ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಹೆಚ್ಚಾದ ಕಾಡು ಹಂದಿಗಳ ಉಪಟಳ: ರೈತರಿಗೆ ಲಕ್ಷಾಂತರ ರೂ ನಷ್ಟ
ಗಡಿ ಜಿಲ್ಲೆ ಬೀದರ್ನಲ್ಲಿ ರೈತರ ಹೊಲದಲ್ಲೀಗ ಕಾಡು ಪ್ರಾಣಿಗಳದ್ದೆ ಕಾರುಬಾರು. ಕಾಡು ಪ್ರಾಣಿಗಳ ತುಂಟಾಟಕ್ಕೆ ರೈತರು ಕಂಗಾಲು. ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕಾವುಲು ಕಾದರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಅಂತಾ ಅರಣ್ಯ ಇಲಾಖೆಯ ಮೊರೆ ಹೋಗುತ್ತಿದಾರೆ.
ಬೀದರ್, ಆಗಸ್ಟ್ 3: ಕಾಡು ಪ್ರಾಣಿಗಳ ಕಾಟಕ್ಕೆ ಆ ಜಿಲ್ಲೆಯ ರೈತರು (Farmers) ಪ್ರತಿ ವರ್ಷ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಬಿತ್ತಿದ ಬೆಳೆ ರಕ್ಷಿಸಲು ಹಗಲು ರಾತ್ರಿ ಎನ್ನದೆ ಹೊಲದಲ್ಲಿಯೇ ವಾಸ್ತವ್ಯ ಹೂಡುತ್ತಿದ್ದಾರೆ. ಆದರೂ ರೈತರ ಕಣ್ಣು ತಪ್ಪಿಸಿ ಹೊಲಕ್ಕೆ ನುಗ್ಗುವ ಕಾಡುಪ್ರಾಣಿಗಳು ಬೆಳೆ ತಿಂದು ನಾಶಮಾಡುತ್ತಿವೆ. ಕಾಡು ಹಂದಿಗಳ (wild boars) ಕಾಟದಿಂದ ಬೆಸತ್ತಿರುವ ರೈತರು ತಮ್ಮ ಬೆಳೆಯನ್ನ ಉಳಿಸಿಕೊಳ್ಳಲು ಪಡಬಾರದ ಕಷ್ಟ ಪಡುತ್ತಿದ್ದಾರೆ.
ಅರಣ್ಯ ಸಚಿವರ ತವರು ಜಿಲ್ಲೆಯಲ್ಲಿ ಹೆಚ್ಚಾದ ಕಾಡು ಹಂದಿಗಳ ಉಪಟಳ
ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ‘ಬಿ’ ಗ್ರಾಮದಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ. ಅರಣ್ಯ ಸಚಿವರ ತವರು ಜಿಲ್ಲೆಯಲ್ಲಿ ಹೆಚ್ಚಾಗಿದೆ ಕಾಡು ಹಂದಿಗಳ ಉಪಟಳ. ಎರಡು ರಾಜ್ಯದ ಗಡೀಯಲ್ಲಿರುವ ಬೀದರ್ ಜಿಲ್ಲೆಯ ರೈತನ ಗೋಳನ್ನ ರೈತರು ಯಾರ ಬಳಿ ಹೇಳಬೇಕು ಅನ್ನೋದೆ ಅವರಿಗೆ ತಿಳಿಯುತ್ತಿಲ್ಲ. ಕಳೆದ ವರ್ಷ ಬರಗಾಲದಿಂದಾಗಿ ಮುಂಗಾರು ಬೆಳೆ ನಾಶವಾಗಿ ರೈತನು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ. ಇನ್ನೂ ಇಂಗಾರು ಬೆಳೆಗೆ ಕೂಡಾ ನೀರಿನ ಸಮಸ್ಯೆಯಿಂದಾಗಿ ಬೆಳೆ ಕಳೆದುಕೊಂಡು ರೈತರು ಸಾಲದ ಸುಳಿಯಲ್ಲಿದ್ದಾರೆ.
