ED ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ: ಶಿವಾನಂದ ನೀಲಣ್ಣನವರ್ ಅರೆಸ್ಟ್
Shivanand Neelannavar Cse: ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯಿಂದ 2110 ಕೋಟಿ ರೂ ವಂಚನೆ ಮಾಡಿರುವುದು ಇಡಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಬೆನ್ನಲ್ಲೇ ಮಂಗಳೂರು ವಲಯದ ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣನವರ್‌ನನ್ನು ಬಂಧಿಸಿದ್ದಾರೆ. ಸದ್ಯ 12 ದಿನಗಳ ಕಾಲ ED ವಶಕ್ಕೆ ನೀಡಿ ಮಂಗಳೂರು ED ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು
- ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ ವಂಚನೆ ಕೇಸ್
- ಇಡಿಯಿಂದ ಶಿವಾನಂದ ಸಿದ್ದಪ್ಪ ನೀಲಣ್ಣನವರ್ ಬಂಧನ
- ED ತನಿಖೆಯಲ್ಲಿ ಅನೇಕ ವಿಚಾರಗಳು ಬಯಲಿಗೆ
ಬೆಂಗಳೂರು, ಆಗಸ್ಟ್ 14: ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. 2,110 ಕೋಟಿ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ಮಂಗಳೂರು ವಲಯ ಇಡಿ ಅಧಿಕಾರಿಗಳು ಶಿವಾನಂದ ಸಿದ್ದಪ್ಪ ನೀಲಣ್ಣನವರ್‌ನನ್ನು (Shivanand Neelannavar) ಬಂಧಿಸಿದ್ದಾರೆ (arrest). ಬಳಿಕ ಮಂಗಳೂರಿನ ವಿಶೇಷ ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು 12 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇತ್ತೀಚೆಗೆ ಮಂಗಳೂರು ವಲಯ ಇಡಿ ಅಧಿಕಾರಿಗಳು ಶಿವಾನಂದಗೆ ಸೇರಿದ ವಿವಿಧ ಸ್ಥಳಗಳ ಮೇಳೆ ದಾಳಿ ಮಾಡಿದ್ದರು.
ಅಕ್ರಮವಾಗಿ 2,110 ಕೋಟಿ ರೂ ಸಂಗ್ರಹ
ಇಡಿ ನಡೆಸಿದ ತನಿಖೆಯಲ್ಲಿ ಶಿವಾನಂದ ಕಂಪನಿಯ ಹಣಕಾಸು ವ್ಯವಹಾರಗಳ ಪ್ರಮುಖ ವ್ಯಕ್ತಿಯಾಗಿದ್ದು, ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್‌ಗಢ ರಾಜ್ಯಗಳಾದ್ಯಂತ ಪೋಂಜಿ ಶೈಲಿಯ ಸ್ಕೀಮ್‌ಗಳ ಮೂಲಕ ಸಾರ್ವಜನಿಕರಿಂದ ಅಕ್ರಮವಾಗಿ ಹೂಡಿಕೆ ಸಂಗ್ರಹಿಸಿರುವುದು ಪತ್ತೆಯಾಗಿದೆ. ಸಂಸ್ಥೆಯು ಒಟ್ಟು 2,110.97 ಕೋಟಿ ರೂ ಅಕ್ರಮವಾಗಿ ಸಂಗ್ರಹಿಸಿದ್ದು, ಕೇವಲ ಅತ್ಯಲ್ಪ ಭಾಗವನ್ನು ಮಾತ್ರ ಮರುಪಾವತಿಸಿದೆ.
ಇದನ್ನೂ ಓದಿ: ಶಿವಾನಂದ ನೀಲಣ್ಣನವರ್ ಕಳ್ಳಾಟ ಬಯಲು: ಶಿವಂ ಅಸೋಸಿಯೇಟ್ಸ್ನಿಂದ 2,110 ಕೋಟಿ ವಂಚನೆ, ಇಡಿ ತನಿಖೆಯಲ್ಲಿ ಬಹಿರಂಗ
2019ರಿಂದಲೇ ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಯು ತೀವ್ರ ನಷ್ಟ ಅನುಭವಿಸುತ್ತಿದ್ದರೂ, ಆ ನ್ಯೂನತೆಯನ್ನು ಮರೆಮಾಚಿ ಮಾರುಕಟ್ಟೆಯಲ್ಲಿ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳಲು ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಠೇವಣಿ ಹಣವನ್ನು ಹಳೆಯ ಹೂಡಿಕೆದಾರರಿಗೆ ಬಡ್ಡಿ ನೀಡಲು ಬಳಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಅಕ್ರಮ ಹಣದಿಂದ ಐಷಾರಾಮಿ ಜೀವನ
ಹೂಡಿಕೆದಾರರ ಈ ಅಕ್ರಮ ಬಂಡವಾಳವನ್ನು ಆರೋಪಿಗಳು ವೈಯಕ್ತಿಕ ಐಷಾರಾಮಿ ವಾಹನಗಳ ಖರೀದಿ, ಭವ್ಯ ಬಂಗಲೆಗಳ ನಿರ್ಮಾಣ, ಪಾಲುದಾರರ ಹೆಸರಿನಲ್ಲಿ ಸ್ಥಿರಾಸ್ತಿ ಖರೀದಿ ಹಾಗೂ ಚಲನಚಿತ್ರ ನಿರ್ಮಾಣಗಳಿಗೆ ಅಕ್ರಮವಾಗಿ ವರ್ಗಾಯಿಸಿ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಎಲ್ಲಾ ದುರುಪಯೋಗದ ಹಣವನ್ನು ಅಪರಾಧದ ಆದಾಯ ಎಂದು ಪರಿಗಣಿಸಿರುವ ಇಡಿ, ಪ್ರಕರಣದ ಕುರಿತು ತೀವ್ರ ತನಿಖೆ ಮುಂದುವರಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




