ಟಿವಿ9 ಕಾರ್ಯಾಚರಣೆಯಲ್ಲಿ ಕರ್ಮಕಾಂಡ ಬಯಲು; ಆರೋಗ್ಯ ಸಚಿವರೇ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ಕಡೆ ಕಣ್ಣಿಟ್ಟು ನೋಡಿ

ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯ ಹೊರಗೆ ಕಂಡುಬರುವ ಸ್ಥಿತಿ ಒಳಗಿನದ್ದಕ್ಕಿಂತ ಅಧ್ವಾನ.. ಆಸ್ಪತ್ರೆ ಆವರಣದಲ್ಲಿಯೇ ಹಂದಿಗಳ ಓಡಾಟ. ಕೋವಿಡ್ ಸೋಂಕಿತರ ಐಸಿಯು ವಾರ್ಡ್ ಗೆ ಭೇಟಿ ಕೊಟ್ಟು ವಿಡಿಯೋ ಮಾಡುತ್ತಿದ್ದರೂ ಇಲ್ಲಿ ಪ್ರಶ್ನೆ ಮಾಡೋರೆ ಇಲ್ಲ! ಈ ಬಗ್ಗೆ ಪ್ರಶ್ನೆ ಮಾಡೋಣ ಅಂದರೆ ಚೀಫ್ ಮೆಡಿಕಲ್ ಆಫೀಸರ್ ರಜೆಯಲ್ಲಿದ್ದಾರಂತೆ! 

ಟಿವಿ9 ಕಾರ್ಯಾಚರಣೆಯಲ್ಲಿ ಕರ್ಮಕಾಂಡ ಬಯಲು; ಆರೋಗ್ಯ ಸಚಿವರೇ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ಕಡೆ ಕಣ್ಣಿಟ್ಟು ನೋಡಿ
ಟಿವಿ9 ಕಾರ್ಯಾಚರಣೆಯಲ್ಲಿ ಕರ್ಮಕಾಂಡ ಬಯಲು; ಆರೋಗ್ಯ ಸಚಿವರೇ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ಕಡೆ ಕಣ್ಣಿಟ್ಟು ನೋಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 30, 2021 | 12:32 PM

ಬಳ್ಳಾರಿ: ಕೊರೊನಾ ಪೆಡಂಭೂತದ ಸಮ್ಮುಖದಲ್ಲಿ ಮಾಸ್ಕ್​ ಹಾಕ್ಕಳೀ… ಸಾಮಾಜಿಕ ಅಂತರ ಕಾಪಾಡ್ಕಳೀ… ಐಸಿಯು ಗೆ ಹೋದವರನ್ನು ಚೆನ್ನಾಗಿ ನೋಡ್ಕಳ್ಳೀ… ಇದಿಷ್ಟೇ ಸೂತ್ರ ಪಾಲಿಸಿದರೆ ಸಾಕು ಕೊರೊನಾ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್​ ಕಳಿಸಲು. ಆದರೆ ಇದನ್ನೆಲ್ಲ ಚಾಚೂತಪ್ಪದೇ ಪಾಲಿಸಬೇಕಾದ ಆಸ್ಪತ್ರೆಗಳಲ್ಲಿ ಅಸಡ್ಡೆ ನಿರ್ಲಕ್ಷ್ಯಗಳು ಮನೆ ಮಾಡಿದರೆ ಸೋಕಿತರು ಮನೆಗೆ ವಾಪಸು ಬರುವುದು ಹೇಗೆ? ಆದರೂ ಇಂತಹದ್ದೊಂದು ಆಸ್ಪತ್ರೆ ಹಗರಿಬೊಮ್ಮನಹಳ್ಳಿಯಲ್ಲಿದೆ ಎಂಬುದೇ ಆತಂಕದ ವಿಚಾರ. ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. 

ಹಗರಿಬೊಮ್ಮನಹಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ  ಎಲ್ಲೆ ಮೀರಿದೆ. ಇಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ. ಐಸಿಯು ವಾರ್ಡ್ ಗೆ ಯಾರು ಬೇಕಾದರೂ ಕೈಬೀಸಿಕೊಂಡು ರಾಜಾರೋಷವಾಗಿ ಹೋಗಬಹುದು-ಬರಬಹುದು. ಇದನ್ನು ಕಂಡರೆ ಯಾರಿಗೇ ಆಗಲಿ ರೋಷ ಉಕ್ಕದೇ ಇರದು.

