ಸುಡುವ ಬಿಸಿಲಿನ ನಡುವೆ ಎಲ್ ನಿನೋ ಆತಂಕ: ಮುಂಗಾರು ಮಳೆಗೆ ಕಂಟಕ, ದೇಶಾದ್ಯಂತ ಬರಗಾಲದ ಭೀತಿ!

El Nino Threat: ಒಂದೆಡೆ ಕರ್ನಾಟಕದಾದ್ಯಂತ ತಾಪಮಾನ ದಿನೇದಿನೆ ಏರುತ್ತಿದೆ. ಉಷ್ಣ ಅಲೆಗೆ ಜನ ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲೇ ಈ ವರ್ಷ ಬರಗಾಲದ ಭೀತಿ ಎದುರಾಗಿದೆ. ಹವಾಮಾನ ತಜ್ಞರು ಎಲ್ ನಿನೋ ಹವಾಮಾನ ವೈಪರೀತ್ಯದ ಸುಳಿವು ನೀಡಿದ್ದು, ಇದು ಭಾರತದ ಮುಂಗಾರು ಮಳೆಯ ಮೇಲೆ ಕರಿನೆರಳು ಬೀರಲಿದೆ. ಮಳೆ ಕೊರತೆಯಿಂದ ಬರಗಾಲ ಮತ್ತು ಬೆಲೆ ಏರಿಕೆಯ ಆತಂಕ ಎದುರಾಗಿದೆ.

ಸುಡುವ ಬಿಸಿಲಿನ ನಡುವೆ ಎಲ್ ನಿನೋ ಆತಂಕ: ಮುಂಗಾರು ಮಳೆಗೆ ಕಂಟಕ, ದೇಶಾದ್ಯಂತ ಬರಗಾಲದ ಭೀತಿ!
ಸಾಂದರ್ಭಿಕ ಚಿತ್ರ
Image Credit source: MediaForge AI

Updated on: Apr 22, 2026 | 9:13 AM

ಬೆಂಗಳೂರು, ಏಪ್ರಿಲ್ 22: ಕರ್ನಾಟಕದಲ್ಲಿ (Karnataka) ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಮಯದಲ್ಲಿ ಹವಾಮಾನ ಇಲಾಖೆಯು ‘ಎಲ್ ನಿನೋ (El Nino)’ ಸುಳಿವು ನೀಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಪೆಸಿಫಿಕ್ ಸಾಗರದ ಉಷ್ಣಾಂಶದಲ್ಲಿನ ಏರಿಕೆಯಿಂದ ಉಂಟಾಗುವ ಈ ಹವಾಮಾನ ವೈಪರೀತ್ಯವು ಭಾರತದ ಮುಂಗಾರು ಮಳೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಎಲ್ ನಿನೋ ಎಂದರೇನು?

ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶವು ವಾಡಿಕೆಗಿಂತ ಹೆಚ್ಚಾಗುವುದನ್ನೇ ‘ಎಲ್ ನಿನೋ’ ಎನ್ನಲಾಗುತ್ತದೆ. ಇದರಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿ ಗಾಳಿಯ ದಿಕ್ಕು ಬದಲಾಗುತ್ತದೆ. ಇದರ ನೇರ ಪರಿಣಾಮ ನೈಋತ್ಯ ಮುಂಗಾರು ಮಳೆಯ ಮೇಲೆ ಉಂಟಾಗಲಿದ್ದು, ಮಳೆಯ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಮಳೆ ಕಡಿಮೆಯಾದರೆ ಉಷ್ಣಾಂಶ ಮತ್ತಷ್ಟು ಹೆಚ್ಚಾಗಿ ತೀವ್ರ ಬರಗಾಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

ಕೃಷಿ ಮತ್ತು ಆರ್ಥಿಕತೆಗೆ ಪೆಟ್ಟು

ಮುಂಗಾರು ಮಳೆ ಕುಂಠಿತಗೊಂಡರೆ ಭಾರತದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆಯಾಗಲಿದೆ. ಇದು ಆಹಾರ ಭದ್ರತೆಗೆ ಧಕ್ಕೆ ತರುವುದಲ್ಲದೆ, ಮಾರುಕಟ್ಟೆಯಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ.
Karnataka Heatwave: ಜನರ ನಿದ್ರೆಗೆಡಿಸಿದ ಎಲ್​ ನಿನೋ ಎಫೆಕ್ಟ್​ ಹಲವು ರಾಜ್ಯಗಳಲ್ಲಿ ಶಾಲೆಗಳ ಸಮಯವೇ ಬದಲು

ಶಾಲೆಗಳಿಗೆ ರಜೆ, ಸಮಯ ಬದಲಾವಣೆ

ಒಡಿಶಾದ ತಿಟ್ಲಾಘರ್​ನಲ್ಲಿ 42.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾದ 9 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಶಾಲಾ ಸಮಯವನ್ನು ಬದಲಿಸಲಾಗಿದ್ದು, ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ತರಗತಿ ನಡೆಸಲು ಸೂಚಿಸಲಾಗಿದೆ. ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇಂತಹದೇ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ‘ಹೀಟ್ ವೇವ್’ ಅಬ್ಬರ: ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಬೆಡ್ ಮೀಸಲಿಡಲು ದಿನೇಶ್ ಗುಂಡೂರಾವ್ ಸೂಚನೆ!

ಒಟ್ಟಾರೆಯಾಗಿ, ಅಗ್ನಿಕುಂಡದಂತಾಗಿರುವ ಭೂಮಿಗೆ ಎಲ್ ನಿನೋ ಎಂಟ್ರಿಯು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಮುಂಬರುವ ದಿನಗಳಲ್ಲಿ ಬರಗಾಲ ಎದುರಿಸಲು ಸಜ್ಜಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 am, Wed, 22 April 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us