ಸಿದ್ದರಾಮಯ್ಯ ತಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ, ಜಾಮಿಯಾ ಮಸೀದಿಯಲ್ಲಿ ದೇಗುಲ ಇದ್ದುದು ನಿಜ: ಎಚ್ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ನೂರು ಜನ್ಮ ಎತ್ತಿ ಬಂದರೂ ಜೆಡಿಎಸ್ ಪಕ್ಷ ಮುಗಿಸಲು, ಪಕ್ಷವನ್ನು ಮೂಲೆಗುಂಪು ಮಾಡಲು ಆಗುವುದಿಲ್ಲ ಎಂದು ಸವಾಲು ಹಾಕಿದರು.
ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಸಿದ್ದರಾಮಯ್ಯ (Siddramaiah) ಒಂದು ಕಲ್ಲಿನಲ್ಲಿ 2 ಹಕ್ಕಿಗಳನ್ನು ಹೊಡೆದಿಲ್ಲ. ಬದಲಾಗಿ ತಮ್ಮ ತಲೆಯ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೂರು ಜನ್ಮ ಎತ್ತಿ ಬಂದರೂ ಜೆಡಿಎಸ್ ಪಕ್ಷ ಮುಗಿಸಲು ಆಗುವುದಿಲ್ಲ. ಪಕ್ಷವನ್ನು ಮೂಲೆಗುಂಪು ಮಾಡಲು ಆಗುವುದಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕೇವಲ 1 ಸ್ಥಾನ ಮಾತ್ರ. ಕಾಂಗ್ರೆಸ್ನ 2ನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯೇ ಇಲ್ಲ. ಕಾಂಗ್ರೆಸ್ನವರು ಮನ್ಸೂರ್ ಖಾನ್ ಅವರನ್ನೇ ಮೊದಲ ಅಭ್ಯರ್ಥಿಯಾಗಿ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ, ಕೇವಲ ತೋರಿಕೆಗಾಗಿ ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಬಂದಾಗಲೂ ಸರ್ಕಾರವು ಸಂತ್ರಸ್ತರ ನೆರವಿಗೆ ಬರಲಿಲ್ಲ. ನಾನು ಸ್ಥಳಕ್ಕೆ ಬಂದ ನಂತರ ಮುಖ್ಯಮಂತ್ರಿ ಇಲ್ಲಿಗೆ ಬಂದಿದ್ದರು. ನೆರೆಯಲ್ಲಿ ನಿಂತಿದ್ದವರಿಗೆ, ಸಂಕಷ್ಟ ಅನುಭವಿಸುತ್ತಿದ್ದವರಿಗೆ ನೆರವು ಕೊಟ್ಟಿದ್ದು ಜೆಡಿಎಸ್ ಕಾರ್ಯಕರ್ತರು. ಆಗ ನನ್ನ ಆರೋಗ್ಯ ಸರಿಯಿರಲಿಲ್ಲ. ಆದರೂ ನಾನೇ ಇಲ್ಲಿಗೆ ಮೊದಲು ಬಂದು ನಿಂತಿದ್ದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕಾಗಿ ಎರಡು ದಿನಗಳ ಕಾಲ ನಾನು ಜಿಲ್ಲೆಯಲ್ಲಿ ಸಂಚಿಸುತ್ತೇನೆ. ಬಿಜೆಪಿ ಅಭ್ಯರ್ಥಿಯ ಸಾಧನೆ ಬಗ್ಗೆ ಪತ್ರಿಕೆಯಲ್ಲಿ ಜಾಹಿರಾತು ಬಂದಿದೆ. ಬಸವರಾಜ ಹೊರಟ್ಟಿಯವರು ಮಂತ್ರಿಯಾದ ಮೇಲೆ ಶಿಕ್ಷಕರ ನೇಮಕಾತಿ,ಶಾಲಾ ಕಾಲೇಜು ಮಂಜೂರು ಮಾಡಿಸಿದ್ದೆನೆ ಎಂದಿದ್ದಾರೆ. ಅವೆಲ್ಲವೂ ನಮ್ಮ ಮೈತ್ರಿ ಸರ್ಕಾರದಲ್ಲಿ, ನಾನು ಸಿಎಂ ಆಗಿದ್ದಾಗ ಆಗಿದ್ದು. ಅತೀ ಹೆಚ್ಚು ಶಿಕ್ಷಕರ ನೇಮಕಾತಿ ಮಾಡಿಸಿದ್ದ ನಾನೇ. ಸ್ಪೀಕರ್ ಆಗಿದ್ದಾಗ ಇವರು ಏನು ಮಾಡಿದ್ದಾರೆ? ಶಿಕ್ಷಕರ ಕ್ಷೇತ್ರಕ್ಕೆ ಹೊರಟ್ಟಿ ಕೊಡುಗೆ ಏನು? ನಾವು ಹೊಸ ಮುಖಕ್ಕೆ ಅವಕಾಶ ನೀಡಿದ್ದೇವೆ ಎಂದು ವಿವರಿಸಿದರು.
