ಹುಬ್ಬಳ್ಳಿ ಕಿಮ್ಸ್ ಸಾಧನೆಗೆ ಮತ್ತೊಂದು ಗರಿ: ರೋಬೋಟಿಕ್ ಶಸ್ತ್ರಚಿಕಿತ್ಸೆ ಮಾಡಿದ ಕರ್ನಾಟಕದ ಮೊದಲ ಸರ್ಕಾರಿ ಮೆಡಿಕಲ್ ಕಾಲೇಜು

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯು ರಾಜ್ಯದ ವೈದ್ಯಕೀಯ ಕಾಲೇಜುಗಳ ಇತಿಹಾಸದಲ್ಲೇ ಮೊದಲ ಬಾರಿಗೆ ರೋಬೋಟಿಕ್ ಯಂತ್ರದ ಮೂಲಕ ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಈ ಅತ್ಯಾಧುನಿಕ ಚಿಕಿತ್ಸೆಯನ್ನು ಬಡ ಮಹಿಳೆಗೆ ಸಂಪೂರ್ಣ ಉಚಿತವಾಗಿ ಮಾಡುವ ಮೂಲಕ ಕಿಮ್ಸ್ ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹುಬ್ಬಳ್ಳಿ ಕಿಮ್ಸ್ ಸಾಧನೆಗೆ ಮತ್ತೊಂದು ಗರಿ: ರೋಬೋಟಿಕ್ ಶಸ್ತ್ರಚಿಕಿತ್ಸೆ ಮಾಡಿದ ಕರ್ನಾಟಕದ ಮೊದಲ ಸರ್ಕಾರಿ ಮೆಡಿಕಲ್ ಕಾಲೇಜು
ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ
Image Credit source: tv9
Edited By:

Updated on: Jul 02, 2026 | 2:05 PM

ಮುಖ್ಯಾಂಶಗಳು

  • ರೋಬೋಟಿಕ್ ಚಿಕಿತ್ಸೆ ಮಾಡಿದ ಮೊದಲ ಸರ್ಕಾರಿ ಕಾಲೇಜು
  • ಖಾಸಗಿ ಆಸ್ಪತ್ರೆಯಲ್ಲಿ ₹3 ಲಕ್ಷ ವೆಚ್ಚ ತಗಲುವ ಆಪರೇಷನ್
  • ಬಿಪಿಎಲ್ ಕಾರ್ಡ್‌ದಾರ ಮಹಿಳೆಗೆ ಉಚಿತ ಶಸ್ತ್ರಚಿಕಿತ್ಸೆ

ಹುಬ್ಬಳ್ಳಿ, ಜುಲೈ 2: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS) ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆಗಳು ಅತ್ಯಂತ ದುಬಾರಿಯಾಗುತ್ತಿದ್ದು, ಬಡವರು ಲಕ್ಷಾಂತರ ರೂಪಾಯಿ ವೆಚ್ಚದ ಆಪರೇಷನ್‌ಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಅತ್ಯಾಧುನಿಕ ರೋಬೋಟಿಕ್ ಯಂತ್ರದ ಸಹಾಯದಿಂದ ಮೊಣಕಾಲು ಚಿಪ್ಪು ಬದಲಾವಣೆ (Knee Joint Replacement) ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಲಾಗಿದೆ. ಈ ಮೂಲಕ ರೋಬೋಟಿಕ್ ತಂತ್ರಜ್ಞಾನದಡಿ ಶಸ್ತ್ರಚಿಕಿತ್ಸೆ ನಡೆಸಿದ ಕರ್ನಾಟಕದ (Karnataka) ಮೊದಲ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಕಿಮ್ಸ್ ಪಾತ್ರವಾಗಿದೆ.

ಒಂದೇ ದಿನದಲ್ಲಿ ಎದ್ದು ಓಡಾಡಿದ 55 ವರ್ಷದ ಮಹಿಳೆ!

