ಬೆಂಗಳೂರು ಮಳೆಗೆ ಹಲವು ಅವಾಂತರ: ಹಲವೆಡೆ ರಸ್ತೆಗಳಿಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ, ಇಂದೂ ಸಹ ಟ್ರಾಫಿಕ್ ಜಾಮ್ ಸಾಧ್ಯತೆ
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಅವಾಂತರಗಳು ಸಂಭವಿಸಿವೆ. ದೊಮ್ಮಲೂರಿನಲ್ಲಿ ಆರ್ಮಿ ಕಾಂಪೌಂಡ್ ಗೋಡೆ ಕುಸಿದು ನಾಲ್ಕು ಹಸುಗಳು ಹಾಗೂ ಒಂದು ಕರು ಮೃತಪಟ್ಟಿದ್ದು, ಮಾಲೀಕ ಗಾಯಗೊಂಡಿದ್ದಾರೆ. ಹಲವು ಕಡೆಗಳಲ್ಲಿ ರಸ್ತೆಗಳಿಗೆ ಮರ ಬಿದ್ದ ಕಾರಣ ಬುಧವಾರ ಬೆಳಗ್ಗೆಯೂ ಸಂಚಾರಕ್ಕೆ ಅಡಚಣೆ ಇದ್ದು, ಆ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ವಿವರ ಇಲ್ಲಿದೆ.

ಮುಖ್ಯಾಂಶಗಳು
- ಕಂಠೀರವ ಸ್ಟೇಡಿಯಂ ಜಂಕ್ಷನ್ ಬಳಿ ಮರ ಬಿದ್ದು ನಿಧಾನಗತಿಯ ಸಂಚಾರ
- ಕೋಡೆ ಅಂಡರ್‌ಪಾಸ್ ಬಳಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ
- ಅಗರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ನಿಧಾನ ಸಂಚಾರ
ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಹಾಗೂ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಅವಾಂತರಗಳು ಸಂಭವಿಸಿವೆ. ದೊಮ್ಮಲೂರಿನಲ್ಲಿ ಆರ್ಮಿ ಕಾಂಪೌಂಡ್ ಗೋಡೆ ಕುಸಿದು ನಾಲ್ಕು ಹಸುಗಳು ಹಾಗೂ ಒಂದು ಕರು ಮೃತಪಟ್ಟಿವೆ. ಜಾನುವಾರುಗಳ ಮಾಲೀಕ ಮುನಿರಾಜು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಕಡೆಗಳಲ್ಲಿ ರಸ್ತೆಗಳ ಮೇಲೆ ಮರಬಿದ್ದ ಹಾಗೂ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಬುಧವಾರ ಬೆಳಗ್ಗೆ ಸಹ ನಿಧಾನ ಗತಿಯ ಸಂಚಾರವಿದೆ.
ಬೆಂಗಳೂರಿನ ಎಲ್ಲೆಲ್ಲಿ ಸಂಚಾರಕ್ಕೆ ಅಡಚಣೆ ಇದೆ?
ಕೋಡೆ ಅಂಡರ್‌ಪಾಸ್ ಬಳಿ ಮಳೆ ನೀರು ನಿಂತಿರುವುದರಿಂದ ಮೆಜೆಸ್ಟಿಕ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಕಂಠೀರವ ಸ್ಟೇಡಿಯಂ ಜಂಕ್ಷನ್ ಬಳಿ ಮರ ಬಿದ್ದ ಪರಿಣಾಮ ಸಿದ್ದಲಿಂಗಯ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಅಗರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ , ಮಳೆ ನೀರು ನಿಂತಿರುವುದರಿಂದ ನಿಧಾನಗತಿಯಲ್ಲಿಸಂಚಾರವಿರುತ್ತದೆ. ಸಿಬಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಇಎಸ್‌ಐ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಎಕ್ಸ್ ಸಂದೇಶ
“ಸಂಚಾರ ಸಲಹೆ” ಕಂಠೀರವ ಸ್ಟೇಡಿಯಂ ಜಂಕ್ಷನ್ ಬಳಿ ಮರ ಬಿದ್ದ ಪರಿಣಾಮ ಸಿದ್ದಲಿಂಗಯ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. “Traffic advisory” Due to tree fall near Kanteerava Stadium Junction towards Siddalingayya Junction, is having slow-moving traffic pic.twitter.com/sjB3UmAe6B
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 16, 2026
ಮಲ್ಲತ್ತಹಳ್ಳಿಯಲ್ಲಿ ಮರ ಬಿದ್ದು ಆಟೋ ಜಖಂ
ಧಾರಾಕಾರ ಮಳೆಯಿಂದಾಗಿ ಮಲ್ಲತ್ತಹಳ್ಳಿಯಲ್ಲಿ ಬೃಹತ್ ಮರವೊಂದು ರಸ್ತೆಯ ಮೇಲೆಯೇ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಆಟೋವೊಂದು ಜಖಂಗೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಜಿಬಿಎ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.
