ಅಕಾಲಿಕ ಮಳೆಯಿಂದ ರೈತರು ಕಂಗಾಲು; ಬೆಳೆ ಹಾನಿಯಾದ 72 ಗಂಟೆಯೊಳಗೆ ಅರ್ಜಿ ಕೊಡಲು ಹೇಳಿದ ವಿಮೆ ಕಂಪನಿಗಳು

ಅಕಾಲಿಕ ಮಳೆಯಿಂದ ರೈತರು ಕಂಗಾಲು; ಬೆಳೆ ಹಾನಿಯಾದ 72 ಗಂಟೆಯೊಳಗೆ ಅರ್ಜಿ ಕೊಡಲು ಹೇಳಿದ ವಿಮೆ ಕಂಪನಿಗಳು
ಮಳೆ ಹಾನಿ (ಸಂಗ್ರಹ ಚಿತ್ರ)

ಪರಿಹಾರ ನೀಡೋದನ್ನು ತಪ್ಪಿಸಿಕೊಳ್ಳೋ ಉದ್ದೇಶದಿಂದ ಸರ್ಕಾರ ಹಾಗೂ ವಿಮಾ ಕಂಪೆನಿಗಳು ಈ ರೀತಿ ಜಾರಿಕೊಳ್ಳುತ್ತಿವೆ ಎಂಬ ಆರೋಪ ರೈತರಿಂದ ಕೇಳಿಬರುತ್ತಿದ್ದು, ಕೂಡಲೇ ಈ ನಿಯಮಗಳನ್ನ ಸಡಿಲಗೊಳಿಸಿ ಅರ್ಜಿ ಸಲ್ಲಿಸುವುದಕ್ಕೆ ಇನ್ನೂ ಸಮಯ ವಿಸ್ತರಣೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

TV9kannada Web Team

| Edited By: preethi shettigar

Nov 26, 2021 | 12:07 PM

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಮತ್ತೆ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯವೇ ತತ್ತರಿಸಿ‌ ಹೋಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ‌ ಮಳೆಯಿಂದಾಗಿ ಈಗಾಗಲೇ ರೈತ ವರ್ಗ (Farmers) ನಲುಗಿದೆ. ಅಪಾರ ಪ್ರಮಾಣದ ಬೆಳೆ ನಾಶದಿಂದ(Crop loss) ಒಂದೆಡೆ ರೈತರು ಕಣ್ಣೀರು ಸುರಿಸ್ತಾ ಇದ್ದರೆ. ಇತ್ತ ರೈತರ ಕಣ್ಣೀರು ಒರೆಸಬೇಕಾದ ರಾಜ್ಯ ಸರ್ಕಾರ ಹಾಗೂ ಬೆಳೆ ವಿಮೆ ಕಂಪೆನಿಗಳು ರೈತರ ಜೊತೆ ಚೆಲ್ಲಾಟವಾಡುತ್ತಿವೆ. ಬೆಳೆ ವಿಮೆ ಬೇಕಾದರೆ ಹಾನಿಯಾದ 72 ಗಂಟೆಯೊಳಗೆ ದಾಖಲಾತಿ‌ ನೀಡುವಂತೆ ಗಡುವು ನೀಡಿದ್ದು, ಸದ್ಯ ಅವಧಿ ಮುಗಿದರು ರೈತರು ತಮ್ಮ ದಾಖಲಾತಿ ಹಿಡಿದುಕೊಂಡು ಕ್ಯೂ ನಿಲ್ಲುವಂತ ಪರಿಸ್ಥಿತಿ ಎದುರಾಗಿದೆ.

ಕಳೆದ ವರ್ಷವಷ್ಟೇ ಧಾರವಾಡ ಜಿಲ್ಲೆಯ ಪ್ರತಿಯೊಂದು ಗ್ರಾಮ ವ್ಯಾಪ್ತಿಯ ರೈತರು ಪ್ರತಿ ಬೆಳೆಗೆ ಎಂಬಂತೆ ಬೆಳೆ ವಿಮೆಯ ಹಣ ಸರ್ಕಾರಿ ಸ್ವಾಮ್ಯದ ಬೆಳೆ ವಿಮೆ ಕಂಪೆನಿಗಳಿಗೆ ಪಾವತಿಸಿದ್ದಾರೆ. ಆದರೆ ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾವಿರಾರು ಎಕರೆ ಬೆಳೆ ನಷ್ಟಗೊಂಡಿದ್ದು, ಆ ಬೆಳೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಲು ಕೇವಲ 72 ಗಂಟೆ ಸಮಯ ನಿಗದಿಪಡಿಸುವ ಮೂಲಕ ರಾಜ್ಯ ಸರ್ಕಾರ ಹಾಗೂ ಬೆಳೆ ವಿಮೆ ಕಂಪೆನಿಗಲು ರೈತರ ಕೆಂಗಣ್ಣಿಗೆ ಗುರಿಯಾಗಿವೆ.

