ಧಾರವಾಡದಲ್ಲಿ ಮಾವು ಮೇಳ ಆರಂಭ; ಇಲ್ಲಿವೆ ವಿವಿಧ ಬಗೆಯ ಹಣ್ಣುಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 14, 2024 | 5:55 PM

ಹಣ್ಣುಗಳ ರಾಜ ಮಾವು, ಇದನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ?. ಆದರೆ, ಈ ಹಣ್ಣು ದುಬಾರಿಯಾಗಿರೋ ಹಿನ್ನೆಲೆಯಲ್ಲಿ ಜನರು ಖರೀದಿಸಲು ಹಿಂದೇಟು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಈ ರಾಜನನ್ನು ಜನಸಾಮಾನ್ಯರವರೆಗೆ ಮುಟ್ಟಿಸೋ ಉದ್ದೇಶದಿಂದ ಧಾರವಾಡದಲ್ಲಿ ಮೂರು ದಿನಗಳ ಮಾವು ಮೇಳವನ್ನು ಆಯೋಜಿಸಲಾಗಿದೆ. ಸಾಂಪ್ರದಾಯಿಕ ವಿಧಾನದಲ್ಲಿಯೇ ಪಕ್ವವಾದ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟವೇ ಈ ಮೇಳದ ಪ್ರಮುಖ ಉದ್ದೇಶ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಧಾರವಾಡದಲ್ಲಿ ಮಾವು ಮೇಳ ಆರಂಭ; ಇಲ್ಲಿವೆ ವಿವಿಧ ಬಗೆಯ ಹಣ್ಣುಗಳು
ಧಾರವಾಡದಲ್ಲಿ ಮಾವು ಮೇಳ ಆರಂಭ
Follow us on

ಧಾರವಾಡ, ಮೇ.14: ಮಾವುಗಳ(Mango) ಪ್ರದೇಶ ಎಂದೇ ಧಾರವಾಡ(Dharwad)ವು ಹೆಸರಾಗಿದೆ. ಇಲ್ಲಿನ ಬಹುತೇಕ ಪ್ರದೇಶದಲ್ಲಿ ಬಗೆ ಬಗೆಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತದೆ. ಇಂತಹ ವಿವಿಧ ಹಣ್ಣುಗಳು ಒಂದೇ ಕಡೆ ಗ್ರಾಹಕರಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ ಮಾವಿನ ಮೇಳವನ್ನು ಆಯೋಜಿಸಿದೆ. ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಈ ಮೇಳದಲ್ಲಿ ಹತ್ತಾರು ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಆರಂಭವಾಗಿದೆ. ಮಂಗಳವಾರದಿಂದ ಆರಂಭವಾದ ಈ ಮೇಳಕ್ಕೆ ಇಂದು(ಮೇ.14) ಚಾಲನೆ ನೀಡಲಾಯಿತು. ಮಾವು ಬೆಳೆಗಾರರ ಮತ್ತು ಗ್ರಾಹಕರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರುವ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ಈ ಮೇಳ ನಡೆಯುತ್ತಿದೆ. ಈ ಮೇಳಕ್ಕೆ ಎಲ್ಲರೂ ಬಂದು ವಿವಿಧ ಬಗೆಯ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.

ಸತತ 15 ವರ್ಷಗಳಿಂದ ಮಾವು ಮೇಳ ಆಯೋಜನೆ

2009ರಿಂದಲೂ ಪ್ರತಿವರ್ಷ ಈ ಮೇಳವನ್ನು ಆಯೋಜಿಸುತ್ತಾ ಬರಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಮಾವಿನ ಪ್ರಮಾಣ ಕಡಿಮೆ ಇರುವುದರಿಂದ ಬೆಲೆ ಗಗನಕ್ಕೇರಿದೆ. ಆದರೆ, ತೋಟಗಾರಿಕಾ ಇಲಾಖೆ ಮಾವಿನ ಮೇಳವನ್ನು ಆಯೋಜಿಸಿ, ರೈತರ ಮನವೊಲಿಸಿ ವಿವಿಧ ತಳಿಗಳ ಮಾವನ್ನು ಇಲ್ಲಿಗೆ ತರುವಂತೆ ಮಾಡಿದೆ. ಅಷ್ಟೇ ಅಲ್ಲ, ನಿರ್ದಿಷ್ಟವಾದ ಬೆಲೆಯನ್ನೂ ನಿಗದಿ ಪಡಿಸಿದೆ. ಇನ್ನು ಇಲ್ಲಿಗೆ ಬರುವ ಮಾವು ಸಾಂಪ್ರದಾಯಿಕ ಶೈಲಿಯಲ್ಲಿಯೇ ಹಣ್ಣು ಮಾಡಲಾಗಿರುತ್ತದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಮಾವು ರಾಸಾಯನಿಕ ಬಳಸಿ ಹಣ್ಣು ಮಾಡಿರುವಂಥದ್ದು. ಆದರೆ, ಇಲ್ಲಿಗೆ ರೈತರು ತರೋ ಹಣ್ಣುಗಳು ಕಡ್ಡಾಯವಾಗಿ ಸಾಂಪ್ರದಾಯಿಕ ಶೈಲಿಯಲ್ಲಿಯೇ ಇರಬೇಕು ಎನ್ನುವ ನಿಯಮವನ್ನು ಮಾಡಲಾಗಿದೆ.