ಕೋರಮಂಗಲದಲ್ಲಿ ಜಾನುವಾರುಗಳ ಪರದಾಟ
ಕೋರಮಂಗಲದಲ್ಲಿ ಮಳೆ ನೀರು ಕುತ್ತಿಗೆ ಎತ್ತರಕ್ಕೆ ನಿಂತ ಪರಿಣಾಮ ಜಾನುವಾರುಗಳು ತತ್ತರಿಸಿವೆ. ಕೆಲವು ರಾಸುಗಳು ನೀರಿನಲ್ಲಿ ಪರದಾಡುತ್ತಿದ್ದರೆ, ಇನ್ನೂ ಕೆಲವು ಜಾನುವಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ತಗ್ಗು ಪ್ರದೇಶಗಳ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಸಂಕಷ್ಟ ಅನುಭವಿಸಿದ್ದಾರೆ.
ನಗರದ ಹಲವು ರಸ್ತೆಗಳು ಜಲಾವೃತ
ಮೆಜೆಸ್ಟಿಕ್ ಮಾರ್ಕೆಟ್, ಜಯನಗರ, ಶಾಂತಿನಗರ, ರಾಜಾಜಿನಗರ, ವಿಜಯನಗರ, ರಿಚ್ಮಂಡ್ ಟೌನ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು. ರಿಚ್ಮಂಡ್ ಟೌನ್ ಎದುರಿನ ರಸ್ತೆಯಲ್ಲಿ ನೀರು ನಿಂತು ವಾಹನಗಳು ಭಾಗಶಃ ಮುಳುಗಿದವು. ಜಯನಗರ, ಲಕ್ಕಸಂದ್ರ, ಡಬಲ್ ರೋಡ್ ಹಾಗೂ ವಿಲ್ಸನ್ ಗಾರ್ಡನ್ ಭಾಗಗಳಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಅಂಗಡಿಗಳಲ್ಲಿ ಆಶ್ರಯ ಪಡೆದರು.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಗಳ ಬಾಗಿಲಿನ ಮುಂದೆ ನಿಂತಿದ್ದ ನೀರನ್ನು ಹೊರಹಾಕಲು ನಿವಾಸಿಗಳು ಹರಸಾಹಸಪಟ್ಟರು. ಹಲವು ರಸ್ತೆಗಳು ಕೆರೆಗಳಂತಾಗಿದ್ದವು.
ಅಂಡರ್‌ಪಾಸ್‌ಗಳಲ್ಲಿ ನೀರು, ಟ್ರಾಫಿಕ್‌ಜಾಮ್
ಶಿವಾನಂದ ಸರ್ಕಲ್ ಹಾಗೂ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು. ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ತಾವರೆಕೆರೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ನೀರು ನಿಂತಿದ್ದರಿಂದ ತೀವ್ರ ತೊಂದರೆ ಅನುಭವಿಸಿದರು. ಹೊಸೂರು ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿ, ಮಳೆಯಲ್ಲೇ ವಾಹನ ಸವಾರರು ಸಿಲುಕಿಕೊಂಡರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




