Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲು ನಿಮ್ಮದೇ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಿಕೊಂಡು ಬನ್ನಿ: ವಿಜಯೇಂದ್ರಗೆ ಸಿದ್ದರಾಮಯ್ಯ ತಿರುಗೇಟು

ಸಿಎಂ ಸಿದ್ದರಾಮಯ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಚರ್ಚೆ ಸವಾಲಿಗೆ ಪ್ರತ್ಯುತ್ತರ ನೀಡಿದ್ದು, ಮೊದಲು ಪಕ್ಷದ ನಾಯಕರಾದ ಯತ್ನಾಳ್ ಮತ್ತು ಜಾರಕಿಹೊಳಿ ಅವರ ಜೊತೆ ಚರ್ಚಿಸುವಂತೆ ಸಲಹೆ ನೀಡಿದ್ದಾರೆ. ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಉಲ್ಲೇಖಿಸಿ, ಬಿಜೆಪಿಯ ಒಳಜಗಳವನ್ನು ಎತ್ತಿ ತೋರಿಸಿದ್ದಾರೆ.

ಮೊದಲು ನಿಮ್ಮದೇ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಿಕೊಂಡು ಬನ್ನಿ: ವಿಜಯೇಂದ್ರಗೆ ಸಿದ್ದರಾಮಯ್ಯ ತಿರುಗೇಟು
ಮೊದಲು ನಿಮ್ಮದೇ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಿಕೊಂಡು ಬನ್ನಿ: ವಿಜಯೇಂದ್ರಗೆ ಸಿದ್ದರಾಮಯ್ಯ ತಿರುಗೇಟು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2024 | 9:02 PM

ಬೆಂಗಳೂರು, ನವೆಂಬರ್​ 02: ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ತಾವೇ ಬಹಿರಂಗ ಚರ್ಚೆಗೆ ಸಿದ್ಧ ಎಂದು ನೀವು ಹಾಕಿರುವ ಸವಾಲನ್ನು ಗಮನಿಸಿದೆ. ನನ್ನ ಜೊತೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಜೊತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಿಮ್ಮ ಪೂಜ್ಯ ತಂದೆಯವರನ್ನು ಮುಖ್ಯಮಂತ್ರಿ ಮಾಡಲು ನೀವು ಬಿಜೆಪಿ ಹೈಕಮಾಂಡ್​ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಿದ್ದೀರಿ..!! ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಇನ್ನೂ ಒಂದಷ್ಟು ಕೋಟಿ ರೂಪಾಯಿ ನೀಡಿದ್ದೀರಿ..!! ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ. ಮೊದಲು ಅವರ ಜೊತೆ ಚರ್ಚೆ ಮಾಡಿ ಮುಗಿಸಿ ಬನ್ನಿ ಎಂದು ವಾಗ್ದಾಳಿ ಮಾಡಿದ್ದಾರೆ.

ನೀವು ಕಮಿಷನ್ ಹೊಡೆಯುವುದರಲ್ಲಷ್ಟೇ ಪರಿಣತರು ಎಂದು ನಿಮ್ಮದೇ ಪಕ್ಷದ ನಾಯಕರಾದ ಯತ್ನಾಳ್, ಜಾರಕಿಹೊಳಿ, ಹೆಚ್.ವಿಶ್ವನಾಥ್ ಅವರು ಹೇಳುತ್ತಲೇ ಇದ್ದಾರೆ. ಇಲ್ಲಿಯವರೆಗೆ ಅವರ ಆರೋಪಗಳಿಗೆ ನೀವು ಪ್ರತಿಕ್ರಿಯೆ ನೀಡದಿರುವುದು ಮತ್ತು ಇಂತಹ ಆರೋಪ ಮಾಡುತ್ತಿರುವವರ ವಿರುದ್ಧ ನಿಮ್ಮ ಬಿಜೆಪಿ ಹೈಕಮಾಂಡ್ ಕೂಡಾ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಆರೋಪಗಳನ್ನು ನೀವು ಒಪ್ಪಿಕೊಂಡಂತೆ ಕಾಣಿಸುತ್ತಿದೆ, ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ನಿಮ್ಮ ಪದಚ್ಯುತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಡಿಸೆಂಬರ್ ತಿಂಗಳ ಗಡುವು ನಿಜವಾಗುತ್ತಿರುವಂತೆ ಕಾಣುತ್ತಿದೆ. ನಮ್ಮ ಸರ್ಕಾರದ ಬಗ್ಗೆ ಚಿಂತಿಸುವ ಬದಲಿಗೆ ಮೊದಲು ನಿಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಯೋಚನೆ ಮಾಡಿ ಎಂದಿದ್ದಾರೆ.

ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್-ತಾಖತ್ ನಿಮಗಾಗಲಿ, ನಿಮ್ಮ ಹದಿನೇಳು ಎಂಪಿಗಳಿಗಾಗಲಿ ಎಲ್ಲಿದೆ?

