ಎನ್​​​​ಡಬ್ಲ್ಯೂಕೆಆರ್​​ಟಿಸಿಯಲ್ಲಿ ಗಣೇಶ ಉತ್ಸವಕ್ಕೂ ವಿಘ್ನ: ಡಿಪೋ, ವರ್ಕ್‌ಶಾಪ್‌ಗಳಲ್ಲಿ ಪ್ರಸಾದ ತಯಾರಿಗೆ ತಡೆ; ಅಧಿಕಾರಿಗಳ ಆದೇಶಕ್ಕೆ ಸಿಬ್ಬಂದಿ ಅಕ್ರೋಶ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗವು ಬಸ್ ಡಿಪೋಗಳಲ್ಲಿ ಗಣೇಶ ಚತುರ್ಥಿ ಪ್ರಸಾದದ ಅಡುಗೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಗ್ನಿ ಸುರಕ್ಷತೆ ಮತ್ತು ಅಗ್ನಿ ಅವಘಡ ನಿಯಂತ್ರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದ್ದಕ್ಕೆ ಸಿಬ್ಬಂದಿ ವರ್ಗದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇದು ಸುರಕ್ಷತೆ ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಎನ್​​​​ಡಬ್ಲ್ಯೂಕೆಆರ್​​ಟಿಸಿಯಲ್ಲಿ ಗಣೇಶ ಉತ್ಸವಕ್ಕೂ ವಿಘ್ನ: ಡಿಪೋ, ವರ್ಕ್‌ಶಾಪ್‌ಗಳಲ್ಲಿ ಪ್ರಸಾದ ತಯಾರಿಗೆ ತಡೆ; ಅಧಿಕಾರಿಗಳ ಆದೇಶಕ್ಕೆ ಸಿಬ್ಬಂದಿ ಅಕ್ರೋಶ
ಸಾಂದರ್ಭಿಕ ಚಿತ್ರ
Image Credit source: Tv9 kannada
Edited By:

Updated on: Sep 16, 2026 | 7:40 AM

ಹುಬ್ಬಳ್ಳಿ, ಸೆ.16: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಭದ್ರತಾ ಮತ್ತು ಜಾಗೃತಾ ಶಾಖೆಯು ಹೊರಡಿಸಿರುವ ನೂತನ ಸುತ್ತೋಲೆಯೊಂದು ಈಗ ಸಂಸ್ಥೆಯ ನೌಕರರು ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಗಣೇಶ ಚತುರ್ಥಿಯ ಅಂಗವಾಗಿ ಬಸ್ ಡಿಪೋ, ವಿಭಾಗೀಯ ಕಾರ್ಯಾಗಾರ (ವರ್ಕ್‌ಶಾಪ್) ಹಾಗೂ ಬಸ್ ನಿಲ್ದಾಣಗಳ ಆವರಣದಲ್ಲಿ ಕಟ್ಟಿಗೆ ಅಥವಾ ಗ್ಯಾಸ್ ಬಳಸಿ ಪ್ರಸಾದದ ಅಡುಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿಗಳು 12-09-2026 ರಂದು ಹೊರಡಿಸಿರುವ ಅಧಿಕೃತ ಆದೇಶದಲ್ಲಿ (ಸಂ.ವಾಕರಸಾ/ಹುಗ್ರಾಖಿ/ಭದ್ರತಾ/ವಿಭನಿ/270/2026-27) ಕೆಳಗಿನಂತೆ ನಿರ್ದೇಶನ ನೀಡಲಾಗಿದೆ. ಸಂಸ್ಥೆಯ ಅಗ್ನಿ ಸುರಕ್ಷತಾ ಕ್ರಮಗಳು ಹಾಗೂ ಅಗ್ನಿ ಅವಘಡಗಳ ನಿಯಂತ್ರಣ ಕುರಿತ ದಿನಾಂಕ 29.07.2025 ರ ಸುತ್ತೋಲೆಯ ಖಂಡಿಕೆ 10 ರ ಉಪಖಂಡಿಕೆ 11 ರ ನಿಯಮಗಳನ್ನು ಉಲ್ಲೇಖಿಸಿ ಈ ನಿಷೇಧ ಹೇರಲಾಗಿದೆ.