ಇದನ್ನೂ ಓದಿ; ಮಳೆಗಾಲದಲ್ಲೂ ಬೀದರ್ ಜಿಲ್ಲೆಯ 56 ಕೆರೆಗಳಲ್ಲಿ ನೀರೇ ಇಲ್ಲ, ಚಿಂತಾಕ್ರಾಂತರಾದ ರೈತರು
ಇನ್ನೂ ಕಬ್ಬು ಬೆಳೆಸಿದ ರೈತರು ಕೂಡಾ ನೀರಿನ ಸಮಸ್ಯೆಯಿಂದಾ ಜಿಲ್ಲೆಯಲ್ಲಿ ಶೇಕಡಾ 10 ರಷ್ಟು ಕಬ್ಬು ನೀರಿನ ಕೊರತೆಯಿಂದಾಗಿ ಬಾಡಿ ಹೋಗಿದೆ. ಇದರ ನಡುವೆ ಈಗ ಕಬ್ಬು ಬೆಳೆಗೆ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದ್ದು ಒಂದೆ ರಾತ್ರಿಗೆ ಹತ್ತಾರು ಎಕರೆಯಷ್ಟು ಕಬ್ಬು ತಿಂದು ನಾಶಮಾಡುತ್ತಿದ್ದು ಇದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
60 ಲಕ್ಷಕ್ಕೂ ಹೆಚ್ಚು ನಷ್ಟ
ಇದಕ್ಕೆ ತಾಜಾ ಉದಾಹರಣೆ ಹೇಳಬೇಕೆಂದರೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಬಿ ಗ್ರಾಮದ ರೈತರಾದ ಸಂತೋಷ್ ಮಸ್ಕಲ್, ರಮೇಶ್ ನಾಗರೆಡ್ಡಿ, ಶ್ರೀಕಾಂತ್ ರೆಡ್ಡಿ ಸೇರಿದಂತೆ ಹತ್ತಕ್ಕೂ ಹೆಚ್ಚ ರೈತರ ಸುಮಾರು 20 ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಬೆಳೆಸಿದ್ದ ಕಬ್ಬನ್ನ ತಿಂದು ನಾಶಮಾಡಿವೆ. ಎಕರೆಗೆ ಮೂರು ಲಕ್ಷ ರೂ. ಪ್ರತಿ ವರ್ಷ ಕಬ್ಬು ಆದಾಯ ಬರುತ್ತಿತ್ತು. ಇಂದು ಸುಮಾರು ಎಲ್ಲಾ ರೈತರ 60 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಕಾಡು ಹಂದಿಗಳು ಹಿಂಡಾಗಿ ನುಗ್ಗಿ ಒಂದೆ ರಾತ್ರಿಯಲ್ಲಿ ಇಡೀ ಕಬ್ಬು ಹೊಲವನ್ನೇ ತಿಂದು ಹಾಕಿದ್ದು ನಮಗೆ ಭಾರೀ ನಷ್ಟವಾಗಿದೆ ಎಂದು ರೈತ ನರಸಪ್ಪ ಹೇಳಿದ್ದಾರೆ.
ಈ ನಾಗೂರು ಬಿ ಗ್ರಾಮದ ಸುತ್ತಮುತ್ತಲೂ ಅರಣ್ಯವಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿರುವ ಕಾಡು ಹಂದಿಗಳು ಸಾಕಷ್ಟಿವೆ. ಹಗಲು ಹೊತ್ತಿನಲ್ಲಿ ಕಾಡಿನಲ್ಲಿದ್ದು ರಾತ್ರಿಯಾದರೆ ರೈತರ ಕಬ್ಬು ಹೊಲಕ್ಕೆ ನುಗ್ಗುವ ಕಾಡು ಹಂದಿಗಳು ಕಬ್ಬನ್ನ ಬುಡಸಮೇತ ಕಟ್ ಮಾಡಿ ಸ್ವಲ್ಪ ತಿಂದು ಬಿಡುತ್ತಿವೆ. ಕಬ್ಬು, ಮುಸುಕಿನ ಜೋಳ ಯಾವ ರೈತ ಹಾಕಿದ್ದಾನೆ ಅಲ್ಲಿಗೆ ಹಿಂಡು ಹಿಂಡಾಗಿ ರಾತ್ರಿ ವೇಳೆಯಲ್ಲಿ ನುಗ್ಗಿ ಇಡಿ ಹೊಲ್ಲವನ್ನೇಲ್ಲ ತಿಂದು ಹಾಕುತ್ತಿವೆ. ಈ ಕಾಡು ಪ್ರಾಣಿಗಳ ಕಾಟಕ್ಕೆ ಹೆದರಿ ಕಬ್ಬುನ್ನ ಕೆಲವೂ ರೈತರು ಬಿತ್ತೊದನ್ನೇ ಬಿಟ್ಟಿದ್ದು ಹೆಚ್ಚು ಉದ್ದು, ಸೋಯಾ, ಹೆಸರು ಬೆಳೆಗಳ ಕಡೆಗೆ ರೈತರು ಹೆಚ್ಚಿನ ಒಲವನ್ನ ತೋರುತ್ತಿದ್ದಾರೆ. ಆದರೆ ಕೆಲವು ರೈತರು ಇನ್ನೂ ಕಬ್ಬು, ಮುಸುಕಿನ ಜೋಳ ಬಿತ್ತುತ್ತಿದ್ದಾರೆ ಆದರೆ ಅವರ ಹೊಲಗಳನ್ನೇ ಟಾರ್ಗೆಟ್ ಮಾಡುವ ಕಾಡು ಹಂದಿ ತಿಂದು ಹಾಳು ಮಾಡುತ್ತಿವೆ.
