ಇನ್ಮುಂದೆ ಅಂತಾರಾಷ್ಟ್ರೀಯ ಏರ್ ಲೈನ್ಸ್ ಗಳಲ್ಲೂ ಸಿಗಲಿವೆ ನಮ್ಮ ಕರುನಾಡಿನ ನಂದಿನಿ ಹಾಲಿನ ಉತ್ಪನ್ನ
ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವಂತ ಸುದ್ದಿ ಇದು. ಅಂತಾರಾಷ್ಟ್ರೀಯ ಮಟ್ಟದಲ್ಲೂ ನಮ್ಮ ಕರ್ನಾಟಕದ ನಮ್ಮ ಕೆಎಂಎಫ್ನ ನಂದಿನಿ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ.
ಬೆಂಗಳೂರು, (ಆಗಸ್ಟ್ 04): ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಸುದ್ದಿಯಲ್ಲಿರುವ ನಂದಿನಿ (Nandini) ಈಗ ಮತ್ತೆ ಸದ್ದು ಮಾಡುತ್ತಿದೆ. ಆದರೆ ಈ ಬಾರಿ ಮತ್ತೆ ಸುದ್ದಿಯಾಗುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರಕ್ಕೆ. ಹೌದು…ನಮ್ಮ ಕರ್ನಾಟಕದ ಕೆಎಂಎಫ್ನ (KMF) ನಂದಿನಿ ಉತ್ಪನ್ನಗಳು ಇನ್ಮುಂದೆ ಆಗಸದಲ್ಲೂ ಸಿಗಲಿವೆ. ಅಂತಾರಾಷ್ಟ್ರೀಯ ವಿಮಾನಗಳಲ್ಲೂ ನಂದಿನಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ಕಂಪನಿಗಳು ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿವೆ. ಈಗಾಗಲೇ ಡೊಮೆಸ್ಟಿಕ್ ಏರ್ ಲೈನ್ಸ್ ಗಳಲ್ಲಿ ಕೆಎಂಎಫ್ ತನ್ನ ನಂದಿನಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ಈಗ ಅಂತಾರಾಷ್ಟ್ರೀಯ ಮಟ್ಟದ ಏರ್ ಸಿಂಗಪೂರ್ ಮತ್ತು ಏರ್ ಫ್ರಾನ್ಸ್, ನಂದಿನಿ ಬಟರ್ ಕಪ್ಗಳನ್ನು ಸಪ್ಲೈ ಮಾಡಲು ಮನವಿ ಮಾಡಿವೆ.
ಸದ್ಯ ಈ ಏರ್ ಲೈನ್ಸ್ ಗಳಲ್ಲಿ ಅಮೂಲ್ ಬಟರ್ ಕಪ್ ಗಳ ಬಳಕೆಯಾಗುತ್ತಿತ್ತು. ಈಗ ನಂದಿನಿ ಪ್ರಾಡಕ್ಟ್ ಗಳಿಗಾಗಿ ವಿಮಾನ ಕಂಪನಿಗಳು ಮನವಿ ಮಾಡಿವೆ. ಇನ್ನೂ ಸರಬರಾಜಿಗೆ ಕೆಎಂಎಫ್ ಕೂಡ ಸಿದ್ದವಿದ್ದು, ಸದ್ಯದಲ್ಲೇ ಪ್ರಾಡಕ್ಟ್ ಗಳನ್ನು ಪೂರೈಕೆ ಮಾಡಲಿದೆ. ಅತ್ತ ವಂದೇ ಭಾರತ್ ರೈಲಿನಲ್ಲೂ ನಂದಿನಿ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಸಂಚಾರ ಮಾಡುವ ಎರಡು ರೈಲುಗಳಿಗೆ ನಂದಿನಿ ಕೋಲ್ಡ್ ಮಿಲ್ಕ್ ಮತ್ತು ಬಟರ್ ಪ್ಯಾಕೆಟ್ ಪೂರೈಕೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಸಹ ಹೆಚ್ಚಿನ ಉತ್ಪನ್ನಗಳಿಗೆ ಬೇಡಿಕೆ ಇಟ್ಟರೆ ಪೂರೈಕೆ ಮಾಡುವುದಾಗಿ ಕೆಎಂಎಫ್ ತಿಳಿಸಿದೆ. ಈ ಮೂಲಕ ನಂದಿನಿ ತನ್ನ ಬ್ರ್ಯಾಂಡ್ ವ್ಯಾಲುವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ.