ಇಲ್ಲಿ ರೋಗಿಯು ಮಾಸ್ಕ್ ಹಾಕಿಲ್ಲ, ಸಂಬಂಧಿಕರು ಮಾಸ್ಕ್ ಹಾಕೊಲ್ಲ. ಇಲ್ಲಿ ತಡೆಯುವವರೂ ಇಲ್ಲ; ಪ್ರಶ್ನೆ ಮಾಡುವವರು ಇಲ್ಲ! ಕೋವಿಡ್ ಸೋ‌ಂಕಿತರ ವಾರ್ಡ್ ಗೆ ಮನೆಯವರ ಎಂಟ್ರಿ, ಮೂರು ಹೊತ್ತು ಊಟ ತಿಂಡಿ ಕೊಡಲು ಬಂದು ಹೋಗುವ ಮನೆಯವರು, ಮನೆಯವರು ಆಸ್ಪತ್ರೆಗೆ ಬಂದು ರೋಗಿಯನ್ನು ಮಾತಾಡಿಸಿ ಊರೆಲ್ಲ ಓಡಾಡುವುದು, ಪಕ್ಕದಲ್ಲೇ ಗರ್ಭಿಣಿಯರ ವಾರ್ಡ್ ಇದ್ರು ಡೊಂಟ್ ಕೇರ್! ಇದು ಹಗರಿಬೊಮ್ಮನಹಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಂಡುಬರುವ ದುಃಸ್ಥಿತಿ.

ಇನ್ನು, ಆಸ್ಪತ್ರೆಯ ಹೊರಗೆ ಕಂಡುಬರುವ ಸ್ಥಿತಿ ಇದಕ್ಕಿಂತ ಅಧ್ವಾನ.. ಆಸ್ಪತ್ರೆ ಆವರಣದಲ್ಲಿಯೇ ಹಂದಿಗಳ ಓಡಾಟ. ಕೋವಿಡ್ ಸೋಂಕಿತರ ಐಸಿಯು ವಾರ್ಡ್ ಗೆ ಭೇಟಿ ಕೊಟ್ಟು ವಿಡಿಯೋ ಮಾಡುತ್ತಿದ್ದರೂ ಇಲ್ಲಿ ಪ್ರಶ್ನೆ ಮಾಡೋರೆ ಇಲ್ಲ! ಈ ಬಗ್ಗೆ ಪ್ರಶ್ನೆ ಮಾಡೋಣ ಅಂದರೆ ಚೀಫ್ ಮೆಡಿಕಲ್ ಆಫೀಸರ್ ರಜೆಯಲ್ಲಿದ್ದಾರಂತೆ!

ತಾಲ್ಲೂಕು ವೈದ್ಯಾಧಿಕಾರಿ ಡಾ. ಶಿವರಾಜ್ ರನ್ನು ಪ್ರಶ್ನೆ ಮಾಡಿದರೆ ಮನೆಯವರಿಗೆ ಮಾತ್ರ ಒಳಗೆ ಹೋಗಲು ಅವಕಾಶ ಕೊಟ್ಟಿದ್ದಿವಿ. ಬೇರೆಯವರಿಗೆ ಎಂಟ್ರಿ ಇಲ್ಲ. ಅಲ್ಲಿ ಸೆಕ್ಯುರಿಟಿ ಗಾರ್ಡ್ ಇದ್ದಾರೆ ನೋಡಿಕೊಳ್ಳೋಕೆ ಅಂತಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಕೋವಿಡ್ ಗೆ 41 ಮಂದಿ ಬಲಿಯಾಗಿದ್ದಾರೆ. ಇದೀಗ ನಾಲ್ಕು ಹೆಣ್ಣುಮಕ್ಕಳ ತಂದೆ ಕೋವಿಡ್ ಗೆ ಬಲಿಯಾಗಿದ್ದಾರೆ.  ನನ್ನ ಗಂಡನಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ಪ್ರಾಣ ಹೋಗಿದೆ ಅಂತಾ ಗಂಡನನ್ನು ಕಳೆದುಕೊಂಡು ಕಣ್ಣೀರಿಡುತ್ತಾ ಮಹಿಳೆಯೊಬ್ಬರು ಆಕ್ರಂದನ ವ್ಯಕ್ತಪಡಿಸಿದ್ದಾರೆ.

ನಾವು ಸಿಸ್ಟರ್ ಗೆ ಹೇಳಿದ್ದಿವಿ, ಏನ್ ಮಾಡೋದು ಅಂದ್ರು ಡಾಕ್ಟರ್.  ಸಿಸ್ಟರ್​ಗೆ ಕೇಳಿದರೆ ಡಾಕ್ಟರ್ ಹೇಳಿದ ಹಾಗೆ ಮಾಡ್ತೀವಿ, ನೀವು ಡಾಕ್ಟರ್ ನ ಕೇಳಿಕೊಳ್ಳಿ ಹೋಗಿ ಅಂದರು. ಮೆಡಿಸಿನ್ ಕೊಡ್ರಿ ಅಂದರೂ ಸರಿಯಾಗಿ ಸ್ಪಂದಿಸಲಿಲ್ಲ. ಆಕ್ಸಿಜನ್ ಖಾಲಿ ಆಗಿದೆ ಚೆಕ್ ಮಾಡಿ ಅಂತಾ ಹೇಳಿದರೂ ಯಾರು ಬಂದು ನೋಡಲಿಲ್ಲ. ನಾಲ್ಕು ಜನ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ನಾನು ಏನ್ ಮಾಡಲಿ ಯಪ್ಪಾ  ಅಂತ ಮಹಿಳೆಯೊಬ್ಬರು ಕಣ್ಣೀರು ಹಾಕಿದರು.

