ಜಮೀರ್ ಅಹ್ಮದ್ ಹೇಳಿದ ಕೂಡಲೇ ಏನೂ ಆಗಲ್ಲ: ಮುಸ್ಲಿಂ ಮೀಸಲಾತಿ ಹೆಚ್ಚಳ ಬಗ್ಗೆ ಪ್ರಲ್ಹಾದ್ ಜೋಶಿ ತಿರುಗೇಟು
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಧರ್ಮಾಧಾರಿತ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ಅವರು, ಸರ್ಕಾರಿ ಸಂಸ್ಥೆಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ರಾಜ್ಯದ ಜನರಿಗೆ ಕಾಂಗ್ರೆಸ್ ತೀವ್ರ ದ್ರೋಹ ಬಗೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಹುಬ್ಬಳ್ಳಿ, ಮಾರ್ಚ್ 13: ಜನರಿಗೆ ಕಾಂಗ್ರೆಸ್ (Congress) ತೀವ್ರ ದ್ರೋಹ ಬಗೆಯುತ್ತಿದೆ. ಧರ್ಮಾಧಾರಿತ ಮೀಸಲಾತಿ (Reservation) ಒಪ್ಪಲು ಸಾಧ್ಯವೇ ಇಲ್ಲ. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಸಚಿವ ಜಮೀರ್ ಅಹ್ಮದ್ (Zameer Ahmed) ಹೇಳಿದ ತಕ್ಷಣ ಯಾವುದೂ ಆಗಲ್ಲ. ಇವರ (ಕಾಂಗ್ರೆಸ್ ಸರ್ಕಾರ) ಯಡವಟ್ಟಿನಿಂದ ಅನೇಕ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಸ್ಲಿಮರ ಮೀಸಲಾತಿಯನ್ನು ಶೇ 10ಕ್ಕೆ ಹೆಚ್ಚಿಸುವ ಸಂಬಂಧ ಪರಿಶೀಲನೆ ನಡೆಸಲು ಜಮೀರ್ ಅಹ್ಮದ್ ಸೂಚನೆ ನೀಡಿರುವುದು, ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದರು.
ಕೆಎಸ್ಆರ್ಟಿಸಿ, ಬಿಎಂಟಿಸಿ ನಷ್ಟದಲ್ಲಿರುವ ಬಗ್ಗೆ ಪ್ರತಿಕ್ರಯಿಸಿ, KSRTC ವೈಪರ್ ಹಾಕುವುದಕ್ಕೂ ಇವರ ಬಳಿ ದುಡ್ಡಿಲ್ಲ. ಸರ್ಕಾರಿ ಇಲಾಖೆಗಳ ವಿದ್ಯುತ್ ಬಿಲ್ ಪಾವತಿ ಮಾಡುತ್ತಿಲ್ಲ, ಅದಕ್ಕೂ ಹಣ ಇಲ್ಲ. ಸರ್ಕಾರಿ ಬಸ್ಗಳಿಗೆ ಡಿಸೇಲ್ ಹಾಕುವುದಕ್ಕೂ ದುಡ್ಡಿಲ್ಲ. ಶಾಲಾ ಮಕ್ಕಳ ಸಮಯಕ್ಕೆ ಸರಿಯಾದ ಬಸ್ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ರಾಜ್ಯದಲ್ಲಿ ಇಲ್ಲದ ಗ್ಯಾರಂಟಿ ಅನುಷ್ಠಾನ ಸಮಿತಿ ಕರ್ನಾಟಕದಲ್ಲಿ ಯಾಕೆ? ರಾಹುಲ್ ಗಾಂಧಿ ಅವರು ಗ್ಯಾರಂಟಿ ಸಮಿತಿ ಅನುದಾನದ ಬಗ್ಗೆ ಹೇಳಬೇಕು. ಇದು ರಾಜ್ಯದ ಜನರಿಗೆ ಬಗೆದಿರುವ ದ್ರೋಹ. ದೊಡ್ಡದಾಗಿ ಮಾತನಾಡುವ ರಾಹುಲ್ ಗಾಂಧಿ ಈಗ ಮಾತನಾಡಲಿ ಎಂದು ಜೋಶಿ ಸವಾಲು ಹಾಕಿದರು.
ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಕಾರ್ಯನಿರ್ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರವುದಕ್ಕೆ ಪ್ರತಿಕ್ರಿಯಿಸಿ, ನಾನೇ ಇರುತ್ತೇನೆ ಎಂಬುದೇ ಒಂದು ದೊಡ್ಡ ಸಮಸ್ಯೆ. ಡಿಕೆ ಶಿವಕುಮಾರ್ ಹಾಗೂ ಬೆಂಬಲಿಗರು ಇದನ್ನು ಹೇಳಬೇಕು. ಅವರೇ ಇರಬೇಕು ಎಂಬುದು ನಮ್ಮ ಆಶಯ. ಆದರೆ, ಚೆನ್ನಾಗಿ ಕೆಲಸ ಮಾಡಲಿ, ಲೂಟಿ ಮಾಡುವುದು ಬೇಡ ಎಂದರು.
ಕಮಿಷನ್ ಆರೋಪದ ಬಗ್ಗೆ ನ್ಯಾಯಯುತ ತನಿಖೆಯಾಗಲಿ: ಜೋಶಿ
40 ಪರ್ಸೆಂಟ್ ಕಮಿಷನ್ ಆರೋಪ ಸಂಬಂಧ ತನಿಖಾ ವರದಿ ಸಲ್ಲಿಕೆ ಬಗ್ಗೆ ಮಾತನಾಡಿದ ಅವರು, ನ್ಯಾಯಯುತವಾಗಿ ತನಿಖೆ ಆಗಬೇಕು. ಆ ವರದಿಯನ್ನು ಮಂಡಿಸಲಿ ಎಂದರು. ‘ಯಾರಿಗೆ ನೀವು (ತನಿಖೆ ನಡೆಸಿದವರು) ನೋಟಿಸ್ ಕೊಟ್ಟಿದೀರಿ? ನಮಗೆ ಗೊತ್ತಿರುವ ಹಾಗೆ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಆರೋಪ ಬಂದವರಿಗೆ ನೋಟಿಸ್ ಕೊಟ್ಟಿಲ್ಲ. ಮೊದಲು ನೋಟಿಸ್ ಕೊಡಿ’ ಎಂದರು.
ಇದನ್ನೂ ಓದಿ: ಮುಸ್ಲಿಮರಿಗೆ ಸಿದ್ದರಾಮಯ್ಯ ಭರ್ಜರಿ ಕೊಡುಗೆ? ಮೀಸಲಾತಿ ಶೇ 10ಕ್ಕೆ ಏರಿಕೆ ಮನವಿ ಬಗ್ಗೆ ಪರಿಶೀಲನೆಗೆ ಜಮೀರ್ ಸೂಚನೆ
ನೋಟಿಸ್ ಬಂದ ಮೇಲೆ ನಾವು ಉತ್ತರ ಕೊಡುತ್ತೇವೆ. ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಜೋಶಿ ಹೇಳಿದರು.