ಪ್ರಮುಖ ಮಾರ್ಕೆಟಿಂಗ್ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ ‘ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ’ ಪ್ರಕಟಿಸಿದ ವರದಿಯಲ್ಲಿ ನಮ್ಮ ಕರುನಾಡಿನ ನಂದಿನಿ ಮತ್ತಷ್ಟು ಜನಪ್ರಿಯ ಪಡೆದುಕೊಂಡಿದೆ. ಹೌದು…ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಕೆಎಂಎಫ್ನ ನಂದಿನಿ 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದೆ. ದೇಶದಲ್ಲಿರುವ ಜನರು, ಆ ಪೈಕಿ ನಿರ್ದಿಷ್ಟ ಬ್ರ್ಯಾಂಡ್ ಖರೀದಿ ಮಾಡುವ ಜನರ ಸಂಖ್ಯೆ, ಒಂದು ವರ್ಷದಲ್ಲಿ ಅದೇ ಉತ್ಪನ್ನವನ್ನು ಜನರು ಎಷ್ಟು ಬಾರಿ ಖರೀದಿಸಿದ್ದಾರೆ ಎಂಬುದನ್ನು ಪರಿಗಣಿಸಿಕೊಂಡು ಈ ಲೆಕ್ಕಾಚಾರದೊಂದಿಗೆ ಈ ವರದಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ: ಕೆಎಂಎಫ್ ಎಂಡಿ ಸ್ಪಷ್ಟನೆ
ನಂದಿನಿ ಬ್ರಾಂಡ್‌ನಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ KMF ಶೀಘ್ರದಲ್ಲೇ ಚಾಕೊಲೇಟ್ (Chocolate) ಮಾರಾಟವನ್ನು ಪ್ರಾರಂಭಿಸಲಿದೆ ಎಂದು ವರದಿಗಳು ತಿಳಿಸಿವೆ. ನಂದಿನಿ ಬ್ರಾಂಡ್ ಈಗಾಗಲೇ ಕರ್ನಾಟಕ ಮತ್ತು ದೇಶದ ಹಲವು ಭಾಗಗಳಲ್ಲಿ ಪ್ರಸಿದ್ಧವಾಗಿದ್ದು, ನಂದಿನಿ ಬ್ರಾಂಡ್‌ನಡಿಯಲ್ಲಿ ಹಾಲಿನಿಂದ ತಯಾರಿಸಿ ಅನೇಕ ಸಿಹಿತಿಂಡಿಗಳನ್ನು ದೇಶಾದ್ಯಂತ ಮಾರಾಟ ಮಾಡಲಾಗುತ್ತಿದೆ. ಕೆಎಂಎಫ್ ನಂದಿನಿ ಬ್ರಾಂಡ್ ಹೆಸರಿನಲ್ಲಿ ಬಾದಾಮ್ ಬರ್ಫಿ, ಗೋಡಂಬಿ ಬರ್ಫಿ, ಚಾಕೊಲೇಟ್ ಬರ್ಫಿ, ಮೈಸೂರು ಪಾಕ್, ಬೇಸನ್ ಲಾಡು, ಡ್ರೈ ಫ್ರೂಟ್ ಬರ್ಫಿ, ಧಾರವಾಡ ಪೇಡಾ, ಮಿಲ್ಕ್ ಪೇಡಾ, ಜಾಮೂನ್, ರಸಗೊಲ್ಲ ಸೇರಿದಂತೆ ಹಲವು ಸಿಹಿತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