ನೀಡಿದ್ದಾರೋ ಅವನ್ನು ದಾಖಲಿಸಲಾಗಿದೆ. ಆರೋಪಗಳ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಅದು ಪ್ರೀತಿನಾ ಅಥವಾ ಲವ್ ಜಿಹಾದ್ ಭಾಗವಾ ಎಂಬುದು ಆ ಬಳಿಕವೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us