ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ; ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ
ದಿನಗೂಲಿ ಕಳೆದುಕೊಂಡವರಿಗೆ ಆಹಾರ ಭದ್ರತೆ ಒದಗಿಸಿ. ಗ್ರಾಮಾಂತರ ಪ್ರದೇಶಗಳಿಗೂ ಆಹಾರ ತಲುಪಿಸಿ. ದಾಸೋಹ ಹೆಲ್ಪ್‌ಲೈನ್ ಮರು ಆರಂಭಿಸಲು ಕೋರ್ಟ್ ಸೂಚನೆ ನೀಡಿತ್ತು.
ಬೆಂಗಳೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ವಿತರಣೆಗೆ ಸೂಚನೆ ನೀಡಲಾಗಿದೆ. ಲಾಕ್‌ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಅಂದರೆ, ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಈ ಬಗ್ಗೆ ಆದೇಶಿಸಿದ್ದಾರೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಒದಗಿಸಲು ನಿರ್ದೇಶನ ನೀಡಿದ್ದಾರೆ.
ಲಾಕ್‌ಡೌನ್‌ನಿಂದ ಬಡವರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಆಹಾರ ಭದ್ರತೆ ಒದಗಿಸಲು ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ದಿನಗೂಲಿ ಕಳೆದುಕೊಂಡವರಿಗೆ ಆಹಾರ ಭದ್ರತೆ ಒದಗಿಸಿ. ಗ್ರಾಮಾಂತರ ಪ್ರದೇಶಗಳಿಗೂ ಆಹಾರ ತಲುಪಿಸಿ. ದಾಸೋಹ ಹೆಲ್ಪ್‌ಲೈನ್ ಮರು ಆರಂಭಿಸಲು ಕೋರ್ಟ್ ಸೂಚನೆ ನೀಡಿತ್ತು.
ಬೆಂಗಳೂರಿನಲ್ಲಿರುವ 202 ಇಂದಿರಾ ಕ್ಯಾಂಟೀನ್ ಗಳ ಮೂಲಕ ಮೂರು ಹೊತ್ತೂ ಉಚಿತವಾಗಿ ಸಿದ್ದಪಡಿಸಿದ ಆಹಾರ ನೀಡಲಾಗುವುದು. ಅಲ್ಲದೇ ಎನ್‌ಜಿಒಗಳ ಮೂಲಕವೂ ಅಗತ್ಯವಿರುವ ಪ್ರದೇಶಗಳಿಗೆ ಆಹಾರ ಒದಗಿಸಲಾಗುವುದು. ಪಡಿತರ ಚೀಟಿದಾರರಿಗೆ 10 ಕೆಜಿ ಆಹಾರ ಧಾನ್ಯ ನೀಡಲಾಗುವುದೆಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು, ಬಡವರು ಜೀವನಾಧಾರ ಕಳೆದುಕೊಂಡಿದ್ದಾರೆ. ಅಂತಹವರಿಗೆ ಆಹಾರ ಭದ್ರತೆ ಒದಗಿಸಬೇಕು. ಗ್ರಾಮಾಂತರ ಪ್ರದೇಶದ ಬಡವರಿಗೂ ಆಹಾರ ತಲುಪಿಸಬೇಕು. ದಾಸೋಹ ಹೆಲ್ಪ್‌ಲೈನ್ ಮರು ಆರಂಭಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್ ಆದೇಶದ ಬಳಿಕ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯಾಗುತ್ತಿದೆ ಹೈಕೋರ್ಟ್ ಆದೇಶದ ನಂತರ ರಾಜ್ಯಕ್ಕೆ 1135 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಜಿಲ್ಲಾವಾರು ಆಕ್ಸಿಜನ್ ಹಂಚಿಕೆಗೂ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಹೈಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಂಡಿದ್ದು, ನಾಳೆ ಈ ಸಂಬಂಧ ಅಡ್ವೊಕೆಟ್ ಜನರಲ್ ರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸುವುದಾಗಿ ಕೇಂದ್ರ ಸರ್ಕಾರದ ಎಎಸ್‌ಜಿ ಎಂ.ಬಿ. ನರಗುಂದ್ ಹೈಕೋರ್ಟ್ಗೆ ತಿಳಿಸಿದ್ದಾರೆ. ಲಾಕ್ ಡೌನ್ ವೇಳೆ ಪೊಲೀಸರ ಲಾಠಿ ಚಾರ್ಜ್ ಬಗ್ಗೆಯೂ ಪ್ರಸ್ತಾಪಿಸಿದ ಹೈಕೋರ್ಟ್ ಪೊಲೀಸರು ಸಂಯಮ ವಹಿಸಬೇಕು. ಅನಗತ್ಯವಾಗಿ ಲಾಠಿ ಚಾರ್ಜ್ ಮಾಡಬಾರದು. ಸೋಂಕಿತರ ಮೇಲೂ ಲಾಠಿಚಾರ್ಜ್ ಮಾಡಿರುವುದು ವರದಿಯಾಗಿದೆ. ಈ ಬಗ್ಗೆ ಪೊಲೀಸರಿಗೆ ಸೂಕ್ತ ಮಾರ್ಗಸೂಚಿ ನೀಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಸಂಪೂರ್ಣ ವ್ಯಾಕ್ಸಿನೇಶನ್ಗೆ ನೀಲನಕ್ಷೆ ರೂಪಿಸಲು ಹೈಕೋರ್ಟ್ ಸೂಚನೆ
ಕೇಂದ್ರ ಸರ್ಕಾರಕ್ಕೆ ಮುಖಭಂಗ; ಆಕ್ಸಿಜನ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ
Published On - 3:32 pm, Tue, 11 May 21