ನೀವಿನ್ನೂ ಆಡಳಿತಕ್ಕೆ ಹೊಸಬರು. ತೆರಿಗೆ, ಅನುದಾನ, ಜಿಎಸ್‌ಟಿ ಇತ್ಯಾದಿ ವಿಚಾರಗಳೆಲ್ಲ ನಿಮ್ಮ ಪೂಜ್ಯ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರಿಗೇ ಅರ್ಥವಾಗಿಲ್ಲ, ನಿಮಗೆಷ್ಟು ಅರ್ಥವಾಗಬಹುದು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಿಮ್ಮದೇ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.6,498 ಕೋಟಿ ಮಾತ್ರ. ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ ರೂ.4 ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು ರೂ.45,000 ಕೋಟಿ ಮಾತ್ರ.

ಕರ್ನಾಟಕದ ಜನತೆ, ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂಪಾಯಿಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ. ಏಳು ಕೋಟಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್-ತಾಖತ್ ನಿಮಗಾಗಲಿ, ನಿಮ್ಮ ಹದಿನೇಳು ಎಂಪಿಗಳಿಗಾಗಲಿ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು

ನಮ್ಮ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ? ನಿಮ್ಮ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ನಿಮ್ಮದೇ ಶಾಸಕರು ಹೇಗೆ ದುರ್ಯೋಧನ – ದುಶ್ಯಾಸನರ ರೀತಿಯಲ್ಲಿ ನಡೆದುಕೊಂಡಿದ್ದರು ಎನ್ನುವ ಇತಿಹಾಸವನ್ನು ನಾನು ಕೆದಕಲು ಹೋಗುವುದಿಲ್ಲ. ಆದರೆ ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ಪೂಜ್ಯ ತಂದೆಯವರನ್ನು ಮನೆಯಲ್ಲಿಟ್ಟುಕೊಂಡು ನಮಗೆ ಹೆಣ್ಣುಮಕ್ಕಳ ರಕ್ಷಣೆಯ ಪಾಠ ಮಾಡಲು ಕನಿಷ್ಠ ನಿಮಗೆ ನಾಚಿಕೆ ಆಗುವುದಿಲ್ಲವೇ?

‘‘ಬೇಟಿ ಬಚಾವೋ, ಬೇಟಿ ಪಡಾವೋ’’ ಎಂದು ಆಗಾಗ ಘೋಷಣೆ ಕೂಗುತ್ತಿರುವ ಪ್ರಧಾನಿ ಮೋದಿ ಅವರು ಈ ಘೋಷಣೆಗೆ ಬದ್ಧರಾಗಿದ್ದರೆ ಪೋಕ್ಸೋ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಸ್ಥಾನದಿಂದ ಮತ್ತು ಅವರನ್ನು ರಕ್ಷಿಸುತ್ತಿರುವ ನಿಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂದು ತೀವ್ರವಾಗಿ ವಾಗ್ದಾಳಿ ಮಾಡಿದ್ದಾರೆ.

ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸುವ ನೈತಿಕತೆ ಈ ಜನ್ಮದಲ್ಲಿ ನೀವು ಪಡೆದುಕೊಂಡಿಲ್ಲ. ಅದನ್ನು ಮುಂದಿನ ಜನ್ಮದಲ್ಲಿ ಗಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಅಷ್ಟೆ. ಸಿಬಿಐ ಮತ್ತು ಇಡಿ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ, ಡಿನೋಟಿಪೀಕೇಷನ್, ಅಕ್ರಮ ಗಣಿಗಾರಿಕೆ, ಮನಿ ಲಾಂಡ್ರಿಂಗ್ ಹೀಗೆ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳ ಕಿಂಗ್ ಪಿನ್ ಆಗಿರುವ ನಿಮ್ಮ ಜಾಗ ಎಲ್ಲಿರಬಹುದು ಎನ್ನುವುದನ್ನು ಒಮ್ಮೆ ಯೋಚಿಸಿ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವ ದುಸ್ಸಾಹಸ ಮಾಡಬೇಡಿ ಎಂದಿದ್ದಾರೆ.

ವಕ್ಪ್ ಬೋರ್ಡ್​ಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆ

ವಕ್ಪ್ ಆಸ್ತಿ ವಿಚಾರದಲ್ಲಿ ಸುಬಗರ ಸೋಗು ಹಾಕುವುದೇನು ಬೇಡ. ನಿಮ್ಮದೇ ಪಕ್ಷದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಈಗಿನ ನಿಮ್ಮ ಮಿತ್ರ ಪಕ್ಷವಾದ ಜೆಡಿಎಸ್​ನ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೂರಾರು ರೈತ ಕುಟುಂಬಗಳ ಆಸ್ತಿಗಳನ್ನು ವಕ್ಪ್ ಬೋರ್ಡ್​ಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ಶೀಘ್ರದಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಆಗ ನಿಮ್ಮ ಪಾಪದ ಫಲವನ್ನು ನೀವೇ ಉಣ್ಣಬೇಕಾಗುವ ಸಂದರ್ಭ ಬರಬಹುದು..!! ಅದಕ್ಕೆ ಸಿದ್ಧರಾಗಿರಿ ಎಂದು ಕಿಡಿಕಾರಿದ್ದಾರೆ.

ವರದಿ: ಈರಣ್ಣ ಬಸವ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