ಇನ್ನು ಹಗರಿಬೊಮ್ಮನಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ತಜ್ಞ ಡಾ.‌ ರಾಜೇಶ್ ನಾಯ್ಕ್ ನಾರ್ಮಲ್ ಡೆಲಿವರಿ ಇದ್ರು ಮಾಡೋದಿಲ್ಲ ಸಿಜೆರಿಯನ್ ಮಾಡ್ತಿದ್ದಾರೆ.  ಜನರ ಬಳಿ ಡಾ. ರಾಜೇಶ್ ನಾಯ್ಕ್ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಾರೆ ಅಂತಾ ಆರೋಪ ಕೇಳಿಬರುತ್ತದೆ. ಹತ್ತರಿಂದ ಇಪ್ಪತ್ತು ಸಾವಿರದವರೆಗೆ ಡಿಮ್ಯಾಂಡ್ ಮಾಡ್ತಾರೆ. ಹಣ ಕೊಟ್ಟಿಲ್ಲ ಅಂದರೆ ಅವರಿಗೆ ಹೊಸಪೇಟೆ‌ ಅಥವಾ ಕೊಪ್ಪಳ ಆಸ್ಪತ್ರೆಗೆ ರೆಫರ್ ಮಾಡ್ತಾರೆ.

ಅಲ್ಲಿಗೆ ಹೋದ್ರೆ ನಿಮ್ಮ ಆಸ್ಪತ್ರೆ ಸತ್ತು ಹೋಗಿದೆಯಾ?  ಅಂತ ಪ್ರಶ್ನೆ ಮಾಡ್ತಾರೆ.  ಈ‌ ಬಗ್ಗೆ ತಾಲ್ಲೂಕು ಆಡಳಿತಾಧಿಕಾರಿ ಮತ್ತು ಟಿಎಚ್ಓಗೂ ದೂರು ನೀಡಿದ್ದಿವಿ. ಆದರೆ ಇದುವರೆಗೂ ಏನೂ ಪ್ರಯೋಜನವಾಗಿಲ್ಲ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹತ್ತು ಮಾತ್ರೆಗಳನ್ನು ಬರೆದು ಕೊಟ್ಟರೆ ಆಸ್ಪತ್ರೆ ಸಿಬ್ಬಂದಿ ಎರಡ್ಮೂರು ಮಾತ್ರೆಗಳನ್ನು ಮಾತ್ರ ಕೊಡ್ತಾರೆ. ಆರೋಗ್ಯ ಸಚಿವರು ಕಣ್ಮುಚ್ಚಿ ಕುಳಿತಿದ್ದಾರಾ? ಆರೋಗ್ಯ ಸಚಿವರಲ್ಲಿ ಮನವಿ ಮಾಡ್ತಿವಿ.. ಡಾ. ರಾಜೇಶ್ ನಾಯ್ಕ್ ವಿರುದ್ಧ ಸೂಕ್ತವಾದ ಕ್ರಮವಹಿಸಿಬೇಕು ಅನ್ನುತ್ತಾರೆ ಸ್ಥಳೀಯರು.

ಪ್ರತಿದಿನ ಡಾ. ರಾಜೇಶ್ ನಾಯ್ಕ್ ಎರಡ್ಮೂರು ಲಕ್ಷ ಹಣ ತೆಗೆದುಕೊಂಡು ಹೋಗ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಅಂತಾ ಬಂದ್ರೆ ಇಲ್ಲಿ ಬಡವರನ್ನು ಸುಲಿಗೆ ಮಾಡ್ತಿದ್ದಾರೆ. ಆರೋಗ್ಯ ಸಚಿವರೇ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ಕಡೆ ಕಣ್ಣಿಟ್ಟು ನೋಡಿ ಎಂದು ಶಂಶಾದ್ ಬೇಗಂ ಎಂಬುವವರು ಡಾ. ರಾಜೇಶ್ ನಾಯ್ಕ್ ವಿರುದ್ಧ ಆರೋಪ ಮಾಡಿದ್ದಾರೆ.

(Hagaribommanahalli taluk hospital irregularities during corona times draw the attention of heath minister dr k sudhakar)