ಇದನ್ನೂ ಓದಿ:ಮಾವು ಪ್ರಿಯರೇ ಎಚ್ಚರ! ಮಾರುಕಟ್ಟೆಗೆ ಬಂದಿವೆ ರಾಸಾಯನಿಕ ಮಿಶ್ರಿತ ಹಣ್ಣುಗಳು

ವಿವಿಧ ಬಗೆಯ ಹಣ್ಣುಗಳು

ಇನ್ನು ಆಯಾ ಹಣ್ಣುಗಳ ಗಾತ್ರ, ಗುಣಮಟ್ಟದ ಆಧಾರದಲ್ಲಿಯೇ ದರವನ್ನು ನಿಗದಿಪಡಿಸಲಾಗಿರುತ್ತದೆ. ರೈತರು ತಾವು ಬೆಳೆದ ಆಪೋಸಾ, ಬೇನಿಶಾನ್, ಕಲ್ಮಿ, ರುಮಾನಿ, ರಸಪೂರಿ ಸೇರಿದಂತೆ ಅನೇಕ ಬಗೆಯ ಹಣ್ಣುಗಳನ್ನು ತಂದು ಪ್ರದರ್ಶನ ಮಾಡಿದ್ದಷ್ಟೇ ಅಲ್ಲದೇ ಮಾರಾಟ ಕೂಡ ಮಾಡುತ್ತಿದ್ದಾರೆ. ಹತ್ತಾರು ಬಗೆಯ ಹಣ್ಣುಗಳು ಒಂದೇ ಸೂರಿನಡಿ ಸಿಕ್ಕಿದ್ದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಆದರೆ, ಕೆಲ ಗ್ರಾಹಕರು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಮಾವಿನ ಹಣ್ಣುಗಳಿಗೆ ಹೋಲಿಕೆ ಮಾಡಿ ಇಲ್ಲಿನ ಹಣ್ಣುಗಳು ದುಬಾರಿಯಾಗಿವೆ ಎಂದು ಮೂಗು ಮುರಿಯುತ್ತಿದ್ದಾರೆ. ಇದರಿಂದಾಗಿ ರೈತರಿಗೆ ನಿರಾಸೆಯೂ ಆಗುತ್ತಿದೆ.

ಒಂದು ಕಡೆ ರೈತರು ತಾವು ಬೆಳೆದ ಫಸಲಿಗೆ ಬೆಲೆ ಇಲ್ಲ ಎಂದು ನೋವು ಮಾಡಿಕೊಳ್ಳುತ್ತಿರುತ್ತಾರೆ. ಮತ್ತೊಂದು ಕಡೆ ಮಾರುಕಟ್ಟೆಗೆ ಒಯ್ದ ಫಸಲು ಮಾರಾಟದಲ್ಲಿ ಮಧ್ಯವರ್ತಿಗಳ ಕಾಟದಿಂದ ರೈತರಿಗೆ ಭಾರೀ ನಷ್ಟವಾಗುತ್ತೆ. ಆದರೆ, ಇಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲದೇ ರೈತರಿಗೆ ತಾವು ಬೆಳೆದ ಮಾವಿನ ಹಣ್ಣುಗಳಿಗೆ ಸೂಕ್ತ ದರ ಸಿಗುವುದರ ಜೊತೆಗೆ ಗ್ರಾಹಕರಿಗೂ ಕಡಿಮೆ ಬೆಲೆಗೆ ಹಣ್ಣು ಸಿಗುತ್ತಿರುವುದು ಸಂತಸದ ವಿಷಯವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