ಪ್ರತಿ ವರ್ಷ ಸುರಿಯುವ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡುವ ಉದ್ದೇಶದಿಂದ ರೈತರಿಂದ ಪ್ರತಿಯೊಂದು ಬೆಳೆಗೆ ಇಂತಿಷ್ಟು ಅಂತಾ ಸರ್ಕಾರ ಹಾಗೂ ಕೃಷಿ ಇಲಾಖೆ ರೈತರಿಂದ ಹಣ ಪಾವತಿ ಮಾಡಿಸಿಕೊಳ್ಳುತ್ತವೆ. ಅದರಂತೆಯೇ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿಕೊಳ್ಳಲಾಗುತ್ತದೆ. ಅದಕ್ಕೆ ಕೆಲ ಸಮಯವನ್ನೂ ನಿಗದಿಪಡಿಸಲಾಗುತ್ತದೆ. ಆದರೆ ಈ ಬಾರಿ ಇನ್ನೂ ಮಳೆರಾಯನ ಅಬ್ಬರ ತಗ್ಗಿಲ್ಲದಿದ್ದರೂ ಬೆಳೆ ವಿಮೆ ಕಂಪೆನಿಗಳು ಏಕಾಏಕಿ ಅರ್ಜಿ ಸಲ್ಲಿಸಲು ಕೇವಲ 72 ಗಂಟೆ ಸಮಯ ನಿಗದಿಪಡಿಸಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ಪರಿಹಾರ ನೀಡೋದನ್ನು ತಪ್ಪಿಸಿಕೊಳ್ಳೋ ಉದ್ದೇಶದಿಂದ ಸರ್ಕಾರ ಹಾಗೂ ವಿಮಾ ಕಂಪೆನಿಗಳು ಈ ರೀತಿ ಜಾರಿಕೊಳ್ಳುತ್ತಿವೆ ಎಂಬ ಆರೋಪ ರೈತರಿಂದ ಕೇಳಿಬರುತ್ತಿದ್ದು, ಕೂಡಲೇ ಈ ನಿಯಮಗಳನ್ನ ಸಡಿಲಗೊಳಿಸಿ ಅರ್ಜಿ ಸಲ್ಲಿಸುವುದಕ್ಕೆ ಇನ್ನೂ ಸಮಯ ವಿಸ್ತರಣೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಸದ್ಯ ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ಇನ್ಸುರೆನ್ಸ್ ಕಂಪನಿಯ ಜೊತೆ ಜಿಲ್ಲಾಡಳಿತ ಮಾತನಾಡಿ ರೈತರಿಗೆ ಅನೂಕುಲ ಆಗುವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಬೆಕ್ಕಿಗೆ ಚೆಲ್ಲಾಟ ಆದರೆ ಇಲಿಗೆ ಪ್ರಾಣ ಸಂಕಟ ಎಂಬಂತೆ ಕೈಗೆ ಬಂದ ಬೆಳೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿ ಧಾರವಾಡ ಜಿಲ್ಲೆಯ ರೈತರು ಕಂಗಾಲಾಗಿ ಕುಳಿತಿದ್ದಾರೆ. ಬೆಳೆ ವಿಮೆ ವಿಚಾರದಲ್ಲಿ ಸರ್ಕಾರ ಈ ರೀತಿ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ರೀತಿಯ ನಿಯಮಗಳನ್ನು ಸಡಿಲಗೊಳಿಸಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ರಾಜ್ಯ ಸರ್ಕಾರ ನೊಂದ ಅನ್ನದಾತನ ಬದುಕು ಹಸನಗೊಳಿಸಬೇಕಿದೆ.

ವರದಿ: ದತ್ತಾತ್ರೇಯ ಪಾಟೀಲ್

ಇದನ್ನೂ ಓದಿ: ಕೋಲಾರ ಜಿಲ್ಲೆಯಲ್ಲಿ ಸಿಎಂ ಮಳೆ ಹಾನಿ ಪರಿಶೀಲನೆ; ತೋಟ, ಗದ್ದೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ ಬಸವರಾಜ ಬೊಮ್ಮಾಯಿ

ಮಳೆಯಿಂದ ಕರ್ನಾಟಕದಲ್ಲಿ ಅಪಾರ ಬೆಳೆ ಹಾನಿ; ಕೇಂದ್ರದಿಂದ 900 ಕೋಟಿ ರೂ. ಪರಿಹಾರಕ್ಕೆ ಮನವಿಗೆ ರಾಜ್ಯ ಸರ್ಕಾರ ನಿರ್ಧಾರ

Follow us on

Related Stories

Most Read Stories

Click on your DTH Provider to Add TV9 Kannada