ಒಂದೆ ರಾತ್ರಿಯಲ್ಲಿ ಈ ಕಾಡು ಪ್ರಾಣಿಗಳು ಎಕರೆಗಟ್ಟಲೇ ಬೆಳೆಯನ್ನ ತಿಂದು ನಾಶ ಮಾಡಿಹೋಗುತ್ತಿವೇ ಆದರೆ ರೈತರ ಸಮಸ್ಯೆ ಸ್ಫಂದಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಮ್ಮ ನೋವನ್ನು ಯಾರಿಗೆ ಹೇಳಬೇಕೆಂದು ಇಲ್ಲಿನ ರೈತರ ಅಳಲಾಗಿದೆ. ಈ ಬಗ್ಗೆ ಹತ್ತಾರು ಸಲ ಅರಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಅವರು ಪರಿಹಾರ ಕೊಡುತ್ತೇವೆಂದು ಹೇಳುತ್ತಾರೆ. ಅವರು ಬಂದು ಹೊಲ ಸರ್ವೇ ಮಾಡಿ ಎಕರೆಗೆ 5-10 ಸಾವಿರ ರೂ. ಪರಿಹಾರ ಕೊಡುತ್ತಾರೆ. ಲಕ್ಷಾಂತರ ರೂಪಾಯಿ ನಷ್ಟವಾದರೆ ಅರಣ್ಯ ಇಲಾಖೆಯವರು ಕೋಡೋ ಪರಿಹಾರವೇ ಐದು ಹತ್ತು ಸಾವಿರ ರೂ. ಮಾತ್ರ.
ಇದನ್ನೂ ಓದಿ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಶಿಕ್ಷಕರಿಗೆ ಅನ್ಯಾಯ: ವರ್ಗಾವಣೆ ಕೌನ್ಸಿಲಿಂಗ್ ನಿಲ್ಲಿಸುವಂತೆ ಆಗ್ರಹ
ಪ್ರತಿದಿನ ಹೊಲಕ್ಕೆ ಹೊದರೆ ಸಾಕು ಪ್ರಾಣಿಗಳನ್ನ ಓಡಿಸುವುದೆ ಡ್ಯೂಟಿಯಾಗಿ ಪರಿಣಮಿಸಿದೆ. ರೈತರು ಸಾಲ ಸೋಲ ಮಾಡಿ ಬಿತ್ತಿದ್ದ ಬೆಳೆಯನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಹಾಗೂ ಅರಣ್ಯ ಇಲಾಖೆ ರೈತರ ಸಮಸ್ಯೆಗೆ ಸ್ಫಂದಿಸಿ ರೈತರ ಬೆಳೆಯನ್ನ ಕಾಡು ಪ್ರಾಣಿಯಿಂದ ಕಾಪಾಡಿ ಎಂದು ರೈತರ ಸರಕಾರಕ್ಕೆ ವಿನಂತಿಸಿದ್ದಾರೆ.
ಗಡಿ ಜಿಲ್ಲೆಯ ರೈತರ ಹೊಲದಲ್ಲೀಗ ಕಾಡು ಪ್ರಾಣಿಗಳದ್ದೆ ಕಾರುಬಾರು. ಕಾಡು ಪ್ರಾಣಿಗಳ ತುಂಟಾಟಕ್ಕೆ ರೈತರು ಕಂಗಾಲು. ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕಾವುಲು ಕಾದರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಅಂತಾ ಅರಣ್ಯ ಇಲಾಖೆಯ ಮೊರೆ ಹೋಗುತ್ತಿದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ರೈತರ ಮನವಿಗೆ ಸ್ಫಂದಿಸುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.