ಮಂಡಿ ನೋವು ಹಾಗೂ ಮೂಳೆ ಸವಕಳಿಯ 4ನೇ ಹಂತದ (Advanced Arthritis) ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೊಬ್ಬರಿಗೆ ಕಿಮ್ಸ್‌ನ ಆರ್ಥೋಪಿಡಿಕ್ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಎಫ್. ಕಮ್ಮಾರ್ ನೇತೃತ್ವದ ನುರಿತ ವೈದ್ಯರ ತಂಡವು ಕಳೆದ ಮಂಗಳವಾರ ಈ ರೋಬೋಟಿಕ್ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ಹಿಂದೆಲ್ಲಾ ಇಂತಹ ಆಪರೇಷನ್‌ಗಳನ್ನು ಮ್ಯಾನುವಲ್ (ಮಾನವ ಶ್ರಮ) ಆಗಿ ಮಾಡಲಾಗುತ್ತಿತ್ತು. ಆದರೆ, ಕಿಮ್ಸ್ ಸಂಸ್ಥೆಯು ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಬರೋಬ್ಬರಿ 2.79 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅತ್ಯಾಧುನಿಕ ರೋಬೋಟಿಕ್ ಯಂತ್ರವನ್ನು ಇತ್ತೀಚೆಗಷ್ಟೇ ಖರೀದಿಸಿ, ಇದಕ್ಕಾಗಿ ಹೈಟೆಕ್ ಆಪರೇಷನ್ ಥಿಯೇಟರ್ (OT) ಸಿದ್ಧಪಡಿಸಿತ್ತು. ಈ ಹೊಸ ಯಂತ್ರದ ಮೂಲಕ ಚಿಕಿತ್ಸೆ ಪಡೆದ ಮಹಿಳೆ ಶಸ್ತ್ರಚಿಕಿತ್ಸೆ ಮುಗಿದ ಕೇವಲ ಒಂದೇ ದಿನದಲ್ಲಿ ಸುಲಭವಾಗಿ ಓಡಾಡುವಂತಾಗಿದ್ದಾರೆ.

ದೋಷಮುಕ್ತ ಹಾಗೂ ಶೀಘ್ರ ಗುಣಮುಖ

ರೋಬೋಟಿಕ್ ಯಂತ್ರದ ಮೂಲಕ ಶಸ್ತ್ರಚಿಕಿತ್ಸೆ ಮಾಡುವುದರಿಂದ ಯಾವುದೇ ರೀತಿಯ ಮಾನವ ದೋಷಗಳು (Human Errors) ಇರುವುದಿಲ್ಲ. ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆ ಮಾಡಲು ಇದು ನೆರವಾಗುತ್ತದೆ. ರೋಗಿಗೆ ಅತ್ಯಂತ ಕಡಿಮೆ ನೋವಿರುತ್ತದೆ ಹಾಗೂ ರೋಗಿಯು ಅತ್ಯಂತ ತ್ವರಿತವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಿಮ್ಸ್ ವೈದ್ಯರು ಮಾಹಿತಿ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ಕನಿಷ್ಠ 3 ಲಕ್ಷ ರೂ. ವೆಚ್ಚ

ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ಕನಿಷ್ಠ 3 ಲಕ್ಷ ರೂಪಾಯಿಗೂ ಅಧಿಕ ಹಣ ವೆಚ್ಚವಾಗುತ್ತದೆ. ಆದರೆ, ಈ ರೋಗಿ ಬಿಪಿಎಲ್ ಕಾರ್ಡ್ ಹೊಂದಿದ್ದರಿಂದ ಸರ್ಕಾರದ ಯೋಜನೆಯಡಿ ಕಿಮ್ಸ್‌ನಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಚಾರ್ಕೋಲ್ ಘಟಕ ಆರಂಭ; ಒಣ ಕಸದಿಂದ ಉತ್ಪತ್ತಿಯಾಗಲಿದೆ ಹಸಿರು ಇದ್ದಿಲು!

ಈ ಭಾಗದ ಬಡ ರೋಗಿಗಳಿಗೆ ಈ ತಂತ್ರಜ್ಞಾನ ವರದಾನವಾಗಿದ್ದು, ರಾಜ್ಯ ಸರ್ಕಾರವು ಕಿಮ್ಸ್ ಸಂಸ್ಥೆಗೆ ಮತ್ತಷ್ಟು ಆರ್ಥಿಕ ಚೈತನ್ಯ ತುಂಬಿದರೆ ಉತ್ತರ ಕರ್ನಾಟಕದ ರೋಗಿಗಳಿಗೆ ಇನ್ನೂ ಹೆಚ್ಚಿನ ನೆರವಾಗಲಿದೆ ಎಂದು ಕಿಮ್ಸ್ ನಿರ್ದೇಶಕರು ಆಶಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us