ಬಸ್ ಡಿಪೋ ಹಾಗೂ ವಿಭಾಗೀಯ ಕಾರ್ಯಾಗಾರಗಳಲ್ಲಿ ಡೀಸೆಲ್ ಟ್ಯಾಂಕ್‌ಗಳು, ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಮಗ್ರಿಗಳು ಹಾಗೂ ನೂರಾರು ಬಸ್‌ಗಳು ನಿಂತಿರುತ್ತವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಟ್ಟಿಗೆ ಅಥವಾ ಗ್ಯಾಸ್ ಬಳಸಿ ಅಡುಗೆ ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಸೂಚಿಸಲಾಗಿದೆ.ಮುಂಬರುವ ಗಣೇಶ ಚತುರ್ಥಿ ಹಾಗೂ ಹಬ್ಬ-ಹರಿದಿನಗಳಲ್ಲಿ ಈ ಆದೇಶವನ್ನು ಉಲ್ಲಂಘಿಸಿ ಅಡುಗೆಯನ್ನು ಮಾಡಿದಲ್ಲಿ, ಸಂಬಂಧಿಸಿದ ಘಟಕದ ಮುಖ್ಯಸ್ಥರ ವಿರುದ್ಧ ಸೂಕ್ತ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಇದನ್ನೂ ಓದಿ: ‘ಉಮರ್ ಖಾಲಿದ್ ದೇಶ ಪ್ರೇಮಿ’: ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಬಣ್ಣನೆ, ಎಬಿವಿಪಿ ವಿರುದ್ಧ ವಾಗ್ದಾಳಿ

ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್: ನೌಕರರ ತೀವ್ರ ಆಕ್ಷೇಪ

ದಿನಾಂಕ 14.09.2026 ರಿಂದ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಹುಗ್ರಾ-1, 2, 3 ನೇ ಘಟಕ, ನವಲಗುಂದ, ಕಲಘಟಗಿ ಘಟಕಗಳು ಸೇರಿದಂತೆ ಹಲವೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆದು ಪ್ರಸಾದ ಸೇವೆಯ ವ್ಯವಸ್ಥೆ ಮಾಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದ ವಾಡಿಕೆಯಾಗಿತ್ತು. ಪ್ರತಿ ವರ್ಷ ಸಿಬ್ಬಂದಿಯೇ ಒಟ್ಟುಗೂಡಿ ವಿಘ್ನನಿವಾರಕನಿಗೆ ನೈವೇದ್ಯ ಹಾಗೂ ಪ್ರಸಾದ ಸಿದ್ಧಪಡಿಸುತ್ತಿದ್ದರು. ಆದರೆ ಈ ಬಾರಿ ಭದ್ರತೆಯ ನೆಪವೊಡ್ಡಿ ನಿಗಮದ ಆಡಳಿತ ಮಂಡಳಿ ಹಬ್ಬದ ಆಚರಣೆಯ ಪ್ರಸಾದ ತಯಾರಿಗೆ ಕೋಕ್ ನೀಡಿರುವುದಕ್ಕೆ ಸಿಬ್ಬಂದಿ ವರ್ಗದಿಂದ ತೀವ್ರ ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತವಾಗಿದೆ.

Whatsapp Image 2026 09 16 At 6.19.23 Am

ಪ್ರತಿ ವರ್ಷ ಗಣೇಶ ಹಬ್ಬದ ಸಮಯದಲ್ಲಿ ಸಂಸ್ಥೆಯ ಎಲ್ಲಾ ಡಿಪೋ ಹಾಗೂ ವರ್ಕ್‌ಶಾಪ್‌ಗಳಲ್ಲಿ ವಿಘ್ನನಿವಾರಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸಿಬ್ಬಂದಿಯೇ ಒಟ್ಟುಗೂಡಿ ಪ್ರಸಾದ ಸಿದ್ಧಪಡಿಸಿ ಹಂಚುವುದು ಹಲವು ವರ್ಷಗಳಿಂದ ನೆರವೇರಿಕೊಂಡು ಬಂದಿದ್ದ ಆಚರಣೆಯಾಗಿತ್ತು. ಆದರೆ ಈ ಬಾರಿ ಅಧಿಕಾರಿಗಳು ದಿಢೀರನೆ ಅಡುಗೆ ತಯಾರಿಗೆ ನಿಷೇಧ ಹೇರಿರುವುದಕ್ಕೆ ಕೆಲವು ಸಿಬ್ಬಂದಿ ವರ್ಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸುರಕ್ಷತೆಯ ನೆಪವೊಡ್ಡಿ ಇಂತಹ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us