ಹಿಜಾಬ್ Vs ಕೇಸರಿ ಸಂಘರ್ಷ: ಹಿಂದೂಪರ ಸಂಘಟನೆಗಳಿಂದ ಹುಬ್ಬಳ್ಳಿಯ ಅನೇಕ ಕಡೆ ಕೇಸರಿ ಶಾಲು ವಿತರಣೆ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಆದೇಶವನ್ನು ವಿರೋಧಿಸಿ ಹುಬ್ಬಳ್ಳಿಯ ಕನಕದಾಸ ಕಾಲೇಜು ಸೇರಿದಂತೆ ಹಲವೆಡೆ ಹಿಂದೂಪರ ಸಂಘಟನೆಗಳು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿ ಪ್ರತಿಭಟಿಸಿದವು. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಆವರಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಹಿಜಾಬ್ Vs ಕೇಸರಿ ಸಂಘರ್ಷ: ಹಿಂದೂಪರ ಸಂಘಟನೆಗಳಿಂದ ಹುಬ್ಬಳ್ಳಿಯ ಅನೇಕ ಕಡೆ ಕೇಸರಿ ಶಾಲು ವಿತರಣೆ
ಹಿಂದೂಪರ ಸಂಘಟನೆಗಳಿಂದ ಕೇಸರಿ ಶಾಲು ವಿತರಣೆ
Image Credit source: tv9
Edited By:

Updated on: Jun 01, 2026 | 2:15 PM

ಹುಬ್ಬಳ್ಳಿ, ಜೂನ್ 1: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ (Hijab) ಧರಿಸಲು ಕಾಂಗ್ರೆಸ್ ಸರ್ಕಾರ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಮತ್ತೊಮ್ಮೆ ಪ್ರತಿಭಟನೆಯ ಹಾದಿ ಹಿಡಿದಿವೆ. ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಸರ್ಕಾರದ ಆದೇಶಕ್ಕೆ ಕೌಂಟರ್ ನೀಡಲು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹುಬ್ಬಳ್ಳಿ (Hubballi) ನಗರದ ಪ್ರಮುಖ ಕಾಲೇಜುಗಳ ಮುಂಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದಾರೆ. ಈ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಹಿಜಾಬ್ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಈ ಅಭಿಯಾನವನ್ನು ವಿಸ್ತರಿಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿದ ಸರ್ಕಾರದ ನೀತಿಗೆ ಖಂಡನೆ.
  • ಹುಬ್ಬಳ್ಳಿಯಲ್ಲಿ ಹಿಂದೂಪರ ಸಂಘಟನೆಗಳಿಂದ ಕೇಸರಿ ಶಾಲು ವಿತರಣೆ.
  • ಪೊಲೀಸರಿಂದ ಬಿಗಿ ಬಂದೋಬಸ್ತ್.

ಕನಕದಾಸ ಕಾಲೇಜು ಮುಂಭಾಗ ಹೈಡ್ರಾಮಾ

ಹಿಂದಿನ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯಗೊಳಿಸಿದ್ದ ಸಮವಸ್ತ್ರ ನಿಯಮ ಹಾಗೂ ಹಿಜಾಬ್ ನಿಷೇಧದ ಆದೇಶವನ್ನು ಪ್ರಸಕ್ತ ಸರ್ಕಾರ ಹಿಂಪಡೆದಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇಂದು (ಜೂನ್ 1) ಬೆಳಿಗ್ಗೆ ಹುಬ್ಬಳ್ಳಿಯ ಕನಕದಾಸ ಕಾಲೇಜು ಮುಂಭಾಗ ಜಮಾಯಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕಾಲೇಜಿಗೆ ಆಗಮಿಸುತ್ತಿದ್ದ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದರು. ಕೆಲವು ವಿದ್ಯಾರ್ಥಿಗಳು ಸ್ವಇಚ್ಛೆಯಿಂದಲೇ ಕೇಸರಿ ಶಾಲು ಧರಿಸಿ ಕಾಲೇಜಿನೊಳಗೆ ಪ್ರವೇಶಿಸಿದರೆ, ಕೆಲವು ವಿದ್ಯಾರ್ಥಿಗಳು ಶಾಲು ಧರಿಸಲು ನಿರಾಕರಿಸಿದರು. ಪೊಲೀಸರ ಕಟ್ಟುನಿಟ್ಟಿನ ಸೂಚನೆ ಇದ್ದಿದ್ದರಿಂದ ಕಾರ್ಯಕರ್ತರು ಯಾರಿಗೂ ಒತ್ತಾಯಪೂರ್ವಕವಾಗಿ ಶಾಲು ಧರಿಸದೆ ಸಂಯಮ ಕಾಯ್ದುಕೊಂಡರು.

ತುಷ್ಟೀಕರಣ ರಾಜಕಾರಣದ ವಿರುದ್ಧ ಆಕ್ರೋಶ

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂಪರ ಕಾರ್ಯಕರ್ತರಾದ ರಘು ಯಲ್ಲಕ್ಕನವರ್ ಮತ್ತು ಸಂಗಮೇಶ್, ‘ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಹಾಳುಗೆಡವುತ್ತಿದೆ. ಹಿಜಾಬ್‌ಗೆ ನೀಡಿರುವ ಅನುಮತಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಕೇಸರಿ ಶಾಲು ವಿತರಣೆ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ’ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹಿಜಾಬ್ vs ಕೇಸರಿ ಶಾಲು: ಶಾಲಾ-ಕಾಲೇಜ್​ ಆರಂಭದ ಹೊತ್ತಿನಲ್ಲೇ ದಕ್ಷಣ ಕನ್ನಡದಲ್ಲಿ ಧರ್ಮ ದಂಗಲ್ ಆತಂಕ!

ಘಟನೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ನಗರದ ಎಲ್ಲಾ ಪ್ರಮುಖ ಕಾಲೇಜುಗಳ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us