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನಾನು ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಜಂಜಾಟದಿಂದ ದೂರ ಇರಬೇಕು ಎನ್ನುವ ಕಾರಣಕ್ಕೇ ನಾನು ಸಿಂಗಾಪುರಕ್ಕೆ ಹೋಗಿದ್ದೆ. ಇಬ್ಬರು ಕೈ ನಾಯಕರು (ಸಿದ್ದು- ಡಿಕೆಶಿ) ಹೊಂದಾಣಿಕೆ ಮಾಡಿಕೊಂಡು. ಜೆಡಿಎಸ್ ಮುಗಿಸಲೇ ಬೇಕು ಎನ್ನುವ ಕಾರಣಕ್ಕೆ ಹಲವು ತಂತ್ರ ಮಾಡುತ್ತಿದ್ದಾರೆ ಎಂಬ ವಿಶ್ಲೇಷಣೆಗಳೂ ಚಾಲ್ತಿಗೆ ಬಂದಿವೆ. ಅವರು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಅಂಥ ಆಶಾವಾದ ಇರಬೇಕು. ನಮ್ಮಲ್ಲಿ 32 ಸದಸ್ಯರಿದ್ದಾರೆ. ಅದರಲ್ಲಿ ಮೂರ್ನಾಲ್ಕು ಜನರಿಗೆ ಅಸಮಧಾನ ಇರಬಹುದು. ಆದರೆ ಇವತ್ತಿಗೂ ಅವರು ನಮ್ಮ ಸದಸ್ಯರೇ. ಕಾಂಗ್ರೆಸ್ನವರು ಏನೇ ಒತ್ತಡ ಹೇರಿದರೂ ಪ್ರಯೋಜನವಾಗುವುದಿಲ್ಲ. 2016ರ ಅಡ್ಡ ಮತದಾನ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದರು.
ನಾನು ಲೆಕ್ಕಾಚಾರ ಮಾಡಿಸಿದ್ದೇನೆ. ಮನ್ಸೂರ್ ಖಾನ್ ಅವರಿಗೆ ಸಿಗುವುದು ಕೇವಲ 24 ಮತಗಳು ಮಾತ್ರ. ಮನ್ಸೂರ್ ಮೊದಲನೇ ಹಂತದಲ್ಲೇ ಏಲಿಮಿನೇಟ್ ಆಗ್ತಾರೆ. ದೇವೆಗೌಡರು ರಾಜ್ಯಸಭಗೆ ಹೋಗಿದ್ದು ಬೇರೆ ವಿಚಾರ. ಅದು ಹೈಕಮಾಂಡ್ ನಾಯಕ ತೀರ್ಮಾನ ಆಗಿತ್ತು. ರಾಜ್ಯದ ಇವರ್ಯಾರು ತೀರ್ಮಾನ ಮಾಡಿದ್ದಲ್ಲ. ನನಗೂ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆತ್ಮೀಯರಿದ್ದಾರೆ. ನಮ್ಮ ಅಸಮಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆದರೋ, ಅವರೇ ಕಲ್ಲು ತಗೊಂಡು ಹೊಡ್ಕೊಂಡ್ರೊ ಎನ್ನೋದು 10ನೇ ತಾರೀಖು ಗೊತ್ತಾಗುತ್ತೆ. ಬಿಜೆಪಿಯ ಬೀ ಟೀಂ ಯಾರು ಎನ್ನುವುದು ನಂತರ ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ನಮ್ಮ ಅಭ್ಯರ್ಥಿ ಪರ ಖರ್ಗೆಯವರು ಹೈಕಮಾಂಡ್ ಜೊತೆ ಮಾತನಾಡಿದ್ದು ಸುಳ್ಳು. ಖರ್ಗೆಯವರ ಜೊತೆ ನಮ್ಮ ಅಭ್ಯರ್ಥಿ ಆತ್ಮೀಯರಿದ್ದಾರೆ. ಯಾಕೆಂದ್ರೆ ಅವರು ಕೂಡಾ ಕಾಂಗ್ರೆಸ್ನಿಂದ ಬಂದವರು. ಕಾಂಗ್ರೆಸ್ ಪಕ್ಷದ ಒಬ್ಬರೇ ಒಬ್ಬ ನನ್ನ ಜೊತೆ ಪೋನ್ನಲ್ಲಿ ಚರ್ಚಿಸಿದ್ದಾರೆ. ಬಿಜೆಪಿ ಸೋಲಿಸೋ ಉದ್ದೇಶದಿಂದ ಅವರಿಗೆ ಎರಡನೇ ಪ್ರಾಶಸ್ತ್ಯ ಮತ ನೀಡೋಕೆ ನೋಡೋಣ ಎಂದಿದ್ದ. ಆದ್ರೆ ಸದ್ಯ ಅದು ಕೌಂಟ್ಗೆ ಬರುತ್ತೆ. ಬಿಜೆಪಿ ಸೋಲಿಸಬೇಕೋ, ಜೆಡಿಎಸ್ ಸೋಲಿಸಬೇಕೋ ಎನ್ನುವ ತೀರ್ಮಾನ ಅವರಿಗೆ ಬಿಟ್ಟದ್ದು. ನಾವು ಬಿಜೆಪಿ ಸೋಲಿಸೋಕೆ ತೀರ್ಮಾನಿಸಿದ್ದೇವೆ. ಸೋತ್ರು ಭಯವಿಲ್ಲ. ಇನ್ನೊಂದು ಅಸ್ತ್ರ ನಮಗೆ ಸಿಗುತ್ತೆ ಎಂದರು.
