
ಧಾರವಾಡ, ಸೆಪ್ಟೆಂಬರ್ 05: ಜೈಲಿನ ಅವ್ಯವಸ್ಥೆ ಖಂಡಿಸಿ ಕೈದಿಗಳಿಂದ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಗೆ ಜೈಲಧಿಕಾರಿಗಳಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆ ಓರ್ವ ಕೈದಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಮಹಾರಾಷ್ಟ್ರದ ಮೀರಜ್ ಮೂಲದ ಮಹೇಶ್ ಆತ್ಮಹತ್ಯೆಗೆ ಯತ್ನಿಸಿದ ಕೈದಿ. ಅಸ್ವಸ್ಥಗೊಂಡಿದ್ದ ಮಹೇಶ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಸಿಗದೆ ಕೈದಿಗಳು ನರಕಯಾತನೆ ಅನುಭವಿಸುತ್ತಿದ್ದು, ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸಿದ್ದರು. ಕೈದಿಗಳ ಈ ಪ್ರತಿಭಟನೆಗೆ ಜೈಲಧಿಕಾರಿಗಳು ಸ್ಪಂದಿಸಿಲ್ಲ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕೈದಿ ಮಹೇಶ್ ಜೈಲಿನಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗಾವಣೆ, ಟಿವಿ9 ವರದಿ ಬೆನ್ನಲ್ಲೇ ಕ್ರಮ
ಕೊಲೆ ಪ್ರಕರಣವೊಂದರಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿರುವ ಮಹೇಶ್ ಫಿನಾಯಿಲ್ ಕುಡಿದಿದ್ದ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನು ಘಟನೆ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯಲ್ಲಿ ಖಾಕಿ ಪಡೆಯ ಬೇಜವಾಬ್ದಾರಿತನಕ್ಕೆ ಅಮಾಯಕ ಮಹಿಳೆಯೊಬ್ಬರು ಆತ್ಮಹತ್ಯೆಗೆ ಮುಂದಾದ ಘಟನೆ ನಡೆದಿದೆ. ಯಾತನೂರು ಗ್ರಾಮದ ನಿವಾಸಿ ರೇವೂಬಾಯಿ ಎಂಬ ಮಹಿಳೆಯ ಮೇಲೆ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಗ್ರಾಮದ ಕೆಲ ವ್ಯಕ್ತಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ: ‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
ತನಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿ, ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಣ್ಣೀರಿಡುತ್ತಾ ನೆಲೋಗಿ ಠಾಣೆಗೆ ಬಂದಿದ್ದ ಮಹಿಳೆಗೆ ಪೊಲೀಸರು ರಕ್ಷಣೆ ಕೊಡುವ ಬದಲು ಸತಾಯಿಸಿದ್ದಾರೆ. ಹಲ್ಲೆ ನಡೆದು ಗಂಭೀರ ಗಾಯಗಳಾಗಿದ್ದರೂ ಎಫ್‌ಐಆರ್ ದಾಖಲಿಸಲು ಪೊಲೀಸರು ದಿನಗಟ್ಟಲೆ ವಿಳಂಬ ಮಾಡಿದ್ದಾರೆ.
ರಕ್ಷಣೆ ನೀಡಬೇಕಾದ ಕಾನೂನಿನ ರಕ್ಷಕರೇ ಕೈಬಿಟ್ಟಾಗ ದಿಕ್ಕುತೋಚದೆ, ತೀವ್ರ ಆಘಾತ ಹಾಗೂ ನೋವಿಗೆ ಒಳಗಾದ ರೇವೂಬಾಯಿ ಬೇರೆ ದಾರಿ ಕಾಣದೆ ಪೊಲೀಸ್ ಠಾಣೆಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅಸ್ವಸ್ಥ ರೇವೂಬಾಯಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರ ನಡೆ ವಿರುದ್ಧ ರೇವೂಬಾಯಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಸಿಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.