ಬಿಜೆಪಿಯವರು ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡುವ ಆಮಿಷವೊಡ್ಡಿ ಅಡ್ಡಮತದಾನ ಮಾಡಿಸುವ ಚಿಂತನೆ ನಡೆಸಿದೆ. ಬಿಜೆಪಿ ಮುಳಗುತ್ತಿರುವ ಹಡಗು. ನನಗೆ ರಾಜ್ಯಸಭೆ ಮುಖ್ಯ ಅಲ್ಲ. ಮುಂದಿನ ಚುನಾವಣೆಗೆ ನಾವು 123 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇರಿಸಿಕೊಂಡಿದ್ದೇವೆ. ಬೆಂಗಳೂರು ಮಾದರಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ ಸಮಾವೇಶ ಮಾಡುತ್ತೇವೆ. ಜಲಧಾರೆ ಕಾರ್ಯಕ್ರಮ ನನ್ನ ಅಸ್ತ್ರ. ಬಿಜೆಪಿ-ಕಾಂಗ್ರೆಸ್ ಸಹವಾಸ ಮಾಡಿದರೆ. ಈ ಕಾರ್ಯಕ್ರಮ ಅನುಷ್ಡಾನ ಮಾಡೋಕೆ ಆಗಲ್ಲ ಎಂದು ಹೇಳಿದರು.
ನಮಗೂ ಅತ್ಮಸಾಕ್ಷಿಯ ಮತಗಳೇ ಬರುವುದು. ಸಿದ್ದರಾಮಯ್ಯನವರಿಗೆ ಮಾತ್ರ ಆತ್ಮಸಾಕ್ಷಿಯಿದೆಯೇ? ನಮಗೂ ಆತ್ಮಸಾಕ್ಷಿಯಿದೆ, ಅವೇ ಮತಗಳು ಬರುವುದು ಎಂದು ಹೇಳಿದರು.
ಮಸೀದಿಯಲ್ಲಿ ದೇಗುಲ ಇರುವುದು ನಿಜ
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ದೇಗುಲ ಇರುವುದು ನಿಜ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಈಗ ಏನೆಲ್ಲಾ ನಡೆಯುತ್ತಿದಯೋ ನಡೆಯಲಿ. ಇದು ಎಲ್ಲಿಗೆ ಹೋಗುತ್ತೋ ನೋಡೊಣ. ಅಲ್ಲಿಯ ಜನ ಮನೆ ಕಟ್ಟಿಕೊಳ್ಳೋಕೆ ಅವಕಾಶ ಕೊಡಿ ಅಂತಿದ್ದಾರೆ. ಇವರೆಲ್ಲಾ ಹೊರಗಿಂದ ಬಂದು ದೇವಸ್ಥಾನ ಕಟ್ತಿವಿ ಅಂತಿದ್ದಾರೆ. ನಾವು ಧರ್ಮ ಉಳಿಸೋಕೆ ಬದ್ದ. ಇವರ ಹೋರಾಟ ಧರ್ಮ ಉಳಿಸುವುದಕ್ಕಲ್ಲ. ಇವರ ಹೋರಾಟದ ಹಿಂದೆ ಬೇರೆಯ ಉದ್ದೇಶವೇ ಇದೆ. ದೇಶದಲ್ಲಿ ಧರ್ಮ ಉಳಿಯಬೇಕು. ಇದು ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಯಬೇಕು. ನಾನೂ ಇತಿಹಾಸ ಓದಿಕೊಂಡಿದ್ದೇನೆ ಎಂದು ಹೇಳಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Sat